RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ರಮೇಶ ಜಾರಕಿಹೊಳಿ ಅವರನ್ನು ಈ ಸಲವು ಗೆಲ್ಲಿಸಿಯೇ ಸಿದ್ದ : ಮುಸ್ಲಿಂ ಮುಖಂಡರ ವಾಗ್ದಾನ

ಗೋಕಾಕ:ರಮೇಶ ಜಾರಕಿಹೊಳಿ ಅವರನ್ನು ಈ ಸಲವು ಗೆಲ್ಲಿಸಿಯೇ ಸಿದ್ದ : ಮುಸ್ಲಿಂ ಮುಖಂಡರ ವಾಗ್ದಾನ 

ರಮೇಶ ಜಾರಕಿಹೊಳಿ ಅವರನ್ನು ಈ ಸಲವು ಗೆಲ್ಲಿಸಿಯೇ ಸಿದ್ದ : ಮುಸ್ಲಿಂ ಮುಖಂಡರ ವಾಗ್ದಾನ

ಗೋಕಾಕ ಮಾ 2 : ವಿಧಾನಸಭಾ ಚುನಾವಣೆಯಲ್ಲಿ ಗೋಕಾಕ ಮತಕ್ಷೇತ್ರದಲ್ಲಿ ಈ ಬಾರಿ ಮುಸ್ಲಿಂ ಬಾಂಧವರು ರಮೇಶ ಜಾರಕಿಹೊಳಿ ಅವರನ್ನು ಅದ್ಭುತ ಪೂರ್ವವಾಗಿ ಗೆಲ್ಲಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಬಿಜೆಪಿ ವತಿಯಿಂದ ಕೊಣ್ಣೂರ ರಂಗಮಂದಿರ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಗೋಕಾಕ ಮತಕ್ಷೇತ್ರದ ಬಿಜೆಪಿ ಅಲ್ಪಸಂಖ್ಯಾತ ಕಾರ್ಯಕರ್ತರ ಸಮಾವೇಶದಲ್ಲಿ ಈ ವಾಗ್ದಾನ ಮಾಡಿದರು.
ರಮೇಶ ಜಾರಕಿಹೊಳಿ ಅವರನ್ನು ಈ ಸಲವು ಗೆಲ್ಲಿಸಿಯೇ ಸಿದ್ದ. ಯಾವುದೇ ಕಾರಣಕ್ಕೂ ಪಕ್ಷ ಭೇದವಿಲ್ಲದೆ ಜಾರಕಿಹೊಳಿ ಸಹೋದರರ ಗೆಲುವಿಗೆ ಮುಸ್ಲಿಂ ಬಾಂಧವರು ಸದಾ ಬೆಂಬಲ ನೀಡಬೇಕು ಎಂದು ಸಭೆಯಲ್ಲಿ ಮಾತನಾಡಿದ ಅನೇಕ ಮುಸ್ಲಿಂ ಮುಖಂಡರು ಮನವಿ ಮಾಡಿದರು.
ಶಾಸಕರ ರಮೇಶ ಜಾರಕಿಹೊಳಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ನಾನು ಗೋಕಾಕನಲ್ಲಿ ಸತತವಾಗಿ 5ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇನೆ. ಕಾಂಗ್ರೆಸ್ ಪಕ್ಷ ಬಿಡುವಾಗ ಮುಸ್ಲಿಂ ಬಾಂಧವರ ಜೊತೆ ಮಾತುಕತೆ ನಡೆಸಿದ್ದೆ. ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳಿಂದ ಇದ್ದ ನನಗೆ ಬಿಜೆಪಿ ಹೊಂದುವುದಿಲ್ಲ ಎಂಬ ಹೆದರಿಕೆ ಇತ್ತು. ಆದರೆ, ನಂತರದ ದಿನಗಳಲ್ಲಿ ಆ ಬಗ್ಗೆ ಯೋಚಿಸದೆ ಬಿಜೆಪಿ ಪ್ರವೇಶ ಮಾಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಇರುವಾಗ ನನಗೆ ಮಹಾ ನಾಯಕರು ಅನ್ಯಾಯ ಮಾಡಿದರು. ಆತ್ಮಹತ್ಯೆ ಮಾಡಿಕೊಳ್ಳುವುದು ಅμÉ್ಟೀ ನನಗೆ ಉಳಿದಿತ್ತು. ಆದರೆ ನನಗೆ ಇಲ್ಲಿನ ಜನ ಮಾತ್ರ ಎಂದಿಗೂ ಕೈ ಬಿಡಲಿಲ್ಲ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ನನಗೆ ಮತ್ತೆ ವಿರೋಧಿಗಳ ಎದುರು ಎದೆ ಉಬ್ಬಿಸಿ ಮಾತನಾಡುವ ಶಕ್ತಿಯನ್ನು ಇಲ್ಲಿನ ಜನ ನೀಡಿದ್ದಾರೆ ಎಂದು ಭಾವುಕರಾದರು.
ಬಿಜೆಪಿ ಮುಸ್ಲಿಂ ವಿರೋಧಿ ಎಂಬ ತಪ್ಪು ಕಲ್ಪನೆಯನ್ನು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ ನನ್ನ ತಲೆಯಲ್ಲಿ ಅಲ್ಲಿನ ನಾಯಕರು ತುಂಬಿದ್ದರು. ಆದರೆ, ಬಿಜೆಪಿಗೆ ಬಂದ ನಂತರ ಅಂತಹ ತಪ್ಪು ಕಲ್ಪನೆ ಸಂಪೂರ್ಣವಾಗಿ ದೂರವಾಗಿದೆ. ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರ ನಿಜವಾದ ಶತ್ರು ಎಂದರೆ ಕಾಂಗ್ರೆಸ್ ಪಕ್ಷ. ಜಗತ್ತಿನಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಪಕ್ಷ ಎತ್ತಿಕಟ್ಟಿತು. ಪ್ರಧಾನಿ ನರೇಂದ್ರ ಮೋದಿ ಅವರೇ ಮುಸ್ಲಿಂ ಸಮಾಜವನ್ನು ಕೊಂಡಾಡಿದ್ದಾರೆ. ಭಾರತದಲ್ಲಿರುವ ಮುಸ್ಲಿಂ ಬಾಂಧವರು ಯಾರು ಕೆಟ್ಟವರಲ್ಲ ಎಂದು ಸ್ವತಃ ಪ್ರಧಾನಿಯೇ ಹೇಳಿದ್ದಾರೆಂದರು.
ಬಿಜೆಪಿ ನೇರವಾಗಿ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಹಾಗಲ್ಲ. ಅಲ್ಪಸಂಖ್ಯಾತರಿಗೆ ಸದಾ ವಂಚಿಸಿದೆ ಎಂದು ನೇರ ಆರೋಪ ಮಾಡಿದರು. ಬಿಜೆಪಿ ಪರವಾಗಿ ಮುಸ್ಲಿಂ ಬಾಂಧವರು ನಿಲ್ಲಬೇಕು. ಈ ಸಂದೇಶ ಗೋಕಾಕನಿಂದ ಹೊರಹೊಮ್ಮಬೇಕು. ಮುಸ್ಲಿಂ ವಿರೋಧಿಯಾಗಿರುವ ಕಾಂಗ್ರೆಸ್ಸನ್ನು ನೀವೆಲ್ಲರೂ ಮುಂದಿನ ದಿನಗಳಲ್ಲಿ ಒಡೆದು ಆಳುವ ನೀತಿ ಅಳವಡಿಸಿಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ಧಿಕ್ಕರಿಸಬೇಕು. ಗೋಕಾಕನ ಈ ಇತಿಹಾಸ ಇಡೀ ದೇಶಕ್ಕೆ ಗುರುತಿಸುವ ಕೆಲಸವನ್ನು ನೀವು ಈಗ ಮಾಡಬೇಕಾಗಿದೆ. ಬಿಜೆಪಿ ಗೆಲುವಿಗೆ ಎಸ್‍ಸಿ/ಎಸ್‍ಟಿ, ಮುಸ್ಲಿಂ ಬಾಂಧವರು ಹಾಗೂ ಇತರ ಸಮಾಜಗಳು ಸಂಕಲ್ಪಿಸಬೇಕು ಎಂದು ಮನವಿ ಮಾಡಿದರು.
ಮುಸ್ಲಿಮರನ್ನು ಕೇವಲ ಮತ ಗಳಿಗಾಗಿ ಬಳಸಿಕೊಂಡಿರುವ ಆ ಪಕ್ಷವನ್ನು ಅಲ್ಪಸಂಖ್ಯಾತ ಮುಸ್ಲಿಂ ಬಾಂಧವರು ಸಂಪೂರ್ಣವಾಗಿ ತ್ಯಜಿಸಬೇಕು. ಗೋಕಾಕನಲ್ಲಿ ಹಿಂದೂಗಳು-ಮುಸ್ಲಿಂರು ಎಂಬ ಯಾವ ಬೇಧಭಾವ ಇಲ್ಲ ಎಂಬ ವಾತಾವರಣವಿದೆ. ನಾವೆಲ್ಲರೂ ಸೇರಿ ಮುಂದೆ ಒಳ್ಳೆಯ ಕೆಲಸವನ್ನು ಮಾಡೋಣ. ಬೆಳಗಾವಿಯಲ್ಲಿ ಬುಧವಾರ ಕಾಂಗ್ರೆಸ್ಸಿಗರು ನನ್ನ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಕಠಿಣ ಶಬ್ದಗಳಲ್ಲಿ ಉತ್ತರ ನೀಡುವೆ. ಈ ಸಂದರ್ಭದಲ್ಲಿ ಇಲ್ಲಿನ ಅತ್ಯಂತ ಸುಂದರ ಕಾರ್ಯಕ್ರಮದಲ್ಲಿ ಉತ್ತರ ನೀಡುವುದು ಸಮಂಜವಲ್ಲ ಎಂದರು.
ಬಿಜೆಪಿಯನ್ನು ಮಾತ್ರ ನೀವು ಎಂದಿಗೂ ದ್ವೇಷ ಮಾಡಬೇಡಿ. ನನ್ನನ್ನು ಸಚಿವರನ್ನಾಗಿ ಮಾಡದೇ ಇರುವುದಕ್ಕೆ ಸಹಾ ಕಾರಣವಿದೆ. ಪಕ್ಷದ ಕೆಲ ನಿರ್ಧಾರದ ಮೂಲಕ ತೆಗೆದುಕೊಳ್ಳಲಾಗುತ್ತದೆ. ಈ ಬಗ್ಗೆ ನಿಮಗೆ ಯಾವುದೇ ಚಿಂತೆ ಬೇಡ. ನಾನು ಕೆಲ ಸಂದರ್ಭಗಳಲ್ಲಿ ಭಾವನಾತ್ಮಕವಾಗಿ ಮಾತನಾಡುತ್ತಾನೆ. ಒಟ್ಟಾರೆ ನಿಮ್ಮ ಹಿತ ಚಿಂತನೆ ಹಾಗೂ ನಿಮ್ಮ ಪರವಾಗಿ ಸದಾ ಕೆಲಸ ಮಾಡುವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನಮ್ಮ ಗೆಲುವು ಆಗಬೇಕು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಕೆಲಸ ಆಗಬೇಕು. ನೀವು ನನ್ನ ಮೇಲೆ ವಿಶ್ವಾಸ ಬಿಡಿ. ನಾನು ಈ ಹಿಂದೆ ನಿಮ್ಮ ಕೈಬಿಟ್ಟಿಲ್ಲ. ಮುಂದಿನ ದಿನಗಳಲ್ಲಿ ಸಹ ನಿಮ್ಮ ಕೈ ಬಿಡಲಾರೆ ಎಂದು ವಾಗ್ದಾನ ಮಾಡಿದರು.
ವೇದಿಕೆಯ ಮೇಲೆ ಶಬ್ಬೀರ ದೇಸಾಯಿ, ಸಮೀರ ಭೋಜಗಾರ, ರಿಯಾಜ ಯರಗಟ್ಟಿ, ಪರವೇಜ ನಾಯ್ಕ, ಮುನ್ನಾ ಸೌದಾಗರ, ಮಹ್ಮದ ಮೋಮಿನ, ಯುನೂಸ್ ಶೇಕ, ದಸ್ತಗೀರ ರಾಜೆಖಾನ, ಇಮ್ರಾನ ಶಿವಾಪೂಪೂರಿ, ಶೌಕತ ಕಬ್ಬೂರ, ಸದರುದ್ದಿನ ಮಕಾನದಾರ, ಕುತ್ಬುದ್ದಿನ ತಟಗಾರ, ನೂರಹ್ಮದ ದೇಸಾಯಿ, ಅಬ್ದುಲ ಬಾಗವಾನ, ತಾಜೋದ್ದಿನ ಜಮಾದಾರ, ಮಲೀಕ ಅರಳಿಕಟ್ಟಿ, ಶಮಶುದ್ದಿನ ಖಾಜಿ, ಮುಗುಟಸಾಬ ಖಾಜಿ, ಲಾಲಸಾಬ ಮುಲ್ಲಾ, ಇಸ್ಮಾಯಿಲ ಪೀರಜಾದೆ, ಜಾಫರ ದೇಸಾಯಿ, ಬಾಬಾಜಾನದೇಸಾಯಿ, ಅಲ್ಲಾವುದ್ದಿನ ಪೀರಜಾದೆ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರಮುಖ ಶಪಿ ಜಮಾದಾರ ಸೇರಿದಂತೆ ಅನೇಕರು ಇದ್ದರು.

Related posts: