ಗೋಕಾಕ:ಅಂಕಲಗಿ ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಗುರುಸಿದ್ದ ಸ್ವಾಮಿಜೀ ವಿಧಿವಶ
ಅಂಕಲಗಿ ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಗುರುಸಿದ್ದ ಸ್ವಾಮಿಜೀ ವಿಧಿವಶ
ಗೋಕಾಕ ಏ 3 : ತಾಲೂಕಿನ ಅಂಕಲಗಿ ಗ್ರಾಮದ ಶ್ರೀ ಅಡಿವಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಗುರುಸಿದ್ದ ಸ್ವಾಮೀಜಿ (78) ಸೋಮವಾರ ಬೆಳಗಿನ ಜಾವ 4 ಘಂಟೆಗೆ ಲಿಂಗೈಕರಾದರು. ಲಿಂಗೈಕ ಶ್ರೀ ಗುರುಸಿದ್ದ ಸ್ವಾಮಿಗಳ ಅಂತ್ಯಕ್ರಿಯೆ ಸಕಲ ವಿಧಿವಿಧಾನಗಳೊಂದಿಗೆ ಸಾಯಂಕಾಲ 5 ಘಂಟೆಗೆ ಶ್ರೀಮಠದ ಆವರಣದಲ್ಲಿ ಜರುಗಿತು.
ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಲಿಂಗೈಕ ಶ್ರೀ ಗುರುಸಿದ್ದ ಸ್ವಾಮಿಗಳು ಕುಂದರನಾಡು ಸೇರಿದಂತೆ ರಾಜ್ಯಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿದರು.
ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ : ಸೋಮವಾರ ಬೆಳಗ್ಗೆ ವಿಧಿವಶರಾದ ಶ್ರೀ ಗುರುಸಿದ್ದ ಸ್ವಾಮಿಗಳ ಪಾರ್ಥಿವ ಶರೀರವನ್ನು ಶ್ರೀಮಠದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿತ್ತು . ಬೆಳಗಿನಿಂದಲೆ ಅಂಕಲಗಿ ಸೇರಿದಂತೆ ತಾಲೂಕಿನ, ಜಿಲ್ಲೆಯಾದ್ಯಂತ ಸಾವಿರಾರು ಭಕ್ತರು ಮಠಕ್ಕೆ ಬಂದು ಶ್ರೀಗಳ ಅಂತಿಮ ದರ್ಶನ ಪಡೆದರು. ಗೋಕಾಕ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮೀಜಿ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಸೇರಿದಂತೆ ಅನೇಕ ಗಣ್ಯರು ಅಂಕಲಗಿ ಗ್ರಾಮಕ್ಕೆ ಭೇಟಿನೀಡಿ ಲಿಂಗೈಕ ಶ್ರೀ ಗುರುಸಿದ್ದ ಸ್ವಾಮಿಗಳ ಅಂತಿಮ ದರ್ಶನ ಪಡೆದುಕೊಂಡರು.
ವಯೋಸಹಜ ಸ್ಥಿತಿಯ ಕಾರಣ ಕಳೆದ ಸುಮಾರು 11 ವರ್ಷಗಳ ಹಿಂದೆ ತಮ್ಮ ಉತ್ತರಾಧಿಕಾರಿ ಮಾಡಲು ಒಬ್ಬ ಸ್ವಾಮೀಜಿಯನ್ನು ಮಠಕ್ಕೆ ಕರೆದುಕೊಂಡು ಬಂದು ತಮ್ಮ ಸೇವೆಯ ಜೊತೆಗೆ ಕುಂದರನಾಡಿನಾದ್ಯಂತ ಭೀಕ್ಷೆ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಇತ್ತೀಗಷ್ಟೆ ಇಬ್ಬರೂ ಸ್ವಾಮೀಜಿಗಳ ನಡುವೆ ವಯಮನಸ್ಸು ಮೂಡಿದ್ದರ ಪರಿಣಾಮ ಇಬ್ಬರೂ ಸ್ವಾಮೀಜಿಗಳು ಮಠವನ್ನು ತೊರೆದಿದ್ದರು ಎಂದು ಹೇಳಲಾಗುತ್ತಿದ್ಥು, ಶ್ರೀ ಗುರುಸಿದ್ದ ಸ್ವಾಮೀಜಿಗಳ ವಿಧಿವಶರಾದ ಪರಿಣಾಮ ಅಂಕಲಗಿಯ ಶ್ರೀ ಅಡವಿಸಿದ್ದೇಶ್ವರ ಮಠಕ್ಕೆ ಮುಂದಿನ ಪೀಠಾಧಿಪತಿ ಯಾರು ಎಂಬ ಗುಸುಗುಸು ಚರ್ಚೆಗಳು ಅಂಕಲಗಿಯಲ್ಲಿ ಜೋರಾಗಿ ನಡೆದಿವೆ.