ಬೆಳಗಾವಿ:ಬೆಳಗಾವಿ ಗ್ರಾಮೀಣ ಚುನಾವಣೆ ಫಲಿತಾಂಶ 2023: ಬಿಜೆಪಿಗೆ ಹಿನ್ನೆಡೆ
ಬೆಳಗಾವಿ ಗ್ರಾಮೀಣ ಚುನಾವಣೆ ಫಲಿತಾಂಶ 2023: ಬಿಜೆಪಿಗೆ ಹಿನ್ನೆಡೆ
ಬೆಳಗಾವಿ ಮೇ, 13: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ನಾಗೇಶ್ ಅಣ್ಣಪ್ಪ ಮನ್ನೋಳ್ಕರ್ ಅವರು ಕಾಂಗ್ರೆಸ್‌ನ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕಣಕ್ಕಿಳಿದಿದ್ದಾರೆ. ಇನ್ನು ಜೆಡಿಎಸ್‌ನಿಂದ ಶಂಕರ್‌ಗೌಡ ಪಾಟೀಲ್ ಅಖಾಡಕ್ಕಿಳಿದಿದ್ದರು. ಈ ಕ್ಷೇತ್ರದಲ್ಲಿ 2,5,7241 ಮತದಾರರಿದ್ದು, ಈ ಪೈಕಿ 1,30,106 ಪುರುಷ, 1,2,7126 ಜನ ಮಹಿಳಾ ಮತದಾರರು, 9 ಜನ ಇತರ ಮತದಾರರಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರ ಅತ್ಯಂತ ಕುತೂಹಲ ಮೂಡಿಸಿರುವ ಕ್ಷೇತ್ರವಾಗಿದ್ದು, ಅಲ್ಲದೆ ಇದು ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸುದ್ದಿಯಲ್ಲಿರುವ ಕ್ಷೇತ್ರವಾಗಿದೆ. ಇಲ್ಲಿ ಮರಾಠಿಗರು ಹಾಗೂ ಲಿಂಗಾಯಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಈ ಕ್ಷೇತ್ರದಲ್ಲಿ ಪ್ರಮುಖ ಆಗುತ್ತದೆ.
ಸದ್ಯ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳ್ಕರ್ ಈ ಕ್ಷೇತ್ರದ ಶಾಸಕಿ ಆಗಿದ್ದು, 2018ರಲ್ಲಿ ಭಾರಿ ಅಂತರದ ಗೆಲುವು ಸಾಧಿಸಿದ್ದರು. ಸದ್ಯ ಮಾಜಿ ಸಚಿವ ಸಾಹುಕಾರ್ ರಮೇಶ್ ಜಾರಕಿಹೊಳಿ ಅವರ ಆಗಮನದಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರ ಈ ಬಾರಿ ಕುತೂಹಲ ಕೆರಳಿಸಿದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಫೈಟ್ ಇದ್ದರು, ಮರಾಠಿಗರ ಪ್ರಾಬಲ್ಯ ಇರುವ ಕಾರಣಕ್ಕೆ ಎಂಇಎಸ್ ಅನ್ನು ಅಲ್ಲಗಳೆಯುವಂತಿಲ್ಲ.
ಇಲ್ಲಿ ಕಳೆದ ಮೂರು ಚುನಾವಣೆಗಳ ಪೈಕಿ ಬಿಜೆಪಿ ಎರಡು ಬಾರಿ ಗೆಲುವುಸಾಧಿಸಿದೆ. ಇನ್ನು ಕಾಂಗ್ರೆಸ್ ಒಂದು ಬಾರಿ ಮಾತ್ರ ಗೆಲುವು ಸಾಧಿಸಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ 1,02,040 ಮತಗಳನ್ನು ಗಳಿಸುವ ಮೂಲಕ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು.
ಈ ಹಿಂದೆ ಎರಡು ಬಾರಿ ಶಾಸಕರಾಗಿದ್ದ ಬಿಜೆಪಿ ಅಭ್ಯರ್ಥಿ ಸಂಜಯ್ ಬಿ. ಪಾಟೀಲ್ ಅವರು 50,316 ಮತಗಳನ್ನು ಪಡೆದು ಸೋಲನುಭವಿಸಿದ್ದರು. ಇನ್ನು ಮನೋಹರ್ ಕಲ್ಲಪ್ಪ ಕಿಣೇಕರ್ ಅವರು ಪಕ್ಷೇತರರಾಗಿ ಸ್ಪರ್ಧಿಸಿ 23,776 ಮತ ಪಡೆದು ಗಮನ ಸೆಳೆದಿದ್ದರು.
ಇನ್ನು 2013ರಲ್ಲಿ ಇಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಯ ನಡುವೆ ಬಿಗ್ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿ ಅಭ್ಯರ್ಥಿ ಸಂಜಯ್ ಬಿ ಪಾಟೀಲ್ 38,322 ಮತ ಪಡೆದು ಗೆಲುವು ಸಾಧಿಸಿದ್ದರೆ, ಪಕ್ಷೇತರ ಅಭ್ಯರ್ಥಿ ಮನೋಹರ್ ಕಲ್ಲಪ್ಪ ಕಿಣೇಕರ್ 36,987 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು. ಹಾಗೆಯೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಲಕ್ಷ್ಮೀ ಹೆಬ್ಬಾಳ್ಕರ್ 35,811 ಮತಗಳನ್ನು ಪಡೆಯುವ ಮೂಲಕ ಮೂರನೆ ಸ್ಥಾನವನ್ನು ಅಲಂಕರಿಸಿದ್ದರು.
ಹಾಗೆಯೆ 2008ರಲ್ಲಿಯೂ ಕೂಡ ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಯ ನಡುವೆ ಗೆಲುವಿಗಾಗಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ಸಂಜಯ್ ಬಿ ಪಾಟೀಲ್ 42,208 ಮತಗಳನ್ನು ಪಡೆದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶಿವಪುತ್ರಪ್ಪ ಚನ್ನಬಸಪ್ಪ ಮಾಳಗಿ 33,899 ಮತಗಳನ್ನು ಪಡೆಯುವವ ಮೂಲಕ ಸೋಲನುಭವಿಸಿದ್ದರು. ಇನ್ನು ಮನೋಹರ್ ಕಲ್ಲಪ್ಪ ಕಿಣೇಕರ್ ಪಕ್ಷೇತರರಾಗಿ ಸ್ಪರ್ಧಿಸಿ 28,689 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಅಲಂಕರಿಸಿದ್ದರು.