ಗೋಕಾಕ:ಗುರುವಿನ ಅನುಗ್ರಹಕ್ಕೆ ಪಾತ್ರರಾಗಿ : ಮುರುಘರಾಜೇಂದ್ರ ಶ್ರೀ
ಗುರುವಿನ ಅನುಗ್ರಹಕ್ಕೆ ಪಾತ್ರರಾಗಿ : ಮುರುಘರಾಜೇಂದ್ರ ಶ್ರೀ
ಗೋಕಾಕ ಜು 4 : ಸಾಧು, ಸಂತರ, ಮಹಾತ್ಮರ ಪುಣ್ಯ ಪುರುಷರೊಂದಿಗಿನ ಒಡನಾಟದ ಫಲವು ತಪಸ್ಸಿನ ಫಲಕ್ಕಿಂತ ಅಧಿಕವಾಗಿರುತ್ತದೆಂದು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು, ಸೋಮವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಮತ್ತು ಲಿಂಗಾಯತ ಮಹಿಳಾ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ 166ನೇ ಮಾಸಿಕ ಶಿವಾನುಭವಗೋಷ್ಠಿ ಹಾಗೂ ಗುರು ಪೂರ್ಣಿಮೆಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಗುರು, ಲಿಂಗ ಮತ್ತು ಜಂಗಮರು ಶಿವನ ಸ್ವರೂಪವೇ ಆಗಿದ್ದು ಅವರ ಕರುಣೆಯಿಂದ ಮಾತ್ರ ಅಪಾರ ಸಿದ್ಧಿ ಸಾಧನೆಗಳು ಮತ್ತು ಜ್ಞಾನ ಪ್ರಾಪ್ತಿಯಾಗುತ್ತದೆ. ಗುರುವಿನ ಅನುಗ್ರಹಕ್ಕೆ ಪಾತ್ರರಾಗುವಂತೆ ಕರೆ ನೀಡಿದರು.
ಚಿಂತಕರಾಗಿ ಪಾಲ್ಗೊಂಡಿದ್ದ ಲೋಕಾಪೂರದ ಶ್ರೀ ಮಹಾಂತ ದೇವರು ಮಾತನಾಡಿ, ಗುರು ಭಕ್ತರಲ್ಲಿ ಭೇದ ಮಾಡದೆ ಸಮನಾಗಿ ಅನುಗ್ರಹಿಸಿ, ಮುಕ್ತಿ ಮಾರ್ಗ ತೋರಿಸಿ ಭಕ್ತರನ್ನು ಉದ್ಧರಿಸುತ್ತಾನೆ ಎಂದು ಹೇಳಿದರು.
ಗುರು ಪೂರ್ಣಿಮೆಯ ನಿಮಿತ್ಯ ಪೂಜ್ಯರನ್ನು ಭಕ್ತರು ಸತ್ಕರಿಸಿದರು.
ಈ ಸಂದರ್ಭದಲ್ಲಿ ಮುಪ್ಪಯ್ಯನ ಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಜಿ, ಬಸನಗೌಡ ಪಾಟೀಲ, ವಿಜಯಲಕ್ಷ್ಮೀ ಹಿರೇಮಠ, ಸುಧಾ ರೊಟ್ಟಿ, ಶಕುಂತಲಾ ಕಾಪಸಿ, ನಾಗಪ್ಪ ಕಾಪಸಿ, ಎಸ್ ಎಸ್ ಮಶೆನ್ನವರ ಇದ್ದರು.
ಎಸ್ ಕೆ ಮಠದ ಸ್ವಾಗತಿಸಿ, ನಿರೂಪಿಸಿದರು. ಆರ್ ಎಲ್ ಮಿರ್ಜಿ ವಂದಿಸಿದರು.