ಗೋಕಾಕ:18 ಮತಕ್ಷೇತ್ರ ಹೊಂದಿದ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಗೋಕಾಕ ಹೊಸ ಜಿಲ್ಲೆ ಮಾಡಿ : ಮುರುಘರಾಜೇಂದ್ರ ಶ್ರೀ
18 ಮತಕ್ಷೇತ್ರ ಹೊಂದಿದ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಗೋಕಾಕ ಹೊಸ ಜಿಲ್ಲೆ ಮಾಡಿ : ಮುರುಘರಾಜೇಂದ್ರ ಶ್ರೀ
ಗೋಕಾಕ ಅ 18 : 18 ಮತಕ್ಷೇತ್ರ ಹೊಂದಿದ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಗೋಕಾಕ ಮತ್ತು ಚಿಕ್ಕೋಡಿ ಹೊಸ ಜಿಲ್ಲೆ ಮಾಡಬೇಕು ಎಂದು ಜಿಲ್ಲಾ ಹೋರಾಟ ಚಾಲನಾ ಸಮಿತಿ ಅಧ್ಯಕ್ಷ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಆಗ್ರಹಿಸಿದರು
ಶುಕ್ರವಾರದಂದು ನಗರದ ಶ್ರೀ ಶೂನ್ಯ ಸಂಪಾದನ ಮಠದಲ್ಲಿ ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿಯವರು ಹಮ್ಮಿಕೊಂಡ ಸಭೆಯ ಅಧ್ಯಕ್ಷ ವಹಿಸಿ ಅವರು ಮಾತನಾಡುತ್ತಿದ್ದರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಹೇಳಿಕೆಗೆ ನಮ್ಮ ಸಂಪೂರ್ಣ ಸಹಮತವಿದ್ದು, ಮೂಡಲಗಿ ಮತ್ತು ಗೋಕಾಕ ಜನರು ಪಕ್ಷಾತೀತವಾಗಿ ಈ ಹೋರಾಟಕ್ಕೆ ಬೆಂಬಲ ವ್ಯಕ್ತಿ ಪಡಿಸಿ ಗೋಕಾಕ ನೂತನ ಜಿಲ್ಲಾ ಕೇಂದ್ರವಾಗಲು ಸಹಕರಿಸಬೇಕು. ಸಚಿವ ಸತೀಶ ಜಾರಕಿಹೊಳಿ ಅವರು ನಗರಕ್ಕೆ ಬಂದ ಕೂಡಲೇ ಅವರಿಗೆ ಮತ್ತು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿ ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಲಾಗುವುದು ಎಂದ ಅವರು ಮುಂಬರುವ ದಿನಗಳಲ್ಲಿ ಸಚಿವ ಸತೀಶ ಜಾರಕಿಹೊಳಿ, ಶಾಸಕರುಗಳಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಿಯೋಗದೊಂದಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಗುವುದು ಎಂದು ಶ್ರೀಗಳು ಹೇಳಿದರು.
ಮುಖಂಡರುಗಳಾದ ಡಾ.ರಾಜೇಂದ್ರ ಸಣ್ಣಕ್ಕಿ, ಬಸಗೌಡ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಬಸವರಾಜ ಕೋಟಗಿ, ಡಾ.ಮಹಾಂತೇಶ ಕಡಾಡಿ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಮಾತನಾಡಿ ಕಳೆದ 4 ದಶಕಗಳಿಂದ ಗೋಕಾಕ ಜಿಲ್ಲೆಗಾಗಿ ಹಲವಾರು ಹೋರಾಟಗಳನ್ನು ಮಾಡಿ, ಆಯಾ ಸರಕಾರಗಳಿಗೆ ಮನವಿ ಅರ್ಪಿಸಿ ಆಗ್ರಹಿಸಿಲಾಗಿದ್ದು, ಮುಂಬರುವ ದಿನಗಳಲ್ಲಿಯೂ ಸಹ ಜಿಲ್ಲಾ ಹೋರಾಟವನ್ನು ತೀವ್ರಗೋಳಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಹೋರಾಟವನ್ನು ಸಂಘಟಿಸಿ, ಸರಕಾರವನ್ನು ಆಗ್ರಹಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಜಯಾನಂದ ಹುಣ್ಣಚ್ಯಾಳಿ, ಅಬ್ಬಾಸ ದೇಸಾಯಿ, ಬಸವರಾಜ ಆರೆನ್ನವರ, ಮುಖಂಡರುಗಳಾದ ಚಂದ್ರಶೇಖರ್ ಕೊಣ್ಣೂರ, ವಿವೇಕ ಜತ್ತಿ , ವಿಠಲ ಸವದತ್ತಿ, ಕೆಂಚಗೌಡ ಪಾಟೀಲ, ಭೂತಪ್ಪ ವಡೇರ, ಲಕ್ಷ್ಮಣ ಗಣಪ್ಪಗೋಳ, ಈರಪ್ಪ ಬಿರನಗಡ್ಡಿ, ದುರ್ಗಪ್ಪಶಾಸ್ತ್ರಿ ಗೋಲ್ಲರ, ಬಿಲಕುಂದಿ ಸೇಈ ಅನೇಕರು ಉಪಸ್ಥಿತರಿದ್ದರು.