ಗೋಕಾಕ:ಕಡ್ಡಾಯವಾಗಿ ಕನ್ನಡ ಬಳಸಿ : ಬ್ಯಾನರ್ ಮತ್ತು ರೇಡಿಯಂ ಕಟ್ಟಿಂಗ ಅಂಗಡಿಗಳ ಮಾಲಿಕರ ಸಭೆಯಲ್ಲಿ ಪೌರಾಯುಕ್ತ ಮಹಾಜನ್ ಎಚ್ಚರಿಕೆ
ಕಡ್ಡಾಯವಾಗಿ ಕನ್ನಡ ಬಳಸಿ : ಬ್ಯಾನರ್ ಮತ್ತು ರೇಡಿಯಂ ಕಟ್ಟಿಂಗ ಅಂಗಡಿಗಳ ಮಾಲಿಕರ ಸಭೆಯಲ್ಲಿ ಪೌರಾಯುಕ್ತ ಮಹಾಜನ್ ಎಚ್ಚರಿಕೆ
ಗೋಕಾಕ ಜ 24 : ನಗರದ ಅಂಗಡಿ ಮುಗ್ಗಟ್ಟಗಳ , ಹೊಟೇಲ್ ಮತ್ತು ಆಸ್ಪತ್ರೆಗಳ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಮುದ್ರಿಸಿ ಕೊಡಬೇಕು ಎಂದು ಪೌರಾಯುಕ್ತ ಎಸ್.ಎ ಮಹಾಜನ್ ಹೇಳಿದರು.
ಬುಧವಾರದಂದು ಸಾಯಂಕಾಲ ನಗರಸಭೆ ಸಭಾಂಗಣದಲ್ಲಿ ನಗರದಲ್ಲಿರುವ ಬ್ಯಾನರ್ ಮತ್ತು ರೇಡಿಯಂ ಕಟ್ಟಿಂಗ ಅಂಗಡಿಗಳ ಮಾಲಿಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು
ಕರ್ನಾಟಕ ಸರಕಾರದ ಆದೇಶ ಮೇರೆಗೆ ಬರುವ ಫೆಬ್ರವರಿ 28ರ ಒಳಗೆ ನಗರದ ಎಲ್ಲಾ ಅಂಗಡಿ ಮುಗ್ಗಟು, ಹೋಟೆಲ್, ಆಸ್ಪತ್ರೆ, ಶಾಲೆಗಳ ಮೇಲೆ ಅಳವಡಿಸುವ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು ಎಂದು ಆದೇಶವಿದ್ದು, 28ರ ನಂತರ ಕನ್ನಡ ಭಾಷೆಯನ್ನು ಬಳಸದ ಅಂಗಡಿ, ಹೊಟೇಲ್ ಮತ್ತು ಆಸ್ಪತ್ರೆಗಳ ಮೇಲಿನ ನಾಮಫಲಕಗಳನ್ನು ನಗರಸಭೆ ವತಿಯಿಂದ ತಗೆದು ಹಾಕಲಾಗುವುದು.ನಗರದ ಎಲ್ಲಾ ರೇಡಿಯಂ, ಬ್ಯಾನರ್ ಪ್ರಿಂಟಿಂಗ್ ಅಂಗಡಿಯ ಮಾಲಿಕರು ತಮ್ಮ ಅಂಗಡಿಯಲ್ಲಿ ಸರಕಾರದ ಆದೇಶದ ಪ್ರತಿಯನ್ನು ಅಂಟಿಸಿ ಬ್ಯಾನರ್ ಪ್ರಿಂಟ್ ಮಾಡಿಸಲು ಬಂದ ಸಾರ್ವಜನಿಕರಿಗೆ ಇದರ ಅರಿವು ಮೂಡಿಸಿ ಕನ್ನಡ ಭಾಷೆಯನ್ನು ಬಳಸುವಂತೆ. ತಿಳಿ ಹೇಳಬೇಕು ಎಂದು ಹೇಳಿದರು.
ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಮಾತನಾಡಿ ಬೇರೆ, ಬೇರೆ ರಾಜ್ಯದಲ್ಲಿ ಅಂಗಡಿ ,ಮುಗ್ಗಟುಗಳ ಮೇಲೆ ಆಯಾ ರಾಜ್ಯ ಭಾಷೆಯಲ್ಲಿಯೇ ನಾಮಫಲಕಗಳನ್ನು ಅಳವಡಿಸಲಾಗಿರುತ್ತದೆ ಹಾಗೂ ಎಲ್ಲಾ ವ್ಯವಹಾರಗಳನ್ನು ಅವರವರ ರಾಜ್ಯ ಭಾಷೆಯಲ್ಲಿ ಮಾಡಲಾಗುತ್ತದೆ. ಆದರೆ ಕರ್ನಾಟಕದಲ್ಲಿ ಅಂದಿನ ಸರಕಾರ ಸನ್ 2017 ವರ್ಷದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು. ಅಂಗಡಿ ಮುಗ್ಗಟಗಳ, ಹೋಟೆಲ್, ಆಸ್ಪತ್ರೆಗಳ ಮೇಲೆ ಕಡ್ಡಾಯವಾಗಿ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಲು ಸೂಚಿಸಲಾಗಿತ್ತು ಆದರೆ 5 ವರ್ಷವಾದರು ಕೂಡಾ ಇನ್ನು ಜಾರಿಗೆ ಬಂದಿಲ್ಲ, ಈಗ ಸರಕಾರ ಮತ್ತೆ ಸುಗ್ರೀವಾಜ್ಞೆಯನ್ನು ಹೊರಡಿಸಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದು ಆದೇಶಿಸಿದೆ ಆದ ಕಾರಣ ನಗರದ ಎಲ್ಲಾ ಅಂಗಡಿಕಾರರು, ಹೊಟೇಲ್ ಮಾಲೀಕರು, ಆಸ್ಪತ್ರೆಯ ವೈದ್ಯರು ,ಶಿಕ್ಷಣ ಸಂಸ್ಥೆಗಳು ಮುಖ್ಯಸ್ಥರು ಫೆಬ್ರವರಿ 28ರ ಒಳಗೆ ತಾವು ಅಳವಡಿಸಿರುವ ನಾಮಫಲಕಗಳ ಮೇಲೆ ಶೇಕಡಾ 60 ಪ್ರತಿಶತ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು.ಇಲ್ಲದೆ ಹೋದರೆ ಅಂತಹ ಅಂಗಡಿಯ ನಾಮಫಲಕಗಳನ್ನು ತಗೆದು ಹಾಕಲಾಗುವುದು ಎಂದು ಹೇಳಿದರು.
ಈ ಸಂಧರ್ಭದಲ್ಲಿ ನಗರಸಭೆ ಅಧಿಕಾರಿಗಳಾದ ಎಂ.ಎಚ್.ಗಜಾಕೋಶ, ಜೆ.ಸಿ. ತಾಂಬೂಳೆ ಉಪಸ್ಥಿತರಿದ್ದರು.