ಗೋಕಾಕ :ಯಡಿಯೂರಪ್ಪ ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಾಲಚಂದ್ರ ಗೈರು
ಯಡಿಯೂರಪ್ಪ ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಾಲಚಂದ್ರ ಗೈರು
ಗೋಕಾಕ ಮೇ 9 :: ಗೋಕಾಕ ತಾಲೂಕಿನ ಅರಭಾವಿ ಮತಕ್ಷೇತ್ರದ ಹಳ್ಳೂರು ಗ್ರಾಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಪಾಲ್ಗೊಂಡಿದ್ದ ಸಮಾರಂಭದಲ್ಲಿ ಅದೇ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೈರು ಹಾಜರಿ ಹಲವು ರಾಜಕೀಯ ಊಹಾಪೋಹಗಳಿಗೆ ಎಡೆಮಾಡಿಕೋಟ್ಟದೆ.
ಮನೋನ್ಮಯಿ ಮಹಾಸಂಸ್ಥಾನ ಪೀಠದ ಉದ್ಘಾಟನೆ ಮತ್ತು ವಿಶ್ವನಾಥ ಮಂದಿರದ ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಳ್ಳಲು ಮಂಗಳವಾರ ಹಳ್ಳೂರು ಗ್ರಾಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದರು. ಮಾರ್ಗ ಮಧ್ಯೆ ಕಲ್ಲೋಳಿ ಗ್ರಾಮದಲ್ಲಿ ಕಾರ್ಯಕರ್ತರು ಯಡಿಯೂರಪ್ಪ ಅವರಿಗೆ ಸ್ವಾಗತ ನೀಡಿ ಸತ್ಕರಿಸಿ ಬೀಳ್ಕೊಟ್ಟಿದ್ದರು. ಆದರೆ ಹಳ್ಳೂರು ಗ್ರಾಮದ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಅವರನ್ನು ಸ್ವಾಗತಿಸಲು ಆ ಪಕ್ಷದ ಶಾಸಕ ಬಾಲಚಂದ್ರ ಮತ್ತು ಅವರ ಬೆಂಬಲಿಗರು ಇರಲಿಲ್ಲ. ಇದು ಯಡಿಯೂರಪ್ಪ ಅವರಿಗೂ ಕೊಂಚ ಇರುಸು ಮುರುಸು ಉಂಟುಮಾಡಿದೆ ಎಂದು ತಿಳಿದು ಬಂದಿದೆ.
ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಮಂಗಳವಾರ ಬೆಳಗ್ಗೆ ಏರ್ಪಡಿಸಿದ್ದ ಕೋರ್ ಸಮಿತಿ ಸಭೆಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಜರಾಗಿರಲಿಲ್ಲ ಅಷ್ಟೇ ಅಲ್ಲ ಮೊನ್ನೆ ನಡೆದ ಮೈಸೂರಿನ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲೂ ಶಾಸಕ ಬಾಲಚಂದ್ರ ಭಾಗವಹಿಸಿರಲಿಲ್ಲ.
ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷರು ತಾವು ಪ್ರತಿನಿಧಿಸುವ ಕ್ಷೇತ್ರಕ್ಕೆ ಭೇಟಿ ನೀಡಿದರೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಏಕೆ ಹೊರಗೆ ಬರಲಿಲ್ಲ, ಅರಭಾವಿ ಮತಕ್ಷೇತ್ರಕ್ಕೆ ಯಡಿಯೂರಪ್ಪ ಅವರು ಭೇಟಿ ನೀಡುವ ಕಾರ್ಯಕ್ರಮದ ಬಗ್ಗೆ ಶಾಸಕರಿಗೆ ಯಾಕೆ ಮಾಹಿತಿ ಇರಲಿಲ್ಲ ಎಂಬುದು ನಿಗೂಢವಾಗಿದೆ.
ಆದರೆ ಸೌಜನ್ಯಕ್ಕಾಗಿಯಾದರೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿಯಾಗಬಹುದಿತ್ತು ಎಂದು ಬಿಜೆಪಿಯ ಕೆಲವು ನಾಯಕರು ಮಾತನಾಡಿಕೋಳುತ್ತಿದ್ದಾರೆ ಈ ಬೆಳವಣಿಗೆಗಳನ್ನು ನೋಡಿದರೆ ಯಡಿಯೂರಪ್ಪ ಮತ್ತು ಬಾಲಚಂದ್ರ ಜಾರಕಿಹೊಳಿ ಅವರ ಸಂಬಂಧ ಮೊದಲಿನಂತೆ ಇಲ್ಲ ಅಂತ ಗೋತ್ತಾಗುತ್ತಿದೆ.
ಒಟ್ಟಿನಲ್ಲಿ ಬಿಜೆಪಿ ಸೇರಿ ರಾಷ್ಟ್ರೀಯ ಪಕ್ಷಗಳಲ್ಲಿ ಭುಗಿಲ್ಲೆದ್ದಿರುವ ಭಿನ್ನಮತ ಜಿಲ್ಲೆಯಲ್ಲಿ ರಾಜಕೀಯ ಧೃವೀಕರಣಕ್ಕೆ ಕಾರಣವಾದರೂ ಅಚ್ಚರಿಯಿಲ್ಲ ಎಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ.
ಒಟ್ಟಾರೆಯಾಗಿ ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿಯ ಇಬ್ಬರು ಪ್ರಬಲ ನಾಯಕರು ಕಂಟಕವಾಗಿರುವುದಂತೂ ಅಲ್ಲಗಳೆಯುವಂತಿಲ್ಲಾ .