ಗೋಕಾಕ:ಸಾಹಿತ್ಯ ಲೋಕಕ್ಕೆ ಬಸವಾದಿ ಶಿವಶರಣರ ಕೊಡುಗೆ ಅಪಾರವಾಗಿವೆ : ಡಾ.ಜಿ.ಬಿ.ನಂದನ ಅಭಿಮತ
ಸಾಹಿತ್ಯ ಲೋಕಕ್ಕೆ ಬಸವಾದಿ ಶಿವಶರಣರ ಕೊಡುಗೆ ಅಪಾರವಾಗಿವೆ : ಡಾ.ಜಿ.ಬಿ.ನಂದನ ಅಭಿಮತ
ಗೋಕಾಕ ಜೂ 23: ಸಾಹಿತ್ಯ ಲೋಕಕ್ಕೆ ಬಸವಾದಿ ಶಿವಶರಣರ ಕೊಡುಗೆ ಅಪಾರವಾಗಿದ್ದು, ಇಂದು ಬಸವಾದಿ ಶರಣರ ಚಿಂತನೆಗಳು ಮಾಯವಾಗುತ್ತಿವೆ ಅದನ್ನು ಉಳಿಸಿ ಬೆಳೆಸುವ ಕಾರ್ಯ ಇಂದಿನ ಸಾಹಿತಿಗಳು ಮಾಡಬೇಕಾಗಿದೆ ಎಂದು ಧಾರವಾಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ.ಜಿ.ಬಿ.ನಂದನ ಹೇಳಿದರು.
ರವಿವಾರದಂದು ನಗರದ ಶ್ರೀ ರಾಮಲಿಂಗೇಶ್ವರ ಸಭಾ ಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ತ್ ಗೋಕಾಕ ಹಾಗೂ ಗೋಕಾವಿ ಗೆಳೆಯರ ಬಳಗ ಇವುಗಳ ಸಂಯುಕ್ತಾಶ್ರಯದಲ್ಲಿ ಸಾಹಿತಿ ಜಯಾನಂದ ಮಾದರ ಸಂಪಾದಿಸಿದ “ಗೋಕಾವಿ ಬುತ್ತಿ” ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಾಹಿತ್ಯ ಬರೆಯುವುದು ಸುಲಭ ಆದರೆ ಬರೆದಂತೆ ನಡೆಯುವುದು ತುಂಬಾ ಕಷ್ಟವಾಗಿದ್ದು, ಬರೆದಂತೆ ನಡೆಯುವಂತಹ ಕಾರ್ಯ ವಾಗಬೇಕು ಅಂದಾಗ ಮಾತ್ರ ನಾವು ಬರೆದ ಸಾಹಿತ್ಯಕ್ಕೆ ಅರ್ಥ ಬರುತ್ತದೆ. ಕಾಟಾಚಾರಕ್ಕೆ ಪುಸ್ತಕಗಳನ್ನು ಬರೆಯುವದನ್ನು ಬಿಟ್ಟು ನಿಜವಾದ್ದನ್ನು ಬರೆದು ಸಮಾಜವನ್ನು ಸುಧಾರಿಸುವ ಕಾರ್ಯವಾಗಬೇಕು. ಇದನ್ನು ಶರಣರು ನಮ್ಮಗೆ ವಚನ ಸಾಹಿತ್ಯದ ಮೂಲಕ ತಿಳಿಸಿಕೊಟ್ಟಿದ್ದಾರೆ ಇಂದು ನಮಗೆ ಸಾಹಿತ್ಯವೂ ಗೋತ್ತಿಲ್ಲ , ಸಂಸ್ಕಾರವೂ ಗೊತ್ತಿಲ್ಲ ಅದನ್ನು ತಿಳಿಸುವ ಕಾರ್ಯ ಸಾಹಿತಿಗಳು ಮಾಡಬೇಕು.
ಯಾಂತ್ರಿಕ ಬದುಕಿನಲ್ಲಿ ನಾವು ಹೃದಯ ವೈಶಾಲಿತೆಯನ್ನು ಕಳೆದುಕೊಂಡಿದ್ದೇವೆ. ಅದನ್ನು ಮರಳಿ ಪಡೆಯುವ ಕೆಲಸ ಮಾಡಿ,ಸಾಹಿತ್ಯದಿಂದ ಸಮಾಜವನ್ನು ಕಟ್ಟುವ ಕಾರ್ಯವಾಗಬೇಕು.
ಶಬ್ದ ವ್ಯಸನಗಳನ್ನು ಸಂಸ್ಕಾರಗೊಳಿಸುವವರು ಸಾಹಿತಿಗಳು. ಕೆಲವರಿಗೆ ಸಾಹಿತ್ಯ ಹುಟ್ಟಿನಿಂದಲೇ ಬಂದಿರುತ್ತದೆ. ಕೆಲವರಿಗೆ ಕಲಿತಮೇಲೆ ಬಂದಿರುತ್ತದೆ ಬಂದ ಸಾಹಿತ್ಯವನ್ನು ಸಮಾಜಕ್ಕೆ ಉಪಯೋಗವಾಗುವ ಹಾಗೆ ಬಳಿಸಿಕೊಳ್ಳಬೇಕು ಎಂದ ಅವರು
ಎಲ್ಲಿಯನತಕ ನಮಗೆ ನಮ್ಮ ಬಗ್ಗೆ ಪ್ರಜ್ಞೆ ಬರುವುದಿಲ್ಲವೋ ಅಲ್ಲಿಯವರೆಗೆ ನಾವು ಏನು ಸಾಧಿಸಲು ಸಾಧ್ಯವಿಲ್ಲ. ನಮ್ಮನ್ನು ನಾವು ಅರಿತು ಸಮಾಜವನ್ನು ಕಟ್ಟುವ ಕಾರ್ಯ ಮಾಡಬೇಕು. ಧಾರವಾಡವನ್ನು ಮೀರಿಸುವಂತಹ ಸಾಹಿತ್ಯಿಕ ಕಾರ್ಯಗಳು ಗೋಕಾವಿ ನಾಡಿನಲ್ಲಿ ನಡೆಯುತ್ತಿದ್ದು, ಇದು ಸಾಹಿತ್ಯ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರಣವಾಗುಬಹುದು ಗೋಕಾಕ ನಾಡಿನಲ್ಲಿ ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳು ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮವನ್ನು ಮಹಾಂತೇಶ ತಾವಂಶಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ರಾಂತ ಪ್ರೋ ಚಂದ್ರಶೇಖರ್ ಅಕ್ಕಿ ವಹಿಸಿದ್ದರು.
ಈ ಸಂದರ್ಭದಲ್ಲಿ ಡಾ.ಲಕ್ಷ್ಮಣ್ ಚೌರಿ, ರಜನಿ ಜಿರಗ್ಯಾಳ, ಬಸವರಾಜ ಮುರಗೋಡ, ಪ್ರೋ.ಸಂಗಮೇಶ ಗುಜಗೊಂಡ, ಬಿ.ವ್ಹಿ. ಹಿರೇಮಠ, ಡಾ.ಅರುಣ್ ಸವತಿಕಾಯಿ, ಈಶ್ವರಚಂದ್ರ ಬೆಟಗೇರಿ, ಜಯಾನಂದ ಮಾದರ, ವಿದ್ಯಾ ರೆಡ್ಡಿ ಉಪಸ್ಥಿತರಿದ್ದರು.