ಗೋಕಾಕ:ರಾಜ್ಯಾದ್ಯಂತ ಭಾರೀ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನಗರದಲ್ಲಿಯ ನದಿಗಳು : ಸುರಕ್ಷಿತ ಸ್ಥಳಗಳಿಗೆ ತೆರಳಲು ಪೊಲೀಸ್ ಇಲಾಖೆ ಸೂಚನೆ
ರಾಜ್ಯಾದ್ಯಂತ ಭಾರೀ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನಗರದಲ್ಲಿಯ ನದಿಗಳು : ಸುರಕ್ಷಿತ ಸ್ಥಳಗಳಿಗೆ ತೆರಳಲು ಪೊಲೀಸ್ ಇಲಾಖೆ ಸೂಚನೆ
ಗೋಕಾಕ ಜು 25 : ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮಾರ್ಕಂಡೇಯ, ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿಗಳು ಅಪಾಯಮಟ್ಟವನ್ನು ಮೀರಿ ಹರಿಯುತ್ತಿದ್ದು, ಹಿಡಕಲ್ ಜಲಾಶಯದಿಂದ 10 ಸಾವಿರ ಕ್ಯೂಸೆಕ್ಸ ಮತ್ತು ಶಿರೂರು ಜಲಾಯಶದಿಂದ ಹೆಚ್ಚುವರಿಯಾಗಿ 7 ಸಾವಿರ ಕ್ಯೂಸೆಕ್ಸ ನೀರನ್ನು ನದಿಗಳಿಗೆ ಹರಿ ಬಿಟ್ಟಿರುವ ಪರಿಣಾಮ ಗೋಕಾಕ ನಗರ ಮತ್ತು ತಾಲೂಕಿನಲ್ಲಿ ಪ್ರವಾವ ಬರುವ ಸಂಭವಿದ್ದು, ಗುರುವಾರ ಮಧ್ಯಾಹ್ನದಿಂದ ಶನಿವಾರದವರೆಗೆ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ರಜೆ ಘೋಷಿಸಿದ್ದಾರೆ.
ನಗರದ ಹಳೆದನಗಳ ಪೇಠೆ, ಕುಂಬಾರ ಓಣಿ ಸೇರಿದಂತೆ ಸಂಭವನೀಯ ಪ್ರವಾಹ ಪೀಡಿತ ಸ್ಥಳಗಳಿಗೆ ಸಿಪಿಐ ಗೋಪಾಲ ರಾಠೋಡ, ಪೌರಾಯುಕ್ತ ಜಾಧವ, ಎಇಇ ಪಾಟೀಲ, ಪಿಎಸ್ಐ ಕೆ.ವಾಲಿಕರ ಭೇಟಿ ನೀಡಿ ನದಿ ತಟದಲ್ಲಿರುವ ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ದನ,ಕರುಗಳನ್ನು ತಗೆದುಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಿದ್ದಾರೆ.
ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಚಿಕ್ಕೋಳಿ ಸೇತುವೆ ಮತ್ತು ಲೋಳಸೂರ ಸೇತುವೆಗಳು ಸದ್ಯಕ್ಕೆಮುಳುಗಡೆಯಾಗಿಲ್ಲ . ಮಳೆ ಹೀಗೆ ಮುಂದುವರೆದರೆ ಚಿಕ್ಕೋಳಿ ಸೇತುವೆ ಮುಳುಗಡೆಯಾಗುವ ಸಂಭವವಿದ್ದು, ಸಾರ್ವಜನಿಕರು ನದಿ ಹತ್ತಿರ ಹೋಗಬಾರದು ಎಂದು ಪೊಲೀಸರು ವಿನಂತಿಸಿಕೊಂಡಿದ್ದಾರೆ.