ಗೋಕಾಕ:ಲೋಳಸೂರ ಸೇತುವೆಗೆ ಉಸ್ತುವಾರಿ ಕಾರ್ಯದರ್ಶಿ ವಿಪುಲ್ ಬನ್ಸಲ್ ಮತ್ತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭೇಟಿ ಪರಿಶೀಲನೆ
ಲೋಳಸೂರ ಸೇತುವೆಗೆ ಉಸ್ತುವಾರಿ ಕಾರ್ಯದರ್ಶಿ ವಿಪುಲ್ ಬನ್ಸಲ್ ಮತ್ತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭೇಟಿ ಪರಿಶೀಲನೆ
ಗೋಕಾಕ ಜು 31 : ಪ್ರವಾಹದಿಂದ ಹಾನಿಗೋಳಗಾಗಿರುವ ಲೋಳಸೂರ ಸೇತುವೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಪುಲ್ ಬನ್ಸಲ್ ಮತ್ತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬುಧವಾರದಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕಳೆದ ಮೂರು ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಪ್ರವಾಹ ಪರಿಸ್ಥಿತಿ ಸ್ವಲ್ಪ ನಿಯಂತ್ರಣದಲ್ಲಿದೆ. ನಗರದ ಚಿಕ್ಕೋಳಿ ಮತ್ತು ಲೋಳಸೂರ ಸೇತುವೆ ಮೇಲೆ ಹರಿದು ಬಂದಿದ್ದ ನೀರು ಇಳಿಮುಖವಾಗಿದ್ದು, ಪರ್ಯಾಯ ವ್ಯವಸ್ಥೆ ಬಗ್ಗೆ ಶೀಘ್ರ ಕ್ರಮಕೈಗೊಳ್ಳಲಾಗುವುದು. ನೀರಿನ ರಭಸಕ್ಕೆ ಸೇತುವೆ ಮೇಲಿನ ರಸ್ತೆ ಹಾಳಾಗಿದ್ದು, ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ವಿಡಿಯೋ ಸಂವಾದ ಇದ್ದು ,ಜಿಲ್ಲೆಯ ಪರಿಸ್ಥಿತಿ ಬಗ್ಗೆ ಅವರಿಗೆ ತಿಳಿಸಲಾಗುವುದು. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ್ದು ಗೋಕಾಕ ಸೇರಿದಂತೆ ಇತರ ಕಡೆಗಳ ಪ್ರವಾಹ ಸ್ಥಿತಿಗತಿ ಬಗ್ಗೆ ಚರ್ಚೆ ಮಾಡಲಾಗಿದ್ದು, ಸಾಯಂಕಾಲ ಲೋಕೋಪಯೋಗಿ ಇಲಾಖೆ ಅಭಿಯಂತರ ಮುಖಾಂತರ ಏನೇನು ಹಾನಿಯಾಗಿದೆ ಎಂಬ ಬಗ್ಗೆ ಲಿಖಿತ ಮಾಹಿತಿ ಪಡೆದುಕೊಂಡಿದ್ದು ಮುಖ್ಯಮಂತ್ರಿ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಮಹಾರಾಷ್ಟ್ರದಲ್ಲಿ ಮಳೆ ಸ್ವಲ್ಪ ಕಡಿಮೆಯಾದ ಪರಿಣಾಮ ಹಿಡಕಲ್ ಜಲಾಯಶಕ್ಕೆ ಮೇಲಿನಿಂದ ಬರುತ್ತಿರುವ 35 ಸಾವಿರ ಕ್ಯೂಸೆಕ್ಸ ನೀರನ್ನು ಘಟಪ್ರಭಾ ನದಿಗೆ ಹರಿಬಿಡಲಾಗುತ್ತಿದೆ ಸದ್ಯಕ್ಕೆ ನಮ್ಮ ಜಿಲ್ಲೆಗೆ ಯಾವುದೇ ತೊಂದರೆ ಇಲ್ಲ ಎಂದರು.
ಲೋಳಸೂರ ಸೇತುವೆಗೆ ದುರುಸ್ಥಿಗೆ ಶಾಶ್ವತ ಕ್ರಮ : ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ , ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಈ ಬಗ್ಗೆ ಮಾತನಾಡಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ಕಂದಾಯ ಸಚಿವರು ಬೆಳಗಾವಿಗೆ ಬಂದ ಸಂದರ್ಭದಲ್ಲಿ ಹಲವು ವಿಚಾರಗಳನ್ನು ಅವರ ಗಮನಕ್ಕೆ ತರಲಾಗಿದ್ದು, ಅವರು ಸಹ ಪೂರಕವಾಗಿ ಸ್ವಂದಿಸಿದ್ದಾರೆ ಎಂದ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಲೋಳಸೂರ ಸೇತುವೆ ಬಗ್ಗೆ ಪರಿಶೀಲಿಸಿ ವರದಿ ಕೊಟ್ಟ ನಂತರ ಸಂಚಾರಕ್ಕೆ ಮುಕ್ತಮಾಡಲಾಗುವುದು ಎಂದು ಹೇಳಿದರು.
ಇದಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿ ಅವರು ನಗರದಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪ್ರೋಬ್ರೆಷನರಿ ಐಎಎಸ್ ಅಧಿಕಾರಿ ಭರತ ಕುಮಾರ್ ಮೀನಾ, ತಹಶೀಲ್ದಾರ್ ಡಾ.ಮೋಹನ ಭಸ್ಮೆ, ನೋಡಲ್ ಅಧಿಕಾರಿ ಬಸವರಾಜ ಕುರಿಹುಲಿ, ಪೌರಾಯುಕ್ತ ರಮೇಶ ಜಾಧವ, ಡಾ.ಎಂ.ಎಸ್.ಕೊಪ್ಪದ, ಎಂ.ಎಚ್.ಗಜಾಕೋಶ, ಶಿವಾನಂದ ಹಿರೇಮಠ, ಎಇಇ ಪಾಟೀಲ್ ಸೇರಿದಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.