ಗೋಕಾಕ:ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿಕೆ ಹಾಸ್ಯಾಸ್ಪದ : ಕರವೇ ಅಧ್ಯಕ್ಷ ಬಸವರಾಜ
ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿಕೆ ಹಾಸ್ಯಾಸ್ಪದ : ಕರವೇ ಅಧ್ಯಕ್ಷ ಬಸವರಾಜ
ಗೋಕಾಕ ನ 27 : ಜಿಲ್ಲಾ ವಿಭಜನೆಯಿಂದ ಮರಾಠಿಗರ ಪ್ರಾಬಲ್ಯ ಹೆಚ್ಚಾಗುತ್ತದೆ ಎಂದು ಹೇಳಿರುವ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರ ಹೇಳಿಕೆ ಹಾಸ್ಯಾಸ್ಪದವಾಗಿದ್ದು, ಜನಸಂಖ್ಯಾ ಹಾಗೂ ಭೌಗೋಳಿಕ ವಿಸ್ತಾರ ಮತ್ತು ಅಭಿವೃದ್ಧಿ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ನೂತನ ಜಿಲ್ಲೆ ಮಾಡುವುದು ಅತ್ಯಂತ ಅವಶ್ಯಕ ಇದ್ದು, ಇದಕ್ಕೆ ಯಾರು ವಿರೋಧ ವ್ಯಕ್ತಪಡಿಸಬಾರದು ಎಂದು ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಮನವಿ ಮಾಡಿದ್ದಾರೆ.
ಬೆಂಗಳೂರು ಹೊರತುಪಡೆಸಿ ಭೌಗೋಳಿಕವಾಗಾಯೂ ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು, ಅಖಂಡ ಬೆಳಗಾವಿ ಜಿಲ್ಲೆಯ ಜನಸಂಖ್ಯೆ ಸದ್ಯ 45 ಲಕ್ಷ ದಾಟಿದೆ.10 ಲಕ್ಷ ಜನಸಂಖ್ಯೆ ಒಂದರಂತೆ ಒಂದು ಜಿಲ್ಲೆ ಮಾಡಿದರೆ ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ 5 ಹೊಸ ಜಿಲ್ಲೆಗಳನ್ನಾಗಿ ಮಾಡಲು ಯಾವುದೇ ತೊಂದರೆ ಇಲ್ಲ. ಬೆಳಗಾವಿ ವಿಭಜನೆ ಆದರೆ ಮರಾಠಿಗರ ಪ್ರಾಬಲ್ಯ ಹೆಚ್ಚಾಗುತ್ತದೆ ಎಂದು ಸರಕಾರ ದಿಕ್ಕು ತಪ್ಪಿಸುವುದು ತರವಲ್ಲ. ಈಗಾಗಲೇ ಬೆಳಗಾವಿ ಜಿಲ್ಲೆಯ ಪ್ರತಿಯೊಂದು ಹಳ್ಳಿ ಮತ್ತು ಗಲ್ಲಿಗಳಲ್ಲಿ ಕನ್ನಡ ಭಾಷೆ ಮತ್ತು ಬಾವುಟ ರಾರಾಜಿಸುತ್ತಿವೆ. ಗಡಿ ಭಾಗದಲ್ಲಿಯಂತೂ ಕನ್ನಡ ಕಾರ್ಯಕ್ರಮಗಳು ಸಂಘಟನೆ ಯಾಗುತ್ತಿವೆ. ಎಂ.ಇ.ಎಸ್ ಸಂಘಟನೆ ನಾಯಕರಿಲ್ಲದೆ ಮೂಲೆಗುಂಪಾಗಿದೆ. ಹಾಗಾಗಿ ಜಿಲ್ಲೆ ವಿಭಜನೆಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದ ಅವರು ಬೆಳಗಾವಿ ಉಳಿವಿಗಾಗಿ ಅಖಂಡ ಜಿಲ್ಲೆಯ ಜನರ ಹೋರಾಟವು ಇದೆ ಅದು ಜಿಲ್ಲೆ ವಿಭಜನೆ ಆದರೂ ಮುಂದುವರೆಯುತ್ತದೆ ಹಾಗಾಗಿ ಗಡಿ ಮತ್ತು ಕನ್ನಡದ ಹೆಸರಿನಲ್ಲಿ ಬೆಳಗಾವಿ ಜಿಲ್ಲೆ ವಿಭಜನೆಯ ವಿಷಯವನ್ನು ವಿಶಯಾಂತರ ಮಾಡಿ ಸರಕಾರದ ದಿಕ್ಕು ತಪ್ಪಿಸುವುದನ್ನು ಬಿಟ್ಟು ಎಲ್ಲರೂ ಅಭಿವೃದ್ಧಿ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲಾ ವಿಭಜನೆ ಮಾಡಿ ಗೋಕಾಕ ಮತ್ತು ಚಿಕ್ಕೋಡಿ ಹೊಸ ಜಿಲ್ಲೆಯಾಗಲು ಸಹಕರಿಸಬೇಕು ಎಂದು ಖಾನಪ್ಪನವರ ಆಗ್ರಸಿದ್ದಾರೆ.