RNI NO. KARKAN/2006/27779|Wednesday, February 5, 2025
You are here: Home » breaking news » ಗೋಕಾಕ:ಸಾಧನೆಯ ಗುರಿಯೊಂದಿಗೆ ಅತ್ಮವಿಶ್ವಾಸದಿಂದ ಪ್ರಯತ್ನ ಶೀಲರಾದರೆ ಯಶಸ್ಸು ನಿಶ್ಚಿತ : ಮಂಜುನಾಥ್ ಬಿ.

ಗೋಕಾಕ:ಸಾಧನೆಯ ಗುರಿಯೊಂದಿಗೆ ಅತ್ಮವಿಶ್ವಾಸದಿಂದ ಪ್ರಯತ್ನ ಶೀಲರಾದರೆ ಯಶಸ್ಸು ನಿಶ್ಚಿತ : ಮಂಜುನಾಥ್ ಬಿ. 

ಸಾಧನೆಯ ಗುರಿಯೊಂದಿಗೆ ಅತ್ಮವಿಶ್ವಾಸದಿಂದ ಪ್ರಯತ್ನ ಶೀಲರಾದರೆ ಯಶಸ್ಸು ನಿಶ್ಚಿತ : ಮಂಜುನಾಥ್ ಬಿ.

ಗೋಕಾಕ ಫೆ 5 : ಸಾಧನೆಯ ಗುರಿಯೊಂದಿಗೆ ಅತ್ಮವಿಶ್ವಾಸದಿಂದ ಪ್ರಯತ್ನ ಶೀಲರಾದರೆ ಯಶಸ್ಸು ನಿಶ್ಚಿತ ಎಂದು ಸಾಧನಾ ಅಕ್ಯಾಡೆಮಿಯ ಸಂಸ್ಥಾಪಕ ಮಂಜುನಾಥ್ ಬಿ.ಹೇಳಿದರು.
ಮಂಗಳವಾರದಂದು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡ 20 ನೇ ಶರಣ ಸಂಸ್ಕೃತಿ ಉತ್ಸವದ ಕೊನೆಯ ಯುವ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು

ಯುವಕರು ಯುಥಪುಲಾಗಿ ಕಾಣುವುದುಕ್ಕಿಂತ ಯೂಥಪುಲಾಗಿ ಬದುಕಬೇಕು. ಬಡತನ ದಾರಿದ್ಯ್ರವನ್ನು ಹಣೆಬರಹ ಸೃಷ್ಟಿ ಮಾಡುದಿಲ್ಲ ನಾವೇ ಅದನ್ನು ಸೃಷ್ಟಿ ಮಾಡಿಕೊಳ್ಳುತ್ತೇವೆ‌. ನಾನು ಬದುಕುತ್ತಿರುವ ಬದುಕು ಸಾಮನ್ಯವಲ್ಲ ಎಂದು ಮನಗಂಡು ಮುನ್ಪಡೆದರೆ ಸಾಧಿಸಲು ಸಾಧ್ಯ. ಯುವಪೀಳಿಗೆ ಸಾಮ್ರಾಟವನ್ನು ಕಟ್ಟತ್ತೇವೆ ಎಂದು ದೃಢ ನಿರ್ದಾರ ಕೈಗೊಂಡರೆ ಸಾಮ್ರಾಜ್ಯ ಕಟ್ಟಬಹುದು. ಯುವಕರು ಸ್ವಲ್ಪ ಸಾಧಿಸಿದರೆ ಅದೇ ದೊಡ್ಡ ಸಾಧನೆ ಎಂದು ಅಂದುಕೊಳ್ಳದೆ ನಿರಂತರ ಪ್ರಯತ್ನ ಶೀಲರಾಗಬೇಕು. ಯುವಕರು ಯೋಗಪಟು ಆಗಬೇಕು , ರೋಗಪಟು ಆಗಬಾರದು . ಆರೋಗ್ಯದ ಜೊತೆಗೆ ಸಮಾಜಕ್ಕೆ ಕೊಡುವಷ್ಟು ಸಂಪತ್ತನ್ನು ಸಂಪಾದಿಸಿ ಸದೃಢ ಸಮಾಜವನ್ನು ಕಟ್ಟಬೇಕು ಎಂದು ಹೇಳಿದರು.

ಕಾರ್ಯ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಹಂದಿಗುಂದ ವಿರಕ್ತಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ನಮ್ಮ ಭಾರತದಲ್ಲಿ ಅತ್ಯಂತ ಹೆಚ್ಚು ಯುವಕರು ಇದ್ದಾರೆ. ವಿವೇಕಾನಂದರ ಮಾರ್ಗ ನಮಗೆ ಆದರ್ಶವಾಗಬೇಕಾಗಿದೆ. ಶಾಲೆ, ಕಾಲೇಜು , ಗ್ರಂಥಾಲಯದಲ್ಲಿ ಕಾಣಬೇಕಾದ ಯುವಕರು ಇಂದು ಫಬ್ ,ಕ್ಲಬ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ನಮ್ಮ ದುರ್ದೈವ . ಯುವಕರು ಮೌಢ್ಯ, ಮೂಢನಂಬಿಕೆ ಯಿಂದ ಹೊರಬರಬೇಕು, ಸಂಸ್ಕಾರ ವಿಲ್ಲದ ಶಿಕ್ಷಣದಿಂದ ಏನು ಸಾಧಿಸಲು ಸಾಧ್ಯವಿಲ್ಲ. ಅದೃಷ್ಟದ ಮೇಲೆ ನಂಬಿಕೆ ಇಟ್ಟುಕೊಂಡವರಿಂದ ಏನು ಸಾಧಿಸಲು ಸಾಧ್ಯವಿಲ್ಲ‌. ನಾವು ಮನಸಾರೆ ದುಡಿಯುವ ಕಾಯಕ ನಮ್ಮನ್ನು ನಾಯಕರನ್ನಾಗಿ ಮಾಡುತ್ತದೆ. ಯುವಕರು ಮನಸ್ಸು ಮಾಡಿದರೆ ದೇಶವನ್ನು ಬದಲಾವಣೆ ಮಾಡಬಹುದು ಆ ದಿಸೆಯಲ್ಲಿ ಯುವಕರು ಮುನ್ನೆಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದ ನೇತೃತ್ವವನ್ನು ವಹಿಸಿ ಮಾತನಾಡಿದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಶರಣ ಸಂಸ್ಕೃತಿ ಉತ್ಸವ ಅಚ್ಚುಕಟ್ಟಾಗಿ ಜರುಗಬೇಕಾದರೆ ಪ್ರತಿಯೊಬ್ಬ ಗೋಕಾಕ ಜನರ ಪರಿಶ್ರಮ ದೊಡ್ಡದಾಗಿದೆ‌. ಶರಣ ಸಂಸ್ಕೃತಿ ಉತ್ಸವದ ನೆಪದಲ್ಲಿ ಹಲವು ಚಿಂತಕರನ್ನು ಕರೆಯಿಸಿ ಅವರಿಂದ ಹಲವು ಚಿಂತನೆಗಳನ್ನು ಹರಿಬಿಟ್ಟು ಅವರಂತೆ ಈ ಭಾಗದ ಯುವಕರು ಆಗಬೇಕು ಎಂಬ ಮಹದಾಸೆ ಶ್ರೀ ಶೂನ್ಯ ಸಂಪಾದನ ಮಠ ಹೊಂದಿದೆ. ಹಲವು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳವನ್ನು ಸಂಘಟಿಸುತ್ತಿದ್ದು, ಮುಂದೆ ಶ್ರೀಮಠದಿಂದ ಸಮಾಜಕ್ಕೆ ಏನಾದರೂ ಕೊಡಬೇಕು ಎಂಬ ಯೋಜನೆ ಮತ್ತು ಯೋಚನೆ ಹೊಂದಿದ್ದು, ಮುಂದಿನ ದಿನಗಳಲ್ಲಿ ಇನ್ನು ಹತ್ತು ಹಲವಾರು ರಚನಾತ್ಮಕ ಕಾರ್ಯಗಳನ್ನು ಮಾಡುವ ವಿಚಾರವಿದ್ದು, ಅದರ ಸದುಪಯೋಗ ಪಡೆದುಕೊಂಡು ಪಾವನರಾಗಬೇಕು ಎಂದು ಶ್ರೀ ಶೂನ್ಯ ಸಂಪಾದನ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಕಾರ್ಯಕ್ರಮವನ್ನು ನವದೆಹಲಿ ಐಸ್ಕೋ ಅಧ್ಯಕ್ಷ ಲೋಕೇಶ್ವರ ನಾಯಕ ಉದ್ಘಾಟಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಯಲಬುರ್ಗಾದ ಪೂಜ್ಯಶ್ರೀ ಅಪ್ಪಾಜಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ಶೂನ್ಯ ಸಂಪಾದನ ಮಠದ ಕಾಯಕಶ್ರೀ ಪ್ರಶಸ್ತಿ ಪಡೆದ ಮಹನೀಯರ ಬಗ್ಗೆ ಪತ್ರಕರ್ತ ಸಾದಿಕ ಹಲ್ಯಾಳ ಬರೆದ “ಕರ್ಮಯೋಗಿ” ಪುಸ್ತಕವನ್ನು ಗಣ್ಯರು ಲೋಕಾರ್ಪಣೆಗೊಳಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸತ್ಕರಿಸಿ, ಗೌರವಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಡಾ.ಮೋಹನ ಭಸ್ಮೆ, ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ನಿರ್ದೇಶಕ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಕಾಂಗ್ರೆಸ್ ಮುಖಂಡ ಮಹಾಂತೇಶ ಕಡಾಡಿ, ಎಬಿವಿಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪೃಥ್ವಿ ಕುಮಾರ್, ಉತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಕೊಟಗಿ, ಶಂಕರ ಗೋರೋಶಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರುಗಳಾದ ಎಸ್.ಕೆ.ಮಠದ , ಆರ್.ಎಲ್.ಮಿರ್ಜಿ ನಿರೂಪಿಸಿ, ವಂದಿಸಿದರು.

Related posts: