ಗೋಕಾಕ:ದೇವದಾಸಿಯರ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಒದಗಿಸಬೇಕು : ನಾರಿ ಶಕ್ತಿ ಪ್ರಶಸ್ತಿ ಪುರಸ್ಕೃತೆ ಶೋಭಾ ಗಸ್ತಿ ಆಗ್ರಹ

ದೇವದಾಸಿಯರ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಒದಗಿಸಬೇಕು : ನಾರಿ ಶಕ್ತಿ ಪ್ರಶಸ್ತಿ ಪುರಸ್ಕೃತೆ ಶೋಭಾ ಗಸ್ತಿ ಆಗ್ರಹ
ಗೋಕಾಕ ಫೆ 20 : ದೇವದಾಸಿಯರ ಮಕ್ಕಳು ಶಾಲೆಗಳಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು. ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಒದಗಿಸಬೇಕು. ದೇವದಾಸಿಯರಲ್ಲಿ ಕಾನೂನಿನ ಅರಿವು ಮೂಡಿಸಬೇಕು. ಅವರಿಗೆ ಕೆಲಸ ನೀಡಿ ಅದಕ್ಕೆ ಅನುಗುಣವಾಗಿ ಕೂಲಿ ನಿಗದಿಪಡಿಸಬೇಕು. ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಆ ಮೂಲಕ ಈ ಅನಿಷ್ಟ ಪದ್ಧತಿಯ ನಿರ್ಮೂಲನೆಗೆ ಸರ್ಕಾರ ಪ್ರಯತ್ನಿಸಬೇಕು’ ಎಂದು ನಾರಿ ಶಕ್ತಿ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಶೋಭಾ ಗಸ್ತಿ ಆಗ್ರಹಿಸಿದರು.
ಗುರುವಾರದಂದು ಅಮ್ಮಾ ಫೌಂಡೇಶನ್ ಮತ್ತು ಚಿಲ್ಡರನ್ ಆಫ್ ಇಂಡಿಯಾ ಪೌಂಡೇಶನ್ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಖಾಸಗಿ ಹೊಟೇಲ್ ನಲ್ಲಿ ಹಮ್ಮಿಕೊಂಡದ್ದ ದೇವದಾಸಿ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳಿಗೆ ಸರಕಾರದಿಂದ ಪರಿಹಾರಕ್ಕಾಗಿ ಮಾಧ್ಯಮದವರೊಂದಿಗೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ದೇವದಾಸಿಯರು ಮೌಢ್ಯದಿಂದ ಹೊರಬರಬೇಕು. ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಚಿಂತನೆ ರೂಢಿಸಿಕೊಳ್ಳಬೇಕು.ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬನೆಯಾಗದೆ ಸ್ವವಿವೇಚನೆಯಿಂದ ನಿರ್ಧಾರಗಳನ್ನು ಕೈಗೊಳ್ಳಬೇಕು.ರಾಜ್ಯದಲ್ಲಿರುವ ದೇವದಾಸಿಯರು ಹಾಗೂ ಅವರ ಸ್ಥಿತಿಗತಿ ಬಗ್ಗೆ ಸರ್ಕಾರ ಕೂಡಲೇ ಅಧ್ಯಯನ ನಡೆಸಬೇಕು’ ಎಂದರು.
ಮಾಸಿಕ ಪಿಂಚಣಿ ₹5 ಸಾವಿರಕ್ಕೆ ಹೆಚ್ಚಿಸಿ :
‘ದೇವದಾಸಿಯರಿಗೆ ನೀಡಲಾಗುತ್ತಿರುವ ಸಹಾಯ ಧನ ಅಥವಾ ಮಾಸಿಕ ಪಿಂಚಣಿಯನ್ನು ₹5 ಸಾವಿರಕ್ಕೆ ಹೆಚ್ಚಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರಕಾರ ಈ ಕೂಡಲೇ ಪರಿಹರಿಸಬೇಕು.
ದೇವದಾಸಿ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಮೀಸಲಾತಿ ಒದಗಿಸಿದರೆ ದೇವದಾಸಿ ಮಕ್ಕಳು ಸಹ ಪಿ.ಎಚ್.ಡಿ ಮಾಡಲು ಸಾಧ್ಯವಾಗುತ್ತದೆ .
ಸಮಾಜದ ಎಲ್ಲಾ ವರ್ಗ, ಸಮುದಾಯಗಳಿಗೆ ಮೀಸಲಾತಿ ಇದ್ದಂತೆ ದೇವದಾಸಿ ಮಕ್ಕಳಿಗೆ ಮೀಸಲಾತಿ ಒದಗಿಸದರೆ ನಾವು ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿದರು. ರಾಜ್ಯದಲ್ಲಿ 46 ಸಾವಿರ ದೇವದಾಸಿಯರು ಇದ್ದಾರೆ. ಸರಕಾರದ ಸೌಲಭ್ಯ ಬೆರಳೆಣಿಕೆಯಷ್ಟು ದೇವದಾಸಿಯರಿಗೆ ಸರಕಾರದ ಸೌಲಭ್ಯಗಳು ಸಿಗುತ್ತವೆ. ದೇವದಾಸಿಯ ತಾಯಂದಿರ ಮರು ಸಮೀಕ್ಷೆ ಮಾಡಬೇಕು ಎಂದು ಒತ್ತಾಯಿಸಿದರು. ಶಿಕ್ಷಣ, ವೃತ್ತಿ ತರಬೇತಿ, ಪರೀಕ್ಷೆಗಳು ಹಾಗೂ ವೃತ್ತಿ ಮತ್ತಿತರ ಎಲ್ಲ ರೀತಿಯ ಸರ್ಕಾರದ ಹಾಗೂ ಸರ್ಕಾರೇತರರ ಅರ್ಜಿ, ನಮೂನೆಗಳು, ಪ್ರಮಾಣ ಪತ್ರಗಳು ಮತ್ತಿತರ ಆನ್‌ಲೈನ್‌ಮತ್ತು ಆಫ್‌ಲೈನ್‌ದಾಖಲೆಗಳಲ್ಲಿ ತಂದೆಯ ಹೆಸರು ಬರೆಯುವುದು ಐಚ್ಛಿಕವಾಗಲೇಬೇಕು. ತಾಯಿಯೊಬ್ಬರದೇ ಹೆಸರನ್ನು ನಮೂದಿಸುವುದು ಅಧಿಕೃತವಾಗಿ ಸ್ವಾಗತಾರ್ಹವಾಗಲಿ. ಇದರಿಂದ ತಂದೆಯ ಹೆಸರು ಗೊತ್ತಿಲ್ಲದ. ತಿಳಿಯದ, ಇಲ್ಲದ ನಿಶೇಧಿತ ದೇವದಾಸಿ ಪದ್ಧತಿಗೆ ಸಿಲುಕಿರುವ ತಾಯಂದಿರ ಮಕ್ಕಳು ವ್ಯಂಗ್ಯ, ಹಾಸ್ಯ, ಮೋಸ, ಸೌಲಭ್ಯಗಳಿಂದ ವಂಚನೆಗೊಳಗಾಗುತ್ತಿರುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ದೇವದಾಸಿ ಶೋಭಾ ಸನದಿ , ನಿಂಗವ್ವ ಕಾಂಬಳೆ,ಯಶೋಧ ಗಸ್ತಿ, ಗಂಗವ್ವ ಪರಸನ್ನವರ ಸೇರಿದಂತೆ ಅನೇಕರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನಿಷ್ಟ ದೇವದಾಸಿ ಪದ್ಧತಿಯ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಸಂವಾದ ಕಾರ್ಯಕ್ರಮದಲ್ಲಿ ಮೂಡಲಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಾ ಗಿರೆನ್ನವರ, ಗೋಕಾಕ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಾದಿಕ ಹಲ್ಯಾಳ, ಚಿಕ್ಕೋಡಿಯ ಪ್ರಜಾವಾಣಿ ವರದಿಗಾರ ಚಂದ್ರಶೇಖರ್ ಚಿನ್ನಕೇಕರ, ಮನೋಹರ್ ಮ್ಯಾಗೇರಿ, ಮಂಜುಳಾ ಮಾದರ, ಉಪಸ್ಥಿತರಿದ್ದರು.