ಗೋಕಾಕ:ರೈತರು ಆರ್ಥಿಕವಾಗಿ ಸಬಲರಾಗಲು ಜಾನುವಾರಗಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ : ತಳದಪ್ಪ ಅಮ್ಮಣಗಿ
ರೈತರು ಆರ್ಥಿಕವಾಗಿ ಸಬಲರಾಗಲು ಜಾನುವಾರಗಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ : ತಳದಪ್ಪ ಅಮ್ಮಣಗಿ
ಗೋಕಾಕ ನ 1: ರೈತರು ಆರ್ಥಿಕವಾಗಿ ಸಬಲರಾಗಲು ಜಾನುವಾರಗಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ನಗರ ಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ ಹೇಳಿದರು.
ಬುಧವಾರದಂದು ನಗರದ ಪಶು ಸಂಗೋಪನಾ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡ 13ನೇ ಸುತ್ತಿನ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮವನ್ನು ಗೋಮಾತೆಗೆ ಪೂಜೆಯನ್ನು ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಅವುಗಳ ಸದುಪಯೋಗಪಡಿಸಿಕೊಳ್ಳಬೇಕು, ಪಶು ಪಾಲನಾ ಇಲಾಖೆಯ ಮಾರ್ಗದರ್ಶನದಲ್ಲಿ ತಮ್ಮ ಜಾನುವಾರಗಳ ಆರೋಗ್ಯದ ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು.
ಪಶು ಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ಮೋಹನ ಕಮತ ಅವರು ಮಾತನಾಡಿ, ಗೋಕಾಕ ತಾಲೂಕಿನಲ್ಲಿ ಸುಮಾರು 2 ಲಕ್ಷ 10 ಸಾವಿರ ಜಾನುವಾರುಗಳಿದ್ದು ಅವುಗಳಿಗೆ ಲಸಿಕೆ ಹಾಕಲು ಲಸಿಕೆದಾರರ ತಂಡಗಳನ್ನು ರಚಿಸಲಾಗಿದ್ದು, ಇವರಿಗೆ ಬೆಳಗಾವಿ ಹಾಲು ಒಕ್ಕೂಟದಿಂದ ಗ್ರಾಮಾಂತರ ಪ್ರದೇಶಗಳಿಗೆ ಹೋಗಲು ವಾಹನಗಳ ಸೌಕರ್ಯವನ್ನು ಕಲ್ಪಿಸಲಾಗಿದೆ. ಜಾನುವಾರುಗಳಿಗೆ ಲಸಿಕೆಯನ್ನು ನೀಡಲು ಮನೆ ಬಾಗಿಲಿಗೆ ಬರುವ ಲಸಿಕೆದಾರರಿಗೆ ಸಹಕಾರ ನೀಡಿ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಂಡು ಅವುಗಳ ಆರೋಗ್ಯವನ್ನು ಕಾಪಾಡಿ, ಆರ್ಥಿಕವಾಗಿ ನಷ್ಟವಾಗುದನ್ನು ತಡೆಗಟ್ಟುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷ ಯಲ್ಲಪ್ಪ ನಾಯಿಕ, ನಗರ ಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ಸ್ಥಾಯಿ ಸಮಿತಿ ಚೇರಮನ್ ಭಗವಂತ ಹುಳ್ಳಿ, ಸದಸ್ಯರಾದ ಪರಶುರಾಮ ಭಗತ್, ಮುಖಂಡ ಅಬ್ಬಾಸ ದೇಸಾಯಿ, ಇಲಾಖೆಯ ಡಾ|| ಶಶಿಕಾಂತ ಕೌಜಲಗಿ, ತಾಲೂಕಿನ ಎಲ್ಲ ಪಶು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರು ಇದ್ದರು.