ಗೋಕಾಕ:“ಟಿಪ್ಪು ಜಯಂತಿ ಅಪಸ್ವರ ಬೇಡ” ಎಸ್.ಎಂ.ಪೀರಜಾದೆ
“ಟಿಪ್ಪು ಜಯಂತಿ ಅಪಸ್ವರ ಬೇಡ”
ಎಸ್. ಎಂ.ಪೀರಜಾದೆ ಉಪನ್ಯಾಸಕರು ಗೋಕಾಕ:
ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಣೆ ವಿಷಯವಾಗಿ ಕಳೆದ ಮೂರು ವರ್ಷಗಳಿಂದ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ ಬಿಜೆಪಿ ಸೇರಿದಂತೆ ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಸರಕಾರ ನಾಳೆ ವಿಜಂಭ್ರನೆಯಿಂದ ಟಿಪ್ಪು ಜಯಂತಿ ಆಚರಿಸಲು ಸಜ್ಜಾಗಿದೆ ಇದರ ಕುರಿತು ಗೋಕಾಕಿನ ರಾಜ್ಯಶಾಸ್ತ್ರ ಉಪನ್ಯಾಸಕ ಪೀರಜಾದೆ ಅವರು ಬರೆದಿರುವ ಲೇಖನ
‘ಮಾನವನು ವಿವೇಚನೆವುಳ್ಳ ಪ್ರಾಣಿ’ ಎನ್ನುವರು. ಏಕೆಂದರೆ, ಸರಿತಪ್ಪುಗಳನ್ನು ಪರಾಮರ್ಶಿಸುವ, ಉಚಿತ ಅನುಚಿತಗಳನ್ನು ಅಳೆಯುವ ಸಾಮಥ್ರ್ಯ ಮಾನವನಿಗಿದೆ ಎಂದು ನಂಬಲಾಗಿದೆ. ಆದರೆ ದುರಂತ ನೋಡಿ, ಸಕಲ ಜೀವಾತ್ಮಗಳಲ್ಲಿ ಮಾನವ ಶ್ರೇಷ್ಠ ಎಂದು ಭಾವಿಸಲ್ಪಟ್ಟ ಮಾನವನು ತನ್ನ ವಿವೇಕವನ್ನು ಕಳೆದುಕೊಂಡು ಪಟ್ಟಭದ್ರ ಹಿತಾಸಕ್ತಿಗಾಗಿ ಇತಿಹಾಸದ ಪುಟಗಳಲ್ಲಿ ಹುದುಗಿ ಹೋಗಿದ್ದ ಅಹಿತಕರ ಘಟನೆಗಳನ್ನು ಮತ್ತೇ ಮತ್ತೇ ಕೆದಕಿ ಹೊಸ ಗಾಯಗಳನ್ನಾಗಿ ಮಾಡುತ್ತ ಸಮಾಜದಲ್ಲಿ ಅಶಾಂತಿ-ಅಸ್ಥಿರತೆಯನ್ನುಂಟು ಮಾಡುತ್ತಿರುವುದು ಅಕ್ಷಮ್ಯ.
ನಮ್ಮ ಮಹಾನ್ ಭಾರತ ದೇಶ ತನ್ನ ಧರ್ಮಾತೀತ-ಜಾತ್ಯಾತೀತ-ಭಾಷಾತೀತ ವಿಚಾರಗಳಿಂದಾಗಿ ಸರ್ವೆಜನಾ ಸುಖಿನೋಭವಂತು ಎಂಬ ಉದಾತ್ತ ಉಕ್ತಿಯಿಂದಾಗಿ ಜಗತ್ತಿನಲ್ಲಿಯೇ ವಿಶಿಷ್ಟ ಸ್ಥಾನ ಹೊಂದಿದೆ. ವಿಶಾಲ ಮನೋಭಾವನೆ ಎನ್ನುವಿರೋ?, ತುಷ್ಠಿಕರಣ ಎನ್ನುವಿರೋ? ಒಟ್ಟಿನಲ್ಲಿ ವಿವಿಧ ಧರ್ಮ, ಮತ, ಪಂಥ, ಕೋಮುಗಳ ಸಂಪ್ರದಾಯಗಳನ್ನು, ಜಯಂತಿಗಳನ್ನು ಸಡಗರದಿಂದ ಆಚರಿಸಲಾಗುತ್ತಿದೆ.
ತಡವಾಗಿಯಾದರೂ ಸರಿ 2015 ರಿಂದ ಮೈಸೂರು ಹುಲಿ ಎಂದೇ ಖ್ಯಾತನಾದ ‘ಹಜರತ ಟಿಪ್ಪುಸುಲ್ತಾನ’ ಜಯಂತಿಯನ್ನು ಕರ್ನಾಟಕ ರಾಜ್ಯಸರ್ಕಾರ ಅಧಿಕೃತ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುತ್ತ ಬಂದಿರುತ್ತದೆ. ಈ ಸಂಬಂಧ ವಿರೋಧ, ಅಪಸ್ವರ ವ್ಯಕ್ತವಾಗುತ್ತಿರುವುದು ವಿಷಾದನೀಯ. ಪ್ರಜಾಪ್ರಭುತ್ವದಲ್ಲಿ ಪರ ವಿರೋಧ ಅಭಿಪ್ರಾಯಗಳು ಸ್ವಾಭಾವಿಕ. ಆದರೆ ಕೇವಲ ವಿರೋಧ ಮಾಡುವುದಕ್ಕಾಗಿಯೇ ನಾವಿರುವುದು ಎಂಬುದು ತಪ್ಪು. ಬುದ್ದಿ, ವಿವೇಕ, ವಿಚಕ್ಷಣೆ, ನೀತಿ, ಮೌಲ್ಯ ಹೊಂದಿರುವ ನಾವುಗಳು ಅದಕ್ಕೆ ತಕ್ಕಂತೆ ವರ್ತಿಸುವ ಅವಶ್ಯಕತೆ ಇದೆ. ಇತ್ತೀಚಿನ ದಿನಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮಹಾತ್ಮರನ್ನು, ಸಂತರನ್ನು, ರಾಷ್ಟ್ರ ನಾಯಕರುಗಳನ್ನು ಟೀಕಿಸುವುದು, ಹೀಯಾಳಿಸುವುದು ಒಂದು ಜೀವನ ಶೈಲಿಯಾಗುತ್ತಿದೆ. ಯಾವುದೇ ವ್ಯಕ್ತಿ ಸಮೂಹವನ್ನು ವಿರೋಧಿಸಲು ಸಾಕಷ್ಟು ಸಾಕ್ಷಾಧಾರ, ಪುರಾವೆ, ತರ್ಕಬದ್ಧವಾದ ಮಂಡನೆ ಇರಬೇಕು. ಕೇವಲ ಉಹಾಪೋಹಗಳ, ಪ್ರಚೋದನೆಗಳ ಮೂಲಕ ವಿರೋಧ ವ್ಯಕ್ತಪಡಿಸುವುದು ತರವಲ್ಲ.
ಮಹಾನ್ ಸಮತಾವಾದಿಯಾದ ಕಾರ್ಲ ಮಾಕ್ರ್ಸನು ‘ನೈಜ ಸತ್ಯ ಹೊರಹೊಮ್ಮಬೇಕಾದರೆ ವಾದ- ಪ್ರತಿವಾದಗಳಿರಲೇಬೇಕು ಇವುಗಳ ಚಿಂತನ-ಮಂಥನಗಳಿಂದ ಸಂಯೋಜಕವಾದ ಫಲಿಸುತ್ತದೆ, ಅಲ್ಲದೇ ಇದು ಎರಡು ವಿಭಿನ್ನ ವಿಚಾರಗಳನ್ನು ಒಂದುಗೂಡಿಸಿ ಮುನ್ನಡೆಸುತ್ತದೆ’. ಎಂದು ಅಭಿಪ್ರಾಯಪಡುತ್ತಾನೆ. ಈ ದಿಶೆಯಲ್ಲಿ ಯಾವುದೇ ಪೂರ್ವಾಗ್ರಹ ಪೀಡಿತ ಭಾವನೆ, ರಾಗ-ದ್ವೇಷಗಳಿಗೆ ಬಲಿಯಾಗದೇ ನೂರಾರು ಉತ್ತಮ ಗುಣಗಳನ್ನು ನಿರ್ಲಕ್ಷ್ಯಿಸಿ ಕೆಲವೇ ಕೆಲವು ತಪ್ಪುಗಳನ್ನು ದೊಡ್ಡದಾಗಿಸಿ ಸಂಘರ್ಷಕ್ಕೆ ಎಡೆ ಮಾಡಿ ಸಮಾಜದ ಸ್ವಾಸ್ಥ್ಯ, ಏಕತೆ, ಸಮಗ್ರತೆ, ಸಾಮರಸ್ಯಗಳನ್ನು ಹಾಳು ಮಾಡುವುದು ಎಂಥಹ ವಿಪರ್ಯಾಸ? ಇದು ರಾಷ್ಟ್ರದ ಒಟ್ಟಾರೆ ಸಮಗ್ರತೆ ಹಾಗೂ ಸುರಕ್ಷೆಗೆ ಅಪಾಯಕಾರಿಯಾಗಿರುತ್ತದೆ.
ಭಕ್ತಿಭಂಡಾರಿ ಬಸವೇಶ್ವರರು ‘ಇವನಾರವ, ಇವನಾರವ ಎಂದೆನಿಸದೇ ಇವ ನಮ್ಮವ ಎಂದೆನಿಸಯ್ಯಾ’ ಎನ್ನುವಂತೆ ಟಿಪ್ಪು ನಮ್ಮವ ಭಾರತಮಾತೆ-ಕನ್ನಡಾಂಭೆಯ ಹೆಮ್ಮೆಯ ಮೈಸೂರು ಹುಲಿ ಎಂದೆನಿಸಯ್ಯಾ ಎಂದು ಎಲ್ಲರೂ ಹೇಳುವಂತಾಗಲಿ ಎಂಬುದೇ ನನ್ನ ಆಶಯ. ಟಿಪ್ಪು ಸುಲ್ತಾನರವರನ್ನು ‘ಹಜರತ, ಔಲಿಯಾ’ ಎಂದರೆ ‘ಪರಮಪೂಜ್ಯ, ಗೌರವಾನ್ವಿತ’ ಎಂದು ಸಂಭೋದಿಸುತ್ತಾರೆ. ನಿಸ್ಸಂದೇಹವಾಗಿ ಆತನೊಬ್ಬ ಮಹಾನ್ ರಾಷ್ಟ್ರಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ, ಜಾತ್ಯಾತೀತ ನಾಯಕನಾಗಿದ್ದನು ಎಂದು ನಮ್ಮ ಮಹಾಮಹಿಮ ರಾಷ್ಟ್ರಪತಿ ರಾಮನಾಥ್ ಕೋವಿಂದರವರು ಅನುಮೋದಿಸಿರುತ್ತಾರೆ.
ಅರ್ಕಾಟಿನ ಪ್ರಸಿದ್ಧ ದರ್ಗಾದ ಸಂತರಾದ ‘ಟಿಪ್ಪು ಸುಲ್ತಾನ ಔಲಿಯಾ’ ರವರ ಕ್ಷೇತ್ರಕ್ಕೆ ಹೋಗಿ ಹರಕೆ ಹೊತ್ತಿದ್ದರ ಫಲವಾಗಿ ಜನಿಸಿದ್ದಕ್ಕಾಗಿ ಹೈದರಾಲಿ ಹಾಗೂ ಫಕ್ರುನ್ನೀಸಾರವರು ತಮ್ಮ ಪುತ್ರನಿಗೆ ‘ಟಿಪ್ಪುಸುಲ್ತಾನ’ ಎಂದು ಪ್ರೀತಿಯಿಂದ ಕರೆಯುತ್ತಾರೆ. ಆತನ ಇನ್ನೊಂದು ಹೆಸರು ಫತೇ ಅಲಿಖಾನ್. ಅತ್ಯುತ್ತಮ ಶಸ್ತ್ರಾಭ್ಯಾಸ-ಆಡಳಿತ ಶಿಕ್ಷಣ ಪಡೆದಿದ್ದ ಟಿಪ್ಪು ಕನ್ನಡ, ಉರ್ದು, ಮರಾಠಿ, ಪರ್ಶಿಯನ್, ಇಂಗ್ಲೀಷ್, ಪ್ರೆಂಚ್ ಹೀಗೆ ಹಲವು ಭಾಷಾ ವಿಶಾರದನಾಗಿದ್ದನು. ತನ್ನ 15ನೇ ವಯಸ್ಸಿನಲ್ಲಿಯೇ ತಂದೆ ಹೈದರಾಲಿಯೊಂದಿಗೆ ಸೇರಿ ಮಲಬಾರ, ಬಿದನೂರು ಮುಂತಾದ ಯುದ್ಧಗಳಲ್ಲಿ ಭಾಗವಹಿಸಿದ್ದನು. ಆತ ಮಳವಳ್ಳಿ, ಕೋಣನೂರು, ಧರ್ಮಪುರಿ ಹಾಗೂ ಪೆನ್ನಾಗರಗಳ ಜಹಗೀರದಾರನಾಗಿ ಸೇವೆ ಸಲ್ಲಿಸಿದ್ದನು. 1782 ಡಿಸೆಂಬರ್ 29 ರಂದು ಸಿಂಹಾಸನವನ್ನೇರಿ ‘ನವಾಬ ಟಿಪ್ಪುಸುಲ್ತಾನ’ ‘ಬಹದ್ದೂರ’ ‘ಖುದಾದಾದ ಸರ್ಕಾರ’ ಹಾಗೂ ‘ಬಾದಶಹಾ’ ಎಂಬ ಬಿರುದುಗಳನ್ನು ಧರಿಸುತ್ತಾನೆ.
ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಆಂಗ್ಲರನ್ನು ಸೋಲಿಸಿ ಅರ್ಕಾಟ್, ಬಿದನೂರು, ಮಂಗಳೂರುಗಳನ್ನು ವಶಪಡಿಸಿಕೊಳ್ಳುತ್ತಾನೆ. ಬ್ರಿಟಿಷರ ಒಡೆದು ಆಳುವ ನೀತಿ, ನಮ್ಮವರದೇ ಪಕ್ಷಪಾತತನಗಳಿಂದಾಗಿ ಟಿಪ್ಪುವಿಗೆ 3ನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಸೋಲುಂಟಾಗುತ್ತದೆ. ಯುದ್ಧ ಪರಿಹಾರ ನೀಡಲು ಸಾಧ್ಯವಾಗದಿದ್ದಾಗ ತನ್ನೆರಡು ಮಕ್ಕಳಾದ ಅಬ್ದುಲ್ ಖಾಲಿಕ್, ಹಾಗೂ ಮೋಹಿಯುದ್ದಿನ್ ರವರನ್ನು ಬ್ರಿಟಿಷರ ಬಳಿ ಒತ್ತೆ ಇಡುತ್ತಾನೆ. ಇದು ಜಗತ್ತಿನಲ್ಲಿಯೇ ಒಂದು ಅಪರೂಪದ ಉದಾಹರಣೆಯಾಗಿದೆ. ಬ್ರಿಟಿಷರ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದರೆ ಟಿಪ್ಪು ಆರಾಮ ಜೀವನ ಸಾಗಿಸಬಹುದಾಗಿತ್ತು. ಆದರೆ ಕಟ್ಟಾ ದೇಶಾಭಿಮಾನಿಯಾಗಿದ್ದ ಟಿಪ್ಪು ಬ್ರಿಟಿಷರಿಗೆ ಶರಣಾಗುವುದಿಲ್ಲ, ಹಾಗೂ ಪರಿಹಾರಧನ ಕೂಡಿಸಲು ಪ್ರಜೆಗಳ ಮೇಲೆ ಯಾವುದೇ ಹೆಚ್ಚಿನ ತೆರಿಗೆ ಭಾರ ವಿಧಿಸುವುದಿಲ್ಲ. ಮುಂದೆ ಲಾರ್ಡ ವೆಲ್ಲೆಸ್ಲಿ ಟಿಪ್ಪುವಿನ ಮೇಲೆ ಇಲ್ಲಸಲ್ಲದ ಒತ್ತಡ ಹೇರಿ ಶರಣಾಗಲು ಆದೇಶಿಸುತ್ತಾನೆ. ಇದಕ್ಕೊಪ್ಪದ ಟಿಪ್ಪು ‘ನರಿಯಂತೆ ನೂರು ದಿನ ಬದುಕುವುದರ ಬದಲು ಹುಲಿಯಂತೆ ಮೂರು ದಿನ ಬದುಕುವುದು ಲೇಸು’ ಎಂದು ಯುದ್ಧಕ್ಕೆ ಸನ್ನದ್ಧನಾಗುತ್ತಾನೆ. ಬ್ರಿಟಿಷರು ನಿಜಾಂ, ಅರ್ಕಾಟಿನ ನವಾಬ್ ಹಾಗೂ ಮರಾಠರ ಸಹಾಯದಿಂದ ಟಿಪ್ಪುವಿನ ಮೇಲೆ ದಾಳಿ ನಡೆಸುತ್ತಾರೆ. ಟಿಪ್ಪು ಏಕಾಂಗಿಯಾಗಿ ಹೋರಾಡುತ್ತಾ 1799-ಮೇ-4 ರಂದು ವೀರ ಮರಣ ಹೊಂದುತ್ತಾನೆ.
ಟಿಪ್ಪು ತಾನೇ ದೊರೆಯಾಗಿದ್ದರೂ ನಿರಂಕುಶಾಧಿಕಾರಿಯಂತೆ ವರ್ತಿಸದೇ ಮಂತ್ರಿಮಂಡಳದ ಸಲಹೆಯಂತೆ ಮುಖ್ಯವಾಗಿ ದಿವಾನ್ ಪೂರ್ಣಯ್ಯನವರ ಸಲಹೆಯಂತೆ ಆಡಳಿತ ನಡೆಸುತ್ತಿದ್ದನು. 12 ಟಂಕಸಾಲೆ ಸ್ಥಾಪಿಸಿ ಚಿನ್ನ, ಬೆಳ್ಳಿ, ಹಾಗೂ ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತಂದಿದ್ದನು. ವಾಣಿಜ್ಯ, ವ್ಯಾಪಾರ ಚಟುವಟಿಕೆಗಳನ್ನು ಉತ್ತೇಜಿಸುವುದಕ್ಕಾಗಿ ಜೋರ್ಡಾನ್, ಮಸ್ಕತ್ ಹಾಗೂ ಕರಾಚಿಗಳಲ್ಲಿ ವ್ಯಾಪಾರ ಮಳಿಗೆಗಳನ್ನು ಸ್ಥಾಪಿಸುತ್ತಾನೆ. ಸಾಮ್ರಾಜ್ಯದ ವಿವಿಧೆಡೆಯಲ್ಲಿ ಕಬ್ಬಿಣ ಕರಗಿಸುವ, ಎರಕಹೊಯ್ಯುವ, ಬಂದೂಕು, ಪಿರಂಗಿ, ಚಾಕು, ಕೈಗಡಿಯಾರ ತಯಾರಿಸುವ ಕೈಗಾರಿಕೆಗಳನ್ನು ಹಾಗೂ ಫ್ರಾನ್ಸ್ ದೇಶದ ತಂತ್ರಜ್ಞಾನ ಬಳಸಿ ರೇಷ್ಮೆ, ಸಕ್ಕರೆ, ತಯಾರಿಕಾ ಘಟಕಗಳನ್ನು ಪ್ರಾರಂಭಿಸಿದ್ದನು. ರಾಕೆಟ್-ಕ್ಷಿಪಣಿಗಳನ್ನು ತಯಾರಿಸಿ ಯುದ್ಧದಲ್ಲಿ ಬಳಸಿದ ಭಾರತದ ಪ್ರಥಮ ದೊರೆ ಟಿಪ್ಪುಸುಲ್ತಾನ.
ವಾಸ್ತವಿಕವಾಗಿ ಟಿಪ್ಪು ಎಲ್ಲ ಧರ್ಮಿಯರನ್ನೂ, ಅವರ ಆಚರಣೆಗಳನ್ನು ಗೌರವಿಸುತ್ತಿದ್ದನು. ಆತನು ಜೆಜಿಯಾ ತಲೆಗಂದಾಯವನ್ನು ವಿಧಿಸುತ್ತಿರಲಿಲ್ಲ. ದಿವಾನ್ ಪೂರ್ಣಯ್ಯ ಹಾಗೂ ಶೃಂಗೇರಿ ಮಠದ ಶ್ರೀಗಳು ಆತನ ಆಪ್ತರಾಗಿದ್ದರು. ನಮ್ಮವರಿಂದಲೇ ಶೃಂಗೇರಿ ಮಠ ಧ್ವಂಸಗೊಂಡಾಗ ಅದನ್ನು ಪುನರ್ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸುತ್ತಾನೆ. ನಂಜನಗೂಡಿನಲ್ಲಿ ಶಿವದೇವಾಲಯ ಸ್ಥಾಪಿಸಿ ‘ಹಕೀಂ ನಂಜುಂಡ’ ಎಂದು ಕರೆಯುತ್ತಾನೆ. ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯಕ್ಕೆ ಬಂಗಾರದ ಧೂಪ ಉಡುಗೊರೆಯಾಗಿ ನೀಡಿದ್ದನು. ಕಾಂಚಿವರಂ ದೇವಾಲಯಕ್ಕೆ 10 ಸಾವಿರ ಹೊನ್ನುಗಳ ದಾನ, ಗೋಕರ್ಣದ ಈಶ್ವರನ ದೇವಾಲಯಕ್ಕೆ ಭೂಮಿಯನ್ನು ಉಂಬಳಿಯಾಗಿ ನೀಡಿ ಪ್ರತಿದಿನ ಬೆಳಿಗ್ಗೆ ಸಲಾಮಿ ಪೂಜೆಗೆ ವ್ಯವಸ್ಥೆ ಮಾಡಿದ್ದನು. ಹಾಗಾದರೆ ಟಿಪ್ಪುವನ್ನು ನಾವು ಧರ್ಮಾಂಧ ಎನ್ನಬೇಕೆ?
ಟಿಪ್ಪು ಸಾಹಿತ್ಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದನು. ಟಿಪ್ಪುಸುಲ್ತಾನನು ಉರ್ದು, ಕನ್ನಡ, ಹಾಗೂ ಪರ್ಶಿಯನ್ ಭಾಷೆ ಬೆಳೆಯಲು ಪ್ರೋತ್ಸಾಹಿಸಿದ್ದನು, ಹಾಗೂ ಸುಮಾರು 2500 ಗ್ರಂಥಗಳ ಸಂಗ್ರಹ ಮಾಡಿದ್ದನು. ಆತನೊಬ್ಬ ಅಪ್ರತಿಮ ಕಲಾಪೋಷಕನಾಗಿದ್ದು ತೈಲವರ್ಣಚಿತ್ರ, ಕಸ್ತೂರಿ ಕೆತ್ತನೆಗಳಿಂದ ಕೂಡಿದ ದರಿಯಾದೌಲತ್ ಅರಮನೆ, ಮಸೀದೆ-ಏ-ಆಲಾ, ಗುಂಬಸ್-ಏ-ಆಲಾ, ಚಿನ್ನ ಹುಲಿಯ ಮೂರ್ತಿ ಶ್ರೀರಂಗಪಟ್ಟಣ ಕೋಟೆ ಜುಮ್ಮಾ ಮಸೀದಿ ಗುಲಾಮ ಅಲಿಖಾನ್ ಸಮಾಧಿ ಹಾಗೂ ಗ್ಯಾರಿಸ್ ಆಸ್ಪತ್ರೆಗಳನ್ನು ನಿರ್ಮಿಸಿದ್ದನು.
ಟಿಪ್ಪು ಅತೀ ಶುದ್ಧ ಚಾರಿತ್ರ್ಯವುಳ್ಳವ, ದುಶ್ಚಟಗಳಿಂದ ಅತೀತ, ಅಪಾರ ದೈವಿಕ ಭಕ್ತಿವುಳ್ಳವ, ಕುಶಲ ಸೇನಾಪತಿ, ವೀರಯೋಧ, ಹಾಗೂ ದೇಶಪ್ರೇಮಿ ಎಂಬುದು ಸರ್ವವಿಧಿತ. ಪ್ರಸಿದ್ದ ಇತಿಹಾಸಕಾರರಾದ ಡಾ. ಗೋಪಾಲರವರು ‘ಟಿಪ್ಪುವಿನ ಆಡಳಿತ ಅತ್ಯುತ್ತಮವಾಗಿದ್ದು ಪ್ರಜೆಗಳು ಸಂತುಷ್ಠರಾಗಿದ್ದರು’ ಎಂದು ಅಭಿಪ್ರಾಯಪಡುತ್ತಾರೆ. ಬ್ರಿಟಿಷ ಇತಿಹಾಸಕರಾದ ಸ್ಮಟ್ರ್ಸರವರು ಟಿಪ್ಪುವವನ್ನು ‘ಪ್ರಜೆಗಳ ರಕ್ಷಕ’ ಎಂದು ಕರೆದಿರುತ್ತಾರೆ.
ಒಂದು ಮಾತೊಂದಿದೆ ‘ಪ್ರಪಂಚದಲ್ಲಿ ಯಾರೊಬ್ಬರೂ ಪರಿಪೂರ್ಣ ವ್ಯಕ್ತಿತ್ವ ಹೊಂದಿರುವುದಿಲ್ಲ’. ಒಂದಲ್ಲ ಒಂದು ನ್ಯೂನ್ಯತೆಗಳಿರುತ್ತವೆ. ಅದರಂತೆ ಟಿಪ್ಪುಸುಲ್ತಾನ ಕೂಡ ಕೆಲವೊಂದು ತಪ್ಪುತಡೆ ಮಾಡಿದ್ದಿರಬಹುದು. ಆದರೆ ಆತನ ಹತ್ತು ಹಲವಾರು ಕೊಡುಗೆಗಳು ಹಾಗೂ ಪರಕೀಯರ ವಿರುದ್ಧ ಹೋರಾಡಿರುವುದನ್ನು ಮನಗಂಡು ಪ್ರತಿಯೊಬ್ಬರು ಸಡಗರ ಸಂಭ್ರಮಗಳಿಂದ ಟಿಪ್ಪು ಜಯಂತಿ ಆಚರಿಸುವಂತಾಗಲಿ. ಕೇವಲ ಭಾವಾವೇಷಕ್ಕೆ ಒಳಗಾಗದೇ ನಾವಿಂದು ಅರಿವು-ವೈಚಾರಿಕತೆ ಹಾಗೂ ಬಹಳ ಮುಖ್ಯವಾಗಿ ಆತ್ಮವಿಶ್ವಾಸದ ಸಹಾಯದಿಂದ ಸಾಂಪ್ರದಾಯಿಕ ಬಲಾತ್ಕಾರವನ್ನು ತಡೆಯೋಣ. ಸಾಂಪ್ರದಾಯಿಕ ಬಲಾತ್ಕಾರದಿಂದ ವ್ಯಕ್ತಿ ವಿಕಾಸಕ್ಕೆ ಹಾಗೂ ರಾಷ್ಟ್ರೀಯ ಭಾವೈಕ್ಯತೆಗೆ ಗಂಡಾಂತರವೇ ಹೆಚ್ಚು. ದೇಶಕ್ಕಾಗಿ, ಸಮಾಜಕ್ಕಾಗಿ, ಮನುಜಮತಕ್ಕಾಗಿ ಶ್ರಮಿಸಿದ ಯಾವುದೇ ಸಂತರ, ಮಹನೀಯರ ಜಯಂತಿಗಳನ್ನು ಎಲ್ಲರೂ ಒಗ್ಗಟ್ಟಿನಿಂದ ಆಚರಿಸೋಣ ಆ ನಿಟ್ಟಿನಲ್ಲಿ ಟಿಪ್ಪು ಜಯಂತಿಯೂ ಒಂದು ಮಾದರಿಯಾಗಲಿ ಎಂಬುದೇ ಹೃದಯಾಂತರಾಳದ ಆಶಯ.