ಗೋಕಾಕ:ವೀರಶೈವ ಶೈವ ಮತ್ತು ಲಿಂಗಾಯತರಲ್ಲಿ ಒಮ್ಮತ ಮೂಡಲು ಎಂದಿಗೂ ಸಾಧ್ಯವಿಲ್ಲ : ಶ್ರೀ ಜಗದ್ಗುರು ಚನ್ನಬಸವಾನಂದ ಮಹಾಸ್ವಾಮೀಜಿ
ವೀರಶೈವ ಶೈವ ಮತ್ತು ಲಿಂಗಾಯತರಲ್ಲಿ ಒಮ್ಮತ ಮೂಡಲು ಎಂದಿಗೂ ಸಾಧ್ಯವಿಲ್ಲ : ಶ್ರೀ ಜಗದ್ಗುರು ಚನ್ನಬಸವಾನಂದ ಮಹಾಸ್ವಾಮೀಜಿ
ಗೋಕಾಕ ನ 13: ಲಿಂಗಾಯತ ಧರ್ಮ ಮಹಾಸಭಾದ 22ನೇ ವಾರ್ಷಿಕೋತ್ಸವದ ಅಂಗವಾಗಿ ಇದೇ 19 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜ ಮೈದಾನದಲ್ಲಿ ಮುಂಜಾನೆ 10.30 ಗಂಟೆಗೆ ಮಾತೆ ಮಹಾದೇವಿಯವರ ನೇತೃತ್ವದಲ್ಲಿ ಲಿಂಗಾಯತ ಧರ್ಮೀಯರ ರಾಷ್ಟ್ರೀಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ರೀ ಜಗದ್ಗುರು ಚನ್ನಬಸವಾನಂದ ಮಹಾಸ್ವಾಮೀಜಿ ಹೇಳಿದರು.
ಸೋಮವಾರದಂದು ನಗರದ ಬಸವ ಮಂಟಪದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಾವೇಶದ ದಿವ್ಯ ಸಾನಿಧ್ಯವನ್ನು ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮಿಗಳು ವಹಿಸುವರು. ಸಚಿವ ಎಮ್.ಬಿ.ಪಾಟೀಲ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಸಚಿವರುಗಳಾದ ವಿನಯ ಕುಲಕರ್ಣಿ, ಶರಣ ಪ್ರಕಾಶ ಪಾಟೀಲ, ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ, ಸಾಹಿತಿಗಳಾದ ಚಂದ್ರಶೇಖರ ಪಾಟೀಲ (ಚಂಪಾ) ಕೆ.ಎಸ್. ಮರಳಸಿದ್ದಪ್ಪ, ಸಿ.ಎಸ್.ದ್ವಾರಕನಾಥ, ಆಗ್ನಿಶ್ರೀಧರ, ಇಂದೂಧರ ಹೊನ್ನಾಪೂರ, ಕೆ.ಎಮ್.ನಟರಾಜ, ರುದ್ರಪ್ಪ ಅನಗವಾಡಿ, ಲಕ್ಷ್ಮೀನಾರಾಯಣ ನಾಗವಾರ, ಅರವಿಂದ ಮಾಲಗತ್ತಿ, ಸಮತಾ ಸೈನಿಕ ದಳದ ವೆಂಕಟಸ್ವಾಮಿ ಸೇರಿದಂತೆ ಅನೇಕ ಮಠಾಧೀಶರು ಭಾಗವಹಿಸಲಿದ್ದು, ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿನಿಧಿಗಳು ಆಗಮಿಸುವರು. ಬೆಳಗಾವಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ಪಾಲ್ಗೊಳ್ಳಬೇಕೆಂದು ಕೋರಿದರು.
ವೀರಶೈವ ಶೈವ ಪಂಥವಾಗಿದ್ದು, ಲಿಂಗಾಯತ ಸ್ವತಂತ್ರ ಧರ್ಮವಾಗಿದೆ. ಇವುಗಳು ರೈಲು ಹಳಿಗಳಂತೆ ಇದ್ದು ಎರಡೂ ಒಂದಾಗಲು ಹಾಗೂ ಒಮ್ಮತ ಮೂಡಲು ಎಂದಿಗೂ ಸಾಧ್ಯವಿಲ್ಲ. ವೀರಶೈವ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ದೊರೆತರೂ ನಮ್ಮದೇನು ಅಭ್ಯಂತರವಿಲ್ಲ. ಈಗಾಗಲೇ ಪ್ರತ್ಯೇಕ ಲಿಂಗಾಯತ ಧರ್ಮ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ. ಪ್ರತ್ಯೇಕ ಧರ್ಮದ ಸಲುವಾಗಿ ರಾಜ್ಯದ ವಿವಿಧೆಡೆಯಲ್ಲಿ ಬೃಹತ್ ರ್ಯಾಲಿಗಳ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿದೆ. ಮುಖ್ಯಮಂತ್ರಿಗಳು ಇದನ್ನೆಲ್ಲ್ಲ ಮನಗೊಂಡು ಬಹುಮತಕ್ಕೆ ಮಹತ್ವ ನೀಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ನಾವುಗಳೆಲ್ಲ ಮನವರಿಕೆ ಮಾಡುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾದೇವ ಗುಡೇರ, ಚನ್ನಬಸಪ್ಪ ಬಿಜಲಿ, ಸತ್ಯನಾರಾಯಣ ಖಡಕಭಾಂವಿ, ಸುಶೀಲಾ ಹಿರೇಮಠ ಇದ್ದರು.
ಬಾಕ್ಸ ಐಟಂ: ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ ಅವರು ಕೂಡಾ ಲಿಂಗಾಯತ ಧರ್ಮೀಯರಾಗಿದ್ದು, ಅವರನ್ನು ನಾಡಿನ ಜನತೆ ಲಿಂಗಾಯತರು ಎಂದು ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಧರ್ಮವನ್ನು ವಿರೋಧಿಸುವ ಕಾರ್ಯವನ್ನು ಅವರು ಮಾಡಬಾರದು. ನಾಡಿನ ಜನತೆ ಈಗ ನಡೆಯುತ್ತಿರುವ ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲ ಸೂಚಿಸುತ್ತಿದ್ದಾರೆ. ಅವರು ಕೂಡಾ ಬೆಂಬಲಿಸುದಾದರೆ ಸ್ವಾಗತಿಸುವೆ.
ಕೆಎಲ್‍ಇ ಸಂಸ್ಥೆಯು ಪ್ರತಿಷ್ಠಿತ ಲಿಂಗಾಯತ ಸಂಸ್ಥೆಯಾಗಿದ್ದು, ಇದರ ಮುಖ್ಯಸ್ಥರಾದ ಪ್ರಭಾಕರ ಕೋರೆ ಅವರು ಹೋರಾಟವನ್ನು ಬೆಂಬಲಿಸಿ ನಿಜವಾದ ಲಿಂಗಾಯತ ಧರ್ಮೀಯರು ಎಂದು ಸಾಬೀತು ಪಡಿಸಬೇಕು. ಹೋರಾಟವನ್ನು ಹತ್ತಿಕ್ಕುವ ಕಾರ್ಯವನ್ನು ಮಾಡಬಾರದು. ಸಚಿವ ಎಮ್. ಬಿ.ಪಾಟೀಲ ವಿರುದ್ಧ ಟೀಕೆ ಮಾಡುತ್ತಿರುವುದು ಸರಿಯಲ್ಲ. ಅದನ್ನು ನಾವು ಖಂಡಿಸುತ್ತೇವೆ ಎಂದ ಸ್ವಾಮೀಜಿ ದೆಹಲಿಯಲ್ಲಿ ಪ್ರತ್ಯೇಕ ಧರ್ಮಕ್ಕಾಗಿ ನಡೆದ ಹೋರಾಟದ ಸಂದರ್ಭದಲ್ಲಿ ಸಂಸದ ಸುರೇಶ ಅಂಗಡಿ ಅವರು ದೇಶದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ಧರ್ಮದ ಮಾನ್ಯತೆ ದೊರಕಿಸಲು ಸಂಸತ್ತಿನಲ್ಲಿ ಧ್ವನಿ ಎತ್ತುವದಾಗಿ ಹೇಳಿದ್ದರು. ಆದರೆ ಅವರು ಇಂದು ಮೌನವಾಗಿರುವುದು ಅಚ್ಚರಿ ಮೂಡಿಸಿದೆ ಎಂದರು.