ಬೆಳಗಾವಿ:125.48 ಕೋಟಿ ರೂ. ವೆಚ್ಚದ ಕಲ್ಮಡ್ಡಿ ಏತ ನೀರಾವರಿ ಅನುಷ್ಠಾನಕ್ಕೆ ಬದ್ಧ : ಸಚಿವ ಎಂ.ಬಿ. ಪಾಟೀಲ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶ್ನೆಗೆ ಉತ್ತರಿಸಿದ ಸಚಿವ.
125.48 ಕೋಟಿ ರೂ. ವೆಚ್ಚದ ಕಲ್ಮಡ್ಡಿ ಏತ ನೀರಾವರಿ ಅನುಷ್ಠಾನಕ್ಕೆ ಬದ್ಧ : ಸಚಿವ ಎಂ.ಬಿ. ಪಾಟೀಲ
ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶ್ನೆಗೆ ಉತ್ತರಿಸಿದ ಸಚಿವ.
ಬೆಳಗಾವಿ ನ 20: ಅರಭಾವಿ ಕ್ಷೇತ್ರದ ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ಸರ್ಕಾರ ಬದ್ಧವಿದ್ದು, ಈಗಾಗಲೇ 125.48 ಕೋಟಿ ರೂ. ಮೊತ್ತದ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಶ್ನೆಗೆ ಉತ್ತರಿಸಿದರು.
ಸೋಮವಾರದಂದು ಇಲ್ಲಿನ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ಕಲ್ಮಡ್ಡಿ ಏತ ನೀರಾವರಿ ಯೋಜನಾ ಅನುಷ್ಠಾನದ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕೌಜಲಗಿ, ಗೋಸಬಾಳ, ಬಿಲಕುಂದಿ ಮತ್ತು ಕಪರಟ್ಟಿ ಗ್ರಾಮಗಳ ಒಟ್ಟು 2550 ಹೆಕ್ಟರ್ ಪ್ರದೇಶಕ್ಕೆ ಘಟಪ್ರಭಾ ನದಿಯಿಂದ 0.47 ಟಿಎಂಸಿ ನೀರನ್ನೆತ್ತಿ ನೀರಾವರಿ ಕಲ್ಪಿಸಿಕೊಡಲಾಗುವುದು. ಈ ಪ್ರಸ್ತಾವನೆಯ ಪ್ರಾಥಮಿಕ ಯೋಜನಾ ವರದಿಯನ್ನು ನೀರಾವರಿ ನಿಗಮ ತಯಾರಿಸಿದ್ದು, ಅದಕ್ಕೆ ನಿಯಮಾನುಸಾರ ಸಕ್ಷಮ ಪ್ರಾಧಿಕಾರದಿಂದ ತಿರುವಳಿ ಮತ್ತು ಅನುಮೋದನೆ ಪಡೆಯಲು ಕ್ರಮವಹಿಸುವಂತೆ ಈಗಾಗಲೇ ನೀರಾವರಿ ನಿಗಮಕ್ಕೆ ಸೂಚಿಸಲಾಗಿದೆ ಎಂದು ಸಚಿವ ಪಾಟೀಲ ತಿಳಿಸಿದರು.
ಅರಭಾವಿ ಕ್ಷೇತ್ರದಲ್ಲಿ ಬರುವ ಕೌಜಲಗಿ ಮತ್ತು ಸುತ್ತಲಿನ ಗ್ರಾಮಗಳಿಗೆ ನೀರಾವರಿ ಭಾಗ್ಯ ಕಲ್ಪಿಸಿಕೊಡುವ ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ಶೀಘ್ರ ಮಂಜೂರಾತಿ ನೀಡಿ ಡಿಸೆಂಬರ್ ತಿಂಗಳೊಳಗೆ ಕಾಮಗಾರಿಯ ಟೆಂಡರ್ ಕರೆಯುವಂತೆ ಬಾಲಚಂದ್ರ ಜಾರಕಿಹೊಳಿ ಅವರು ಸಚಿವರನ್ನು ಕೋರಿದರು.
ಕೃಷಿ ಚಟುವಟಿಕೆ ಮೇಲೆ ಕಲ್ಮಡ್ಡಿ ಭಾಗದ ರೈತರು ಸಂಪೂರ್ಣವಾಗಿ ಅವಲಂಬಿತರಾಗಿದ್ದು, ನೀರಾವರಿ ಸೌಲಭ್ಯ ಕಲ್ಪಿಸಿಕೊಡುವುದು ಅಗತ್ಯವಾಗಿದೆ. ಗೋಕಾಕ ತಾಲೂಕಿನ ತಳಕಟ್ನಾಳ ಗ್ರಾಮದ ಹತ್ತಿರ ಘಟಪ್ರಭಾ ನದಿಯ ನೀರನ್ನು ಜಲಮೂಲವೆಂದು ಪರಿಗಣಿಸಿ ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ಶೀಘ್ರ ಆರಂಭಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಚಿವರಲ್ಲಿ ಮನವಿ ಮಾಡಿದರು