RNI NO. KARKAN/2006/27779|Wednesday, December 25, 2024
You are here: Home » breaking news » ಗೋಕಾಕ:ಕ್ಷೇತ್ರದ ಪ್ರಗತಿಪರ ಕಾರ್ಯಗಳಲ್ಲಿ ಎಂದಿಗೂ ತಾರತಮ್ಯ ಮಾಡಿಲ್ಲ. : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ:ಕ್ಷೇತ್ರದ ಪ್ರಗತಿಪರ ಕಾರ್ಯಗಳಲ್ಲಿ ಎಂದಿಗೂ ತಾರತಮ್ಯ ಮಾಡಿಲ್ಲ. : ಶಾಸಕ ಬಾಲಚಂದ್ರ ಜಾರಕಿಹೊಳಿ 

ಕ್ಷೇತ್ರದ ಪ್ರಗತಿಪರ ಕಾರ್ಯಗಳಲ್ಲಿ ಎಂದಿಗೂ ತಾರತಮ್ಯ ಮಾಡಿಲ್ಲ. : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ ನ 27: ಕ್ಷೇತ್ರದ ಪ್ರಗತಿಪರ ಕಾರ್ಯಗಳಲ್ಲಿ ಎಂದಿಗೂ ತಾರತಮ್ಯ ಮಾಡಿಲ್ಲ. ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವತೋಮುಖ ಏಳ್ಗೆಗಾಗಿ ಶ್ರಮಿಸುತ್ತಿದ್ದೇನೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸಮೀಪದ ಬೀರನಗಡ್ಡಿ ಗ್ರಾಮದಲ್ಲಿ ಸೋಮವಾರದಂದು ಜರುಗಿದ 45.25 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆಗಳನ್ನು ನೆರವೇರಿಸಿ ಅವರು ಮಾತನಾಡಿದರು.
ಕಳೆದ 25 ವರ್ಷಗಳಿಂದ ಅರಭಾವಿ ಕ್ಷೇತ್ರದ ಜನರ ಜೊತೆ ಒಡನಾಟ ಹೊಂದಿದ್ದು, 2004 ರಿಂದ ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನಾಧ್ಯತೆ ನೀಡಿದ್ದೇನೆ. ಸರ್ಕಾರದಿಂದ ಸಾವಿರಾರು ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಇಲಾಖೆಗಳ ಸಹಾಯದಡಿ ಅಭಿವೃದ್ಧಿಪರ ಕೆಲಸಗಳನ್ನು ಮಾಡಿದ್ದೇನೆ. ಅಭಿವೃದ್ಧಿಯೇ ಮೂಲ ಮಂತ್ರ ತತ್ವದಡಿ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಅರಭಾವಿ ಕ್ಷೇತ್ರದ ಅಭ್ಯುದಯಕ್ಕೆ ಶ್ರಮಿಸುತ್ತಿದ್ದೇನೆ. ತಮ್ಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಗ್ರಾಮದ ಅಭಿವೃದ್ಧಿಗೆ ದುಡಿಯುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದರು.
ನೀರು ಅಮೂಲ್ಯವಾದದ್ದು. ನೀರನ್ನು ಮಿತವಾಗಿ ಬಳಕೆ ಮಾಡುವಂತಾಗಬೇಕು. ಅರಭಾವಿ ಮತಕ್ಷೇತ್ರವನ್ನು ಹಸಿರು ಕ್ರಾಂತಿಯನ್ನಾಗಿ ಮಾಡಲು ನೀರಾವರಿಗೆ ಹೆಚ್ಚಿನಾಧ್ಯತೆ ನೀಡುತ್ತಿದ್ದೇನೆ. ದುರಸ್ಥಿಯಲ್ಲಿರುವ ಕಾಲುವೆಗಳನ್ನು ಸುಧಾರಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಾಗುತ್ತಿದೆ. ನೀರು ಎಷ್ಟು ಪ್ರಾಮುಖ್ಯತೆ ಹೊಂದಿದೆ ಎಂದರೆ ಮುಂದೊಂದು ದಿನ ನೀರಿಗಾಗಿಯೇ ಮೂರನೆಯ ಮಹಾಯುದ್ಧ ನಡೆಯಬಹುದು. ಆದ್ದರಿಂದ ಪ್ರತಿಯೊಬ್ಬರೂ ಜಲರಕ್ಷಣೆ ಮಾಡಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಅವರು ತಿಳಿಸಿದರು.
ಡಿಸೆಂಬರ ತಿಂಗಳೊಳಗೆ ಲೋಳಸೂರ-ಹುಣಶ್ಯಾಳ ಪಿಜಿವರೆಗೆ ರಸ್ತೆ ಸುಧಾರಣೆಯನ್ನು ಮಾಡಲಾಗುವುದು. ಮಹಿಳಾ ಸಂಘಗಳಿಗೆ ಸಹಾಯಧನ ವಿತರಿಸಲಾಗುವುದು. ಬೀರನಗಡ್ಡಿ ಗ್ರಾಮದ ಅಭಿವೃದ್ಧಿಗೆ ಇನ್ನೂ ಹಲವು ಕಾಮಗಾರಿಗಳನ್ನು ನೆರವೇರಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಉದ್ಘಾಟನೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 6 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಬಸವೇಶ್ವರ ಸಮುದಾಯ ಭವನ, ನರೇಗಾ ಯೋಜನೆಯಡಿ 11.25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅಂಗನವಾಡಿ ಕೇಂದ್ರ, 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಸಾಮೂಹಿಕ ಶೌಚಾಲಯ ಹಾಗೂ 20 ಲಕ್ಷ ರೂ. ವೆಚ್ಚದಲ್ಲಿ ಎಸ್‍ಸಿಪಿ ಯೋಜನೆಯಡಿ ದಲಿತ ಸಮುದಾಯದ ರೈತರ ಜಮೀನುಗಳಿಗೆ ಘಟಪ್ರಭಾ ನದಿಯಿಂದ ಪೈಪಲೈನ್ ಕಾಮಗಾರಿಯನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅರಭಾವಿ ದುರದುಂಡೇಶ್ವರ ಪುಣ್ಯಾರಣ್ಯ ಮಠದ ಸಿದ್ಧಲಿಂಗ ಸ್ವಾಮಿಗಳು ವಹಿಸಿದ್ದರು.
ಅಧ್ಯಕ್ಷತೆಯನ್ನು ಸ್ಥಳೀಯ ಬಸಯ್ಯ ಪೂಜೇರಿ ವಹಿಸಿದ್ದರು.
ಅತಿಥಿಗಳಾಗಿ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ದುಂಡಪ್ಪ ತೆಳಗಡೆ, ಕಲ್ಲಪ್ಪ ಪಾಗಾದ, ಅಪ್ಪಯ್ಯ ಸಂಪಗಾಂವ, ರಾಮಲಿಂಗ ಕಳಸನ್ನವರ, ಬಸವಣ್ಣಿ ತೆಳಗಡೆ, ಬಸಲಿಂಗ ತೆಳಗಡೆ, ಶಿವಪ್ಪ ದೊಡಕೆಂಚನವರ, ಶಿವಪುತ್ರ ಭರಮನ್ನವರ, ಮುತ್ತಣ್ಣ ಹಿಪ್ಪರಗಿ, ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ, ಡಾ.ರಮೇಶ ಪಟಗುಂದಿ, ಶಂಕರ ಚಿಂಚಣಿ, ಮೀರಾಸಾಬ ನದಾಫ, ಅಲ್ಲಯ್ಯ ಪೂಜೇರಿ, ಬಸವರಾಜ ಕಾಪಸಿ, ಬಸವಣ್ಣಿ ಸಂಪಗಾಂವಿ, ಸತ್ತೆಪ್ಪ ಕಳಜಕ್ಕನವರ ಮುಂತಾದವರು ಉಪಸ್ಥಿತರಿದ್ದರು. ನ್ಯಾಯವಾದಿ ಬಸವರಾಜ ಕೋಟಗಿ ಸ್ವಾಗತಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಬೀರನಗಡ್ಡಿ ಗ್ರಾಮಸ್ಥರು ಹೃದಯಸ್ಪರ್ಶಿಯಾಗಿ ಸತ್ಕರಿಸಿದರು.

ಗಮನಸೆಳೆದ ಬೈಕ್ ರ್ಯಾಲಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಬೀರನಗಡ್ಡಿ ಗ್ರಾಮದ ನೂರಾರು ಕಾರ್ಯಕರ್ತರು ಬಳೋಬಾಳದಿಂದ ಬೀರನಗಡ್ಡಿವರೆಗಿನ ಬೈಕ್ ರ್ಯಾಲಿ ಸಾರ್ವಜನಿಕರ ಗಮನ ಸೆಳೆಯಿತು.

Related posts: