ಘಟಪ್ರಭಾ:ನೇಗಿಲ ಹಿಡಿದು ದುಡಿಯುವ ಯೋಗಿ ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿರುವುದು ಕಳವಳಕಾರಿ : ಶಾಸಕ ಬಾಲಚಂದ್ರ
ನೇಗಿಲ ಹಿಡಿದು ದುಡಿಯುವ ಯೋಗಿ ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿರುವುದು ಕಳವಳಕಾರಿ : ಶಾಸಕ ಬಾಲಚಂದ್ರ
ಘಟಪ್ರಭಾ ಡಿ 5 : ನಗರೀಕರಣ, ಔದ್ಯೋಗಿಕರಣ ಹಾಗೂ ಅವೈಜ್ಞಾನಿಕ ಕೃಷಿ ಪದ್ದತಿಗಳಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಇದರ ದುಷ್ಪರಿಣಾಮವಾಗಿ ಮಣ್ಣನ್ನೇ ನಂಬಿ ನೇಗಿಲ ಹಿಡಿದು ದುಡಿಯುವ ಯೋಗಿ ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿರುವುದು ಕಳವಳಕಾರಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ವಿಷಾದಿಸಿದರು.
ಇಲ್ಲಿಗೆ ಸಮೀಪದ ತುಕ್ಕಾನಟ್ಟಿ ಗ್ರಾಮದ ಹೊರವಲಯದಲ್ಲಿರುವ ಐಸಿಎಆರ್-ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರ ತುಕ್ಕಾನಟ್ಟಿ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ ಹಾಗೂ ಆತ್ಮ ಯೋಜನೆ, ಕೃಷಿ ಇಲಾಖೆ ಗೋಕಾಕ ಇವುಗಳ ಜಂಟಿ ಆಶ್ರಯದಲ್ಲಿ ಮಂಗಳವಾರದಂದು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.
ವಿಶ್ವ ಸಂಸ್ಥೆಯು ಪ್ರತಿ ವರ್ಷ ಡಿಸೆಂಬರ್ 5 ರಂದು ವಿಶ್ವ ಮಣ್ಣು ದಿನವೆಂದು ಆಚರಿಸುತ್ತಿದೆ. ಜೊತೆಗೆ 2015 ನೇ ವರ್ಷವನ್ನು ಅಂತರ ರಾಷ್ಟ್ರೀಯ ಮಣ್ಣು ವರ್ಷವೆಂದು ಘೋಷಿಸಿದೆ. ಆಹಾರ ಅವಶ್ಯಕತೆಯನ್ನು ಪೂರೈಸಲು ವಿಶ್ವದ ಕೃಷಿ ಉತ್ಪಾದನೆಯ ಶೇ.60 ರಷ್ಟು ಹೆಚ್ಚಾಗಬೇಕೆಂದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಶೇ.100 ರಷ್ಟು ಹೆಚ್ಚಾಗಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ಕೃಷಿಯನ್ನೇ ತನ್ನ ಪ್ರಧಾನ ವೃತ್ತಿಯನ್ನಾಗಿಸಿಕೊಂಡ ರಾಷ್ಟ್ರಗಳು ಮಣ್ಣನ್ನೇ ನಂಬಿ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ. ಭವಿಷÀ್ಯದಲ್ಲಿನ ಆಹಾರ ಭದ್ರತೆಗೆ ಹಾಗೂ ಮುಂದಿನ ಪೀಳಿಗೆಗೆ ಮಣ್ಣಿನ ವೈಜ್ಞಾನಿಕ ನಿರ್ವಹಣೆ ಹಾಗೂ ಅದರ ಸಂರಕ್ಷಣೆ ಅತಿ ಮುಖ್ಯವಾಗಿದೆ ಎಂದು ಹೇಳಿದರು.
ಮಣ್ಣಿನ ಆರೋಗ್ಯವೆಂದರೆ ಮಾನವನ ಆರೋಗ್ಯ. ನಾವು ತಿನ್ನುವ ಪ್ರತಿಯೊಂದು ಆಹಾರವು ಮಣ್ಣನ್ನೇ ಅವಲಂಬಿಸಿರುವುದರಿಂದ ಸತ್ವಯುತ ಮಣ್ಣನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ. “ಮಣ್ಣು ಬರಡಾದರೆ ಕಣ್ಣು ಕುರುಡಾದೀತು” ಎಂಬಂತೆ ಇನ್ನು ಮೇಲಾದರೂ ಜಾಗೃತರಾಗಿ ಕೃಷಿ ಭೂಮಿಯನ್ನು ಹೆಚ್ಚಿಸುವ ಜವಾಬ್ದಾರಿ ರೈತರ ಮೇಲಿದೆ ಎಂದು ಹೇಳಿದರು.
ಸುಣಧೋಳಿಯ ಶ್ರೇಷ್ಠ ಕೃಷಿಕೆ ಶಿವಲೀಲಾ ಗಾಣಿಗೇರ ಕಾರ್ಯಕ್ರಮ ಉದ್ಘಾಟಿಸಿದರು.
ಅತಿಥಿಗಳಾಗಿ ತಾ.ಪಂ ಸದಸ್ಯ ಪರಶುರಾಮ ಗದಾಡಿ, ಗ್ರಾ.ಪಂ ಅಧ್ಯಕ್ಷೆ ಪಾರ್ವತೆವ್ವಾ ನಾವಿ,ಘ.ಯೋ.ನೀ.ಬ.ಸಹಕಾರಿ ಸಂಘದ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಸಿದ್ಧಪ್ಪಾ ಹಮ್ಮನವರ, ಶಿವಪ್ಪಾ ಮರ್ದಿ, ಬಸವಂತ ಕಮತಿ, ಮತ್ತಿಕೊಪ್ಪ ಕೆ.ವಿ.ಕೆ ಯೋಜನಾಧಿಕಾರಿ ಶ್ರೀದೇವಿ ಅಂಗಡಿ, ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಎಲ್.ಐ.ರೂಡಗಿ, ಯುವ ಧುರೀಣ ಪ್ರಕಾಶ ಬಾಗೇವಾಡಿ ಗೋಕಾಕ ಸಹಾಯಕ ಕೃಷಿ ನಿರ್ದೇಶಕ ಎ.ಡಿ.ಸವದತ್ತಿ, ಬಬಲಿಮುಂತಾದವರು ಉಪಸ್ಥಿತರಿದ್ದರು.
ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಿ.ಸಿ.ಚೌಗಲಾ ಸ್ವಾಗತಿಸಿದರು. ಮೀನು ಕೃಷಿ ವಿಜ್ಞಾನಿ ಹೆಚ್.ಎಸ್.ಆದರ್ಶ ಕಾರ್ಯಕ್ರಮ ನಿರೂಪಿಸಿದರು. ಬೇಸಾಯ ತಜ್ಞ ಎಂ.ಎನ್.ಮಲಾವಡಿ ವಂದಿಸಿದರು.
ಬಾಕ್ಸ್ : ಪ್ರಧಾನಿ ನರೇಂದ್ರ ಮೋದಿ ಅವರು ರೈತ ಸಮುದಾಯದ ಏಳ್ಗೆಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ರೈತರ ಅಭ್ಯುದಯವೇ ಮೋದಿ ಅವರ ಪರಮ ಗುರಿಯಾಗಿದೆ. ಅಂತರ ರಾಷ್ಟ್ರೀಯ ಮಣ್ಣು ವರ್ಷವೆಂದು ಘೋಷಿಸಿದ ನಿಮಿತ್ಯ ದೇಶದ 10 ಕೋಟಿ ರೈತರ ಹೊಲದ ಮಣ್ಣನ್ನು ಪರೀಕ್ಷಿಸಿ ಮಣ್ಣು ಆರೋಗ್ಯ ಪತ್ರ ನೀಡಿದ್ದಾರೆ. ಇಂತಹ ರೈತಪರ ಪ್ರಧಾನಿ ಪಡೆದಿರುವುದು ದೇಶದ ಭಾಗ್ಯ.