ಗೋಕಾಕ:ರೇಷ್ಮೆ ವ್ಯವಸಾಯ ಕೈಗೊಳ್ಳಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ರೇಷ್ಮೆ ವ್ಯವಸಾಯ ಕೈಗೊಳ್ಳಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ ಡಿ 7 : ತಾಲೂಕಿನಲ್ಲಿ 310 ಎಕರೆ ಹಿಪ್ಪು ನೆರಳೆ ರೇಷ್ಮೆ ಬೆಳೆ ಇದ್ದು ಇದರಿಂದ ಅಧಿಕ ಲಾಭ ಬರುತ್ತದೆ. ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಬರಲು ರೇಷ್ಮೆ ವ್ಯವಸಾಯ ಕೈಗೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದ ಆವರಣದಲ್ಲಿ ರೇಷ್ಮೆ ಅಭಿವೃದ್ಧಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ರೇಷ್ಮೆ ಬೆಳೆಗಾರರಿಗೆ 3.62 ಲಕ್ಷ ರೂ.ಗಳ ಚೆಕ್‍ಗಳನ್ನು ವಿತರಿಸಿ ಅವರು ಮಾತನಾಡಿದರು.
ಕಡಿಮೆ ವೆಚ್ಚದ ಶೆಡ್ ನಿರ್ಮಾಣಕ್ಕೆ 12 ಜನರಿಗೆ ತಲಾ 21 ಸಾವಿರ ರೂ.ಗಳಂತೆ 2.52 ಲಕ್ಷ ರೂ. ಹಾಗೂ 600 ಚದುರಡಿ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ 1.10 ಲಕ್ಷ ರೂ.ಗಳ ಸಹಾಯಧನದ ಚೆಕ್‍ಗಳನ್ನು ರೇಷ್ಮೆ ಬೆಳೆಗಾರರಿಗೆ ವಿತರಿಸಿದರು.
ಹನಿ ನೀರಾವರಿಗೆ ಶೇ 90 ರಷ್ಟು, ಸಲಕರಣೆಗಳ ಖರೀದಿಗೆ ಶೇ 75 ರಷ್ಟು ಸಹಾಯಧನ ನೀಡಲಾಗುತ್ತಿದೆ. ಹೊಸದಾಗಿ ನಾಟಿ ಮಾಡಲು ಪ್ರತಿ ಎಕರೆಗೆ 10,500, ಕಡಿಮೆ ವೆಚ್ಚದ ಶೆಡ್ ನಿರ್ಮಾಣಕ್ಕೆ ಸಾಮಾನ್ಯ ವರ್ಗದ ರೈತರಿಗೆ ತಲಾ 21 ಸಾವಿರ, ಎಸ್‍ಸಿ.ಎಸ್‍ಟಿ ರೈತರಿಗೆ 27 ಸಾವಿರ ರೂ, ಹುಳು ಸಾಕಾಣಿಕೆ ಮನೆಗೆ ಸಾಮಾನ್ಯ ವರ್ಗದ ರೈತರಿಗೆ 1.10 ಲಕ್ಷ ರೂ ಹಾಗೂ ಎಸ್‍ಸಿ.ಎಸ್‍ಟಿ ರೈತರಿಗೆ 1.57 ಲಕ್ಷ ರೂ.ಗಳನ್ನು ಇಲಾಖೆಯಿಂದ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಂಡು ರೈತರು ರೇಷ್ಮೆ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಅವರು ಹೇಳಿದರು.
ರೇಷ್ಮೆ ಸಹಾಯಕ ನಿರ್ದೇಶಕ ಎಸ್.ಬಿ. ಹುಲ್ಲೋಳ್ಳಿ, ರೇಷ್ಮೆ ವಿಸ್ತರ್ಣಾಧಿಕಾರಿ ಆರ್.ಡಿ. ಬಡಿಗೇರ, ರೇಷ್ಮೆ ಪ್ರದರ್ಶಕರಾದ ಯು.ಎಸ್. ಕಂಕಾಳಿ, ಪಿ.ಎಲ್. ಕೊಳವಿ, ಎಂ.ಎಸ್. ದಂಡಾಪೂರ, ಮತ್ತೀತರರು ಉಪಸ್ಥಿತರಿದ್ದರು.