ಖಾನಾಪುರ:ಭಾಷಾ ತಾರತಮ್ಯ ಹೊಗಲಾಡಿಸಿ ಕನ್ನಡ ಹಬ್ಬವನ್ನು ಆಚರಿಸೋಣ : ಕಸಾಪ ಅಧ್ಯಕ್ಷ ವಿ.ವಿ.ಬಡಿಗೇರ
ಭಾಷಾ ತಾರತಮ್ಯ ಹೊಗಲಾಡಿಸಿ ಕನ್ನಡ ಹಬ್ಬವನ್ನು ಆಚರಿಸೋಣ : ಕಸಾಪ ಅಧ್ಯಕ್ಷ ವಿ.ವಿ.ಬಡಿಗೇರ
ಖಾನಾಪುರ ಡಿ 8: ನಮ್ಮ ಈ ಕನ್ನಡ ನಾಡು ಪುಣ್ಯದ ಬೀಡು, ಇಂತಹ ನಾಡಿನಲ್ಲಿ ‘ಕನ್ನಡ’ ಉಳಿಯಬೇಕಾದರೆ ನಾವೆಲ್ಲರೂ ಸೇರಿಕೊಂಡು ಕನ್ನಡದ ಸಾಹಿತಿಗಳಿಗೆ, ಕಲಾವಿದರಿಗೆ, ಹೋರಾಟಗಾರರಿಗೆ, ಕನ್ನಡಾಭಿಮಾನಿಗಳಿಗೆ ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯ ಮಾಡಿದರೆ ಕನ್ನಡ ಇನ್ನಷ್ಟು ಗಟ್ಟಿಯಾಗುವದು ಎಂದು ತಾಲೂಕಾ ಕಸಾಪ ಅಧ್ಯಕ್ಷ ವಿ.ವಿ.ಬಡಿಗೇರ ಹೇಳಿದರು.
ತಾಲೂಕಿನ ದೇವಲತ್ತಿ ಗ್ರಾಮದ ವಿಠ್ಠಲ ರುಕ್ಮೀಣಿ ದೇವಸ್ಥಾನದಲ್ಲಿ ಶುಕ್ರವಾರ ದಿನದಂದು ಹಮ್ಮಿಕೊಂಡಂತಹ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಗಡಿಭಾಗವಾದ ಖಾನಾಪುರ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿ ಭಾಷಿಕರಿದ್ದರೂ ಕೂಡ ಎಲ್ಲರೂ ಒಗ್ಗಟ್ಟಾಗಿ ನಾಲ್ಕು ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಗೋಳಿಸಿದ್ದೆವೆ. ಈಗ ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಹ ನಾವೆಲ್ಲರೂ ಜಾತಿ-ಭೇದ ಮರೆತು ಭಾಷಾ ತಾರತಮ್ಯ ಹೊಗಲಾಡಿಸಿ ಕನ್ನಡ ಹಬ್ಬವನ್ನು ಆಚರಿಸೋಣ ಎಂದು ನುಡಿದರು.
ಸಭೆಯಲ್ಲಿ ಗ್ರಾಮದ ನಿವೃತ್ತ ಶಿಕ್ಷಕ ಜಿ.ಕೆ.ಹೊಸುರ ಸಭೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಜೋತೆಗೆ ತಾಲೂಕಾ ಕಸಾಪ ಗೌರವಾಧ್ಯಕ್ಷ ಈಶ್ವರ ಸಂಪಗಾವಿ ಮತ್ತು ಕಸಾಪ ಕೋಶಾಧ್ಯಕ್ಷ ಮಹಾಂತೇಶ ಕೊಡೊಳ್ಳಿ ಮಾತನಾಡಿದರು.
ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದೇವಲತ್ತಿ ಗ್ರಾಪಂ ಅಧ್ಯಕ್ಷ ರಾಜಶೇಖರ ಕಮ್ಮಾರ ರವರು, ನಮ್ಮೂರಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ತುಂಬಾ ಸಂತಸದ ಸಂಗತಿ. ಜೋತೆಗೆ ತಾಲೂಕಾ ಕಸಾಪ ಕಮೀಟಿ ಹಾಗೂ ಹಿರಿಯರ ಅಭಿಪ್ರಾಯದ ಮೇರೆಗೆ ಮುಂದಿನ ಸಭೆಯ ಮುಂಚಿತವಾಗಿ ಕಾರ್ಯಕ್ರಮದ ಸಮ್ಮೇಳನಾದ್ಯಕ್ಷರು, ಸಭಾದ್ಯಕ್ಷರು, ವೇದಿಕೆಯ ಹೆಸರು, ಸಾಹಿತ್ಯ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳ ವಿವರವಾದ ಮಾಹಿತಿಯನ್ನು ತಯಾರಿಸಿ ತಮ್ಮ ಮುಂದೆ ಇಡುತ್ತೆನೆ. ಜೋತೆಗೆ ಎಲ್ಲರೂ ಸೇರಿಕೊಂಡು ಕನ್ನಡದ ಹಬ್ಬವನ್ನು ಯಶಸ್ವಿಗೋಳಿಸೋಣ ಎಂದು ಹೇಳಿದರು.
ಸಭೆಯಲ್ಲಿ ಗ್ರಾಮದ ವಿಜಯಕುಮಾರ ಸಾಣಿಕೊಪ್ಪ, ಶಂಕರ ಗಣಾಚಾರಿ, ವಿ.ವಿ.ಪಾಟೀಲ, ರುದ್ರೇಶ ಸಂಪಗಾವಿ, ಗ್ರಾಪಂ ಸರ್ವ ಸದಸ್ಯರು, ತಾಲೂಕಿನ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.