ಗೋಕಾಕ:ನಮಗೆ ಬೇಕಾಗಿರುವುದು ಗೋಕಾಕ ಜಿಲ್ಲೆ ಯಾರೂ ಅನಗತ್ಯ ಗೊಂದಲ ಸೃಷ್ಟಿಸಬಾರದು : ಮುರುಘರಾಜೇಂದ್ರ ಶ್ರೀ
ನಮಗೆ ಬೇಕಾಗಿರುವುದು ಗೋಕಾಕ ಜಿಲ್ಲೆ ಯಾರೂ ಅನಗತ್ಯ ಗೊಂದಲ ಸೃಷ್ಟಿಸಬಾರದು : ಮುರುಘರಾಜೇಂದ್ರ ಶ್ರೀ
ಗೋಕಾಕ ಡಿ 16: ನಮಗೆ ಬೇಕಾಗಿರುವುದು ಗೋಕಾಕ ಜಿಲ್ಲೆ. ಜಿಲ್ಲೆಗಾಗಿ ಯಾರೇ ಹೋರಾಟ ಮಾಡಿದರೂ ಅವರಿಗೆ ನಮ್ಮ ಬೆಂಬಲ ಇದ್ದೇ ಇದೆ. ಡಿ.21 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಗೋಕಾಕ ನಗರಕ್ಕೆ ಆಗಮಿಸುತ್ತಿರುವುದರಿಂದ ಎಲ್ಲರೂ ಒಗ್ಗಟ್ಟಿನಿಂದ ಜಿಲ್ಲಾ ಕೇಂದ್ರಕ್ಕೆ ಮನವಿ ಮಾಡಿಕೊಳ್ಳೋಣ. ಇದರಲ್ಲಿ ಯಾರೂ ಅನಗತ್ಯ ಗೊಂದಲ ಸೃಷ್ಟಿಸಬಾರದು ಎಂದು ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮನವಿ ಮಾಡಿದರು.
ಇಲ್ಲಿಯ ಗುರುವಾರ ಪೇಠೆಯಲ್ಲಿರುವ ಶೂನ್ಯ ಸಂಪಾದನ ಮಠದಲ್ಲಿ ನಿಯೋಜಿತ ಗೋಕಾಕ ಜಿಲ್ಲಾ ಚಾಲನಾ ಸಮೀತಿಯು ಶನಿವಾರದಂದು ಕರೆದಿದ್ದ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಎಲ್ಲರೂ ಒಂದಾಗಿ ಮನವಿ ಸಲ್ಲಿಸುವ ದೃಷ್ಟಿಯಿಂದ ವಕೀಲರ ಸಂಘದವರ ಜೊತೆ ಮಾತುಕತೆ ನಡೆಸಲಾಗುವುದು. ಎಲ್ಲರೂ ಸೇರಿ ಒಮ್ಮತದ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಕೀಲರ ಜೊತೆ ಮಾತುಕತೆ ನಡೆಸಲು ಚಾಲನಾ ಸಮೀತಿಯ ಕೆಲ ಪ್ರಮುಖರನ್ನು ನಿಯೋಜಿಸಲಾಗಿದೆ. ಜಿಲ್ಲಾ ಹೋರಾಟವನ್ನು ಒಗ್ಗಟ್ಟಿನಿಂದ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಹೋರಾಟದಲ್ಲಿ ಯಾರೂ ವೈಯಕ್ತಿಕ ಟೀಕೆಗಳನ್ನು ಮಾಡದೇ ಕೇವಲ ಜಿಲ್ಲೆಗಾಗಿ ಮಾತ್ರ ಹೋರಾಡೋಣ. ಇದರಿಂದ ನಮ್ಮಲ್ಲಿರುವ ಮನಸ್ತಾಪಗಳು ಗೋಕಾಕ ಜಿಲ್ಲೆಯ ಹೋರಾಟದಲ್ಲಿ ಪರಿಣಾಮ ಬೀರಬಹುದು ಎಂದು ಹೇಳಿದರು.
ಗೋಕಾಕ ಜಿಲ್ಲೆಯಾಗಬೇಕಾದರೆ ಅದು ಜಾರಕಿಹೊಳಿ ಸಹೋದರರು ಮನಸ್ಸು ಮಾಡಬೇಕು. ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಶಾಸಕ ಹಾಗೂ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಆಡಳಿತ ಪಕ್ಷದಲ್ಲಿರುವುದರಿಂದ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕು. ಈ ದಿಸೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಾಯಕತ್ವದಲ್ಲಿಯೇ ನಾವೆಲ್ಲ ಹೋರಾಟ ಮಾಡೋಣ. ಈಗಾಗಲೇ ಮೂಡಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡುವಲ್ಲಿ ಅವಿರತ ಶ್ರಮಿಸಿರುವ ಬಾಲಚಂದ್ರ ಜಾರಕಿಹೊಳಿ ಅವರು ಈ ಹೋರಾಟದಲ್ಲಿ ಮುಂಚೂಣಿ ವಹಿಸಿಕೊಳ್ಳುವಂತೆ ಅವರು ಕೋರಿದರು.
ಗೋಕಾಕ ಜಿಲ್ಲೆಯಾದರೆ ಅದು ಸಿಎಂ ಸಿದ್ಧರಾಮಯ್ಯನವರಿಂದ ಮಾತ್ರ ಸಾಧ್ಯ. ಇವರು ದಿಟ್ಟ ಆಡಳಿತಗಾರರಾಗಿದ್ದು ಮುಂದಿಟ್ಟ ಹೆಜ್ಜೆ ಹಿಂದಿಡಲಾರರು. ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಜಿಲ್ಲಾ ಸ್ಥಾನಮಾನ ಪಡೆಯೋಣ. ಅನಗತ್ಯ ಹೋರಾಟವನ್ನು ದಿಕ್ಕು ತಪ್ಪಿಸುವ ಯತ್ನ ಮಾಡಬೇಡಿ. ಬೇಕಾಗಿರುವುದು ಜಿಲ್ಲೆ. ಶಾಂತಿಪ್ರೀಯವಾಗಿರುವ ಗೋಕಾಕಕ್ಕೆ ಯಾರು ಕಪ್ಪುಚುಕ್ಕೆ ತರುವ ಪ್ರಯತ್ನ ಮಾಡಬೇಡಿ ಎಂದು ತಿಳಿಸಿದರು.
ಜಾರಕಿಹೊಳಿ ಕುಟುಂಬದ ವಿರೋಧಿಯಾಗಿದ್ದೆ : ನಾನು ಕೂಡ ಈ ಹಿಂದೆ ತಾತ್ವಿಕ ನೆಲಗಟ್ಟಿನ ಮೇಲೆ ಜಾರಕಿಹೊಳಿ ಕುಟುಂಬವನ್ನು ವಿರೋಧಿಸಿದ್ದೆ. ಆದರೆ ವೈಯಕ್ತಿಕವಾಗಿ ಅವರನ್ನು ನಿಂದಿಸಿಲ್ಲ. ಕಾಲ ಬದಲಾದಂತೆ ಜಾರಕಿಹೊಳಿ ಕುಟುಂಬ ಗೋಕಾಕ ನಾಡಿಗೆ ಅನನ್ಯ ಕೊಡುಗೆ ನೀಡುತ್ತಿದೆ ಎಂದು ಸ್ಮರಿಸಿಕೊಂಡ ಅವರು, ಗೋಕಾಕ ಜಿಲ್ಲೆಗಾಗಿ ಸಾಂಘಿಕ ಹೋರಾಟ ಮಾಡೋಣ. ಇದನ್ನು ಬಿಟ್ಟು ನಿಮ್ಮ ಸಿಟ್ಟನ್ನು ಯಾರದೋ ಮೇಲೆ ಹಾಕಬೇಡಿ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಬಸಗೌಡ ಪಾಟೀಲ(ಕಲ್ಲೋಳಿ), ಸಿದ್ದಲಿಂಗ ದಳವಾಯಿ, ಅಶೋಕ ಪಾಟೀಲ, ಎಸ್.ಎ. ಕೋತವಾಲ, ಎಂ.ಆರ್. ಭೋವಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎಲ್.ಎನ್. ಬೂದಿಗೊಪ್ಪ, ಮೂಡಲಗಿ ವಕೀಲರ ಸಂಘದ ಅಧ್ಯಕ್ಷ ಕೃಷ್ಣಾ ಹುಣಶ್ಯಾಳ ಮುಂತಾದವರು ಮಾತನಾಡಿ, ಜಿಲ್ಲೆ ಹೋರಾಟದ ಬದಲು ಕೇವಲ ಜಾರಕಿಹೊಳಿ ಕುಟುಂಬದ ಮೇಲೆ ಗೂಬೆ ಕೂರಿಸಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಇದರಿಂದ ವೇದಿಕೆ ದುರ್ಬಳಕೆಯಾಗುತ್ತಿದೆ. ಶಾಸಕರಾಗುವವರ, ಚುನಾವಣೆಗೆ ಸ್ಪರ್ಧಿಸುವವರ ಹೋರಾಟ ಮಾಡುವ ವೇದಿಕೆ ಇದಲ್ಲ. ಗೋಕಾಕ ಜಿಲ್ಲೆಗಾಗಿ ಎಲ್ಲರೂ ಸಂಘಟಿತರಾಗಿ ಪಕ್ಷಾತೀತವಾಗಿ ಹೋರಾಟ ಮಾಡಬೇಕು. ಸಿಎಂ ಸಿದ್ಧರಾಮಯ್ಯ ಹಾಗೂ ಜಾರಕಿಹೊಳಿ ಸಹೋದರರನ್ನು ಟೀಕಿಸುವುದರಿಂದ ಜಿಲ್ಲೆಯಾಗುವುದಿಲ್ಲ. ಹೋರಾಟಕ್ಕೆ ಬೆಲೆ ಬರುವುದಿಲ್ಲ. ಜಾರಕಿಹೊಳಿ ಸಹೋದರರು ಈ ಗೋಕಾವಿ ನೆಲದಲ್ಲಿ ಹುಟ್ಟಿರುವುದರಿಂದ ತಾಯ್ನಾಡಿನ ಋಣ ಅವರ ಮೇಲಿದೆ. ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿಸುವ ಮೂಲಕ ಹುಟ್ಟೂರಿನ ಋಣ ತೀರಿಸಬೇಕೆಂದು ಕಳಕಳಿ ಮನವಿ ಮಾಡಿಕೊಂಡರು. ಕೆಲವು ಶಕ್ತಿಗಳಿಗೆ ಗೋಕಾಕ ಜಿಲ್ಲೆಯಾಗುವುದು ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಜಾರಕಿಹೊಳಿ ಕುಟುಂಬವನ್ನು ನಿಂದಿಸುವುದು. ಎಲ್ಲರೂ ಸೇರಿ ಸ್ವಾಮೀಜಿಗಳ ನೇತೃತ್ವದಲ್ಲಿ ಸಿಎಂ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ರಾಜ್ಯ ಸಹಕಾರಿ ಮಾರಾಟ ಮಂಡಳಿ ಉಪಾಧ್ಯಕ್ಷ ಬಿ.ಆರ್. ಪಾಟೀಲ, ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಜಿಪಂ ಸದಸ್ಯರಾದ ತುಕಾರಾಮ ಕಾಗಲ, ಮಡ್ಡೆಪ್ಪ ತೋಳಿನವರ, ಗೋವಿಂದ ಕೊಪ್ಪದ, ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ರವಿ ಸೋನವಾಲ್ಕರ, ಆರ್.ಬಿ. ಹಂದಿಗುಂದ, ವಿನೋದ ಕರನಿಂಗ, ಅಶೋಕ ನಾಯಿಕ, ಆರ್.ಕೆ. ಮಹಾರಡ್ಡಿ, ಮನೋಹರ ಗಡಾದ, ಮಲ್ಲಿಕಾರ್ಜುನ ಈಟಿ, ಶಿವಾನಂದ ಹತ್ತಿ, ಬಸವರಾಜ ಹಿರೇಮಠ(ಕಪರಟ್ಟಿ), ಕಲ್ಲಪ್ಪ ಲಕ್ಕಾರ, ಅಜೀಜ ಡಾಂಗೆ, ನಿಂಗಪ್ಪ ಗಡಜನವರ, ಶಂಕರ ಹುರಕಡ್ಲಿ, ಕನ್ನಡಪರ ಸಂಘಟನೆಗಳ ಅಧ್ಯಕ್ಷರಾದ ಬಸವರಾಜ ಖಾನಪ್ಪನವರ, ಕಿರಣ ಡಮಾಮಗರ, ಎಂ.ಎಂ. ಪಾಟೀಲ, ಬಿ.ಎಸ್. ಕೋಟಗಿ, ಡಿ.ಎಂ. ದಳವಾಯಿ, ಅಶೋಕ ಖಂಡ್ರಟ್ಟಿ, ಅಜ್ಜಪ್ಪ ಗಿರಡ್ಡಿ, ಹಣಮಂತ ತೇರದಾಳ, ಬಸವಂತ ಕಮತಿ, ರಂಗಪ್ಪ ಇಟ್ಟನ್ನವರ, ಬಸನಗೌಡ ಪಾಟೀಲ, ಸುಧೀರ ಜೋಡಟ್ಟಿ, ಪರಮೇಶ್ವರ ಹೊಸಮನಿ, ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ, ಮುತ್ತೆಪ್ಪ ಕುಳ್ಳೂರ, ಗಿರೀಶ ಹಳ್ಳೂರ, ಶಂಕರ ಬೆಳಗಲಿ, ಅಬ್ಬಾಸ ದೇಸಾಯಿ, ಅಣ್ಣಪೂರ್ಣಾ ನಿರ್ವಾಣಿ, ಪರಶುರಾಮ ಭಗತ, ಶಂಕರ ಅಂಕದವರ, ವಿನಾಯಕ ಪೂಜೇರಿ, ಬೆನ್ನಾಡಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ, ತಾಪಂ, ಗ್ರಾಪಂ, ಸದಸ್ಯರುಗಳು, ತಾಲೂಕಿನ ವಿವಿಧ ಪಕ್ಷಗಳ ಮುಖಂಡರುಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು. ಅಶೋಕ ಓಸ್ವಾಲ ಕಾರ್ಯಕ್ರಮ ನಿರೂಪಿಸಿದರು.