ಬೆಳಗಾವಿ:ಕಡಿಮೆ ಸಂಬಳದಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒಸಗಿಸಿ : ರಾಜು ಕಂಬಾರ
ಕಡಿಮೆ ಸಂಬಳದಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒಸಗಿಸಿ : ರಾಜು ಕಂಬಾರ
ಬೆಳಗಾವಿ ಡಿ 16: ಕರ್ನಾಟಕ ರಾಜ್ಯದ 412 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು 12000 ಕ್ಕಿಂತಲೂ
ಹೆಚ್ಚು ಅತಿಥಿ ಉಪನ್ಯಾಸಕರು ಅತ್ಯಂತ ಕಡಿಮೆ ಸಂಬಳದಲ್ಲಿ ಸೇವೆ ಸಲ್ಲಿಸುತ್ತಿದು ಸೇವಾ ಭದ್ರತೆ ಒಸಗಿಸಬೇಕೆಂದು ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘ ಒತ್ತಾಯಿಸಿದೆ.
ಇಂದು ಕನ್ನಡ ಸಾಹಿತ್ಯ ಭವನದಲ್ಲಿ ಜರಗಿದ ಸುದ್ದಿಗೋಷಿಯಲ್ಲಿ ಮಾತನಾಡಿ ಸಂಘದ ಜಿಲ್ಲಾ ರಾಜು ಕಂಬಾರ ಅವರು 2017-18 ರ ಸಾಲಿನಲ್ಲಿ 14-15 ಸಾವಿರ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತ ಸರಕಾರಕ್ಕೆ ಆರ್ಥಿಕವಾಗಿ ಅನುಕೂಲ ಮಾಡಿಕೊಡುತ್ತ ಬಂದಿದ್ದಾರೆ. ಯುಜಿಸಿ ಪೂರ್ಣ ಕಾಲಿಕ ಉಪನ್ಯಾಸಕರಿಗೆ 50-60 ಸಾವಿರ ಸಂಬಳ ನೀಡುವ ಸರಕಾರ ಅತಿಥಿ ಉಪನ್ಯಾಸಕರಿಗೆ ಕೇವಲ 13000 ರೂ. ನೀಡಿ ಪ್ರತಿವರ್ಷ ಕಡಿಮೆ ಸಂಬಳದಲ್ಲಿ ದುಡಿಸಿಕೊಳ್ಳುತ್ತಿದೆ. ಸರಕಾರದ ಈ ಸಂಬಳ ಅತಿಥಿ ಉಪನ್ಯಾಸಕರಿಗೆ ಯಾವುದಕ್ಕೂ ಸಾಲುತ್ತಿಲ್ಲ. ಮೇಲಾಗಿ ಕಳೆದ ವರ್ಷ ದುಡಿದವರಿಗೆ ಮುಂದಿನ ವರ್ಷ ಉದ್ಯೋಗ ಸಿಗುತ್ತದೆಂಬ ಭರವಸೆಯು ಇರುವುದಿಲ್ಲ. ಇದರಿಂದ 2016-17 ನೇ ಸಾಲಿನಲ್ಲಿ ದುಡಿದ ಅದೇಷ್ಟೊ ಅನುಭವಿ, ವಯೋಮಿತಿ ಮೀರಿದ ಅತಿಥಿ ಉಪನ್ಯಾಸಕರು ಬೀದಿ ಪಾಲಾಗಿದ್ದಾರೆ. ಅಂತವರ ಬದುಕು ಹೀನಾಯ ಸ್ಥಿತಿಗೆ ಬಂದಿದೆ. ಸಾಲ-ಸೂಲಗಳನ್ನು ಮಾಡಿ ಕೆಲವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಹೆಂಡತಿ-ಮಕ್ಕಳ ಬದುಕು ಈಗ ನರಕವಾಗಿದೆ. ಇಷ್ಟೆಲ್ಲಾ ಘಟನೆಗಳು ಸಮಾಜದಲ್ಲಿ ಜರುಗುತ್ತಿದ್ದರು ಸರಕಾರ ಅತಿಥಿ ಉಪನ್ಯಾಸಕರ ಪಾಲಿಗೆ ಕಣ್ಣು ಮುಚ್ಚಿ ಕುಳಿತು ವಿಲನ್ ಆಗಿದೆ. ಕಳೆದ ಐದು ವರ್ಷಗಳಿಂದಲೂ ಸರಕಾರ ಅತಿಥಿ ಉಪನ್ಯಾಸಕರಿಗೆ ಏನಾದರೂ ಒಳಿತು ಮಾಡುತ್ತದೆಂಬ ಅತಿಥಿ ಉಪನ್ಯಾಸಕರ ನಂಬಿಕೆ ಹುಸಿಯಾಗಿದೆ.
ರಾಜ್ಯದಲ್ಲಿರುವ ನುರಿತ ಶಿಕ್ಷಣತಜ್ಞರ ಸಲಹೆಗಳನ್ನಾದರೂ ಪಡೆದು ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕಾಗಿತ್ತು. ಆದರೆ ಸಿದ್ದರಾಮಯ್ಯನವರ ಸರಕಾರ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುವ ಅತಿಥಿ ಭಾಗ್ಯವನ್ನು ಮರೆತು ಕುಳಿತಿದೆ. ಪ್ರಸಕ್ತ ವರ್ಷ ಕಾಲೇಜು ಆರಂಭಗೊಂಡು 4-5 ತಿಂಗಳಾದರೂ ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡದಿರುವುದನ್ನು ನೋಡಿದರೆ ಕಾಂಗ್ರೆಸ್ ಸರಕಾರಕ್ಕೆ ಅತಿಥಿ ಉಪನ್ಯಾಸಕರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ ಎಂಬುದನ್ನು ತೋರಿಸಿಕೊಡುತ್ತದೆ. ಸನ್ಮಾನ್ಯ ಸಿದ್ದರಾಮಯ್ಯನವರು ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಾದರೂ ಎಚ್ಚೆತ್ತುಕೊಂಡು ಉನ್ನತ ಶಿಕ್ಷಣ ಸಚಿವರನ್ನು ಹಳ್ಳಕ್ಕೆ ತಳ್ಳಿ ನೇರವಾಗಿ ತಾವೇ ಮುಂದಾಗಿ ಸೇವಾ ಭದ್ರತೆಯನ್ನು ಒದಗಿಸಬೇಕು. ಇಲ್ಲದಿದ್ದರೆ ಅವರ ಮುಂದಿನ ಪರಿಣಾಮವನ್ನು ಕಾಂಗ್ರೇಸ ಸರಕಾರ ಚುನಾವಣೆಯಲ್ಲಿ ಎದುರಿಸಬೇಕಾಗುತ್ತದೆ.
ಹೀಗಾಗಿ ನಮ್ಮ ಏಕೈಕ ಬೇಡಿಕೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುವ ಸಲುವಾಗಿ ಮುಖ್ಯಮಂತ್ರಿಗಳ ಗಮನ ಸೆಳೆಯಲು ರಾಯಬಾಗ ತಾಲೂಕು ಹಾರೂಗೇರಿಯಲ್ಲಿ ಜರುಗುವ ಕಾಂಗ್ರೇಸ್ ಸಮಾವೇಶದಲ್ಲಿ ಬೆಳಗಾವಿ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಾದ ವಿಜಯಪೂರ ಹಾಗೂ ಬಾಗಲಕೋಟ ಜಿಲ್ಲೆಗಳಿಂದ ಸಾವಿರಾರು ಅತಿಥಿ ಉಪನ್ಯಾಸಕರು ಸೇರಿ ಮುಖ್ಯಮಂತ್ರಿಗಳಿಗೆ ಘೇರಾವ ಹಾಕಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿಗಳು ಅತಿಥಿ ಉಪನ್ಯಾಸಕರ ಜೊತೆ ಮಾತನಾಡಲೇಬೇಕು. ಸೇವಾ ಭದ್ರತೆ ಕೊಡುವುದಾಗಿ ಭರವಸೆ ನೀಡಲೇ ಬೇಕು. ಅಲ್ಲಿಯವರೆಗೆ ಮುಖ್ಯಮಂತ್ರಿಗಳ ಕಾರು ತಡೆದು ಘೇರಾವ ಹಾಕಲಾಗುತ್ತದೆ. ಆದುದರಿಂದ ಬೆಳಗಾವಿ, ಬಾಗಲಕೋಟ, ವಿಜಯಪೂರ ಜಿಲ್ಲೆಯ ಎಲ್ಲ ಅತಿಥಿ ಉಪನ್ಯಾಸಕರು ಗುರುವಾರ ದಿನಾಂಕ: 21 ರಂದು ಮುಂಜಾನೆ ರಾಯಭಾಗ ತಾಲೂಕು ಹಾರೂಗೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಬೆಳಗಾವಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ರಾಜು ಕಂಬಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ವಿಠ್ಠಲ ಮಾಳವದೆ, ಖಜಾಂಚಿ ಕಲ್ಮೇಶ್ವರ ಕಾಂಬಳೆ ಪ್ರಕಾಶ ಮಭನೂರ, ಅಪ್ಪಾಸಾಬ ಮಾದರ, ಜಯಶ್ರೀ ಹಂಚಿನಮನಿ, ಗೌಡರ, ನಿಂಗಪ್ಪ ಸಂಗ್ರೇಜಿಕೊಪ್ಪ, ಎ. ಬಿ. ಇಟಗಿ, ರವಿ ಮೆಟಗೇರಿ ಮುಂತಾದವರು ಉಪಸ್ಥಿತರಿದ್ದರು.