RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ನೂತನ ಜಿಲ್ಲೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳಿಂದ ಅರೆಬೆತ್ತಲೆ ಮೆರವಣಿಗೆ : ಮುಖ್ಯಮಂತ್ರಿಗಳಿಗೆ ಮನವಿ

ಗೋಕಾಕ:ನೂತನ ಜಿಲ್ಲೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳಿಂದ ಅರೆಬೆತ್ತಲೆ ಮೆರವಣಿಗೆ : ಮುಖ್ಯಮಂತ್ರಿಗಳಿಗೆ ಮನವಿ 

ನೂತನ ಜಿಲ್ಲೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳಿಂದ ಅರೆಬೆತ್ತಲೆ ಮೆರವಣಿಗೆ : ಮುಖ್ಯಮಂತ್ರಿಗಳಿಗೆ ಮನವಿ

ಗೋಕಾಕ ಡಿ 20:  ಗೋಕಾಕನ್ನು ನೂತನ ಜಿಲ್ಲೆಯೆಂದು ಘೋಷಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕ.ರ.ವೇ. ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಬುಧವಾರದಂದು ಅರೆಬೆತ್ತಲೆ ಮೆರವಣಿಗೆ ನಡೆಸಿ ತಹಶೀಲ್ದಾರ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಅರ್ಪಿಸಿದರು.

ನಗರದ ಸಿದ್ಧಿವಿನಾಯಕ ಗುಡಿಯಲ್ಲಿ ಸೇರಿದ ಕಾರ್ಯಕರ್ತರು ಗೋಕಾಕ ಜಿಲ್ಲೆಯಾಗಲು ಎಲ್ಲ ವಿಘ್ನಗಳು ನಿವಾರಣೆಯಾಗುವಂತೆ ಮತ್ತು ರಾಜ್ಯವನ್ನಾಳುತ್ತಿರುವ ಸರಕಾರಗಳಿಗೆ ಒಳ್ಳೆಯ ಬುದ್ಧಿ ನೀಡಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿ ವಿನೂತನವಾಗಿ ಆಗ್ರಹ ಪಡಿಸಿದರು.

ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ಅರೆಬೆತ್ತಲೆ ಮೆರವಣಿಗೆ ನಡೆಸುತ್ತಿರುವ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು

ಪ್ರತಿಭಟನಾ ನಿರತರನ್ನು ಉದ್ಧೇಶಿಸಿ ಮಾತನಾಡಿದ ಕ.ರ.ವೇ. ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಗೋಕಾಕ ಜಿಲ್ಲಾ ಹೋರಾಟ ಇಂದು ನಿನ್ನೆಯದ್ದಲ್ಲ ಕಳೆದ ಸುಮಾರು 4 ದಶಕಗಳಿಂದ ಗೋಕಾಕ ನೂತನ ಜಿಲ್ಲೆಯಾಗಬೇಕೆಂಬ ಆಗ್ರಹವಿದೆ.

ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ವಿಘ್ನಗಳು ನಿವಾರಣೆಗೆ ಯಾಗಲೇಂದು ಪೂಜ್ಯ ಸಲ್ಲಿಸುತ್ತಿರುವ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು

ಜಿಲ್ಲೆಯಾಗುವ ಕಾಲ ಸನಿಹವಾಗಿರುವಾಗ ಇದನ್ನು ಅಡ್ಡಿಪಡಿಸುತ್ತಿರುವುದು ನ್ಯಾಯಸಮ್ಮತವಲ್ಲ. ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಮರಾಠಿಗರ ಪ್ರಾಬಲ್ಯ ಹೆಚ್ಚಾಗುತ್ತದೆ ಎಂಬ ವಾದದಲ್ಲಿ ಯಾವುದೇ ಹುರಳಿಲ್ಲ. ಗಡಿ ವಿಷಯ ಬಂದಾಗ ಕಳೆದ ದಶಕಗಳಿಂದಲೂ ಗೋಕಾಕ ಕ.ರ.ವೇ. ಕಾರ್ಯಕರ್ತರು ಮುಂಚೂಣಿಯಲ್ಲಿದ್ದುಕೊಂಡು ಹೋರಾಟ ಮಾಡುತ್ತ ಬಂದಿದ್ದಾರೆ. ಮುಂದೆಯೂ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಎಂತಹ ತ್ಯಾಗಕ್ಕೂ ಸಿದ್ಧರಿದ್ದೇವೆ. ಬೆಳಗಾವಿ ಕನ್ನಡಿಗರು ಧೃತಿಗೆಡುವ ಪ್ರಶ್ನೆಯೇ ಇಲ್ಲ. ಈ ನಮ್ಮ ಬಹುದಿನಗಳ ಬೇಡಿಕೆಗೆ ಎಲ್ಲರೂ ಸ್ಪಂದಿಸಬೇಕೆಂದು ಆಗ್ರಹಿಸಿದರು.

ಕಳೆದ 4 ದಶಕಗಳಿಂದ ಗೋಕಾಕ ತಾಲೂಕನ್ನು ಜಿಲ್ಲಾ ಕೇಂದ್ರ ಮಾಡುವಂತೆ ಪ್ರಬಲವಾದ ಕೂಗು ಕೇಳಿ ಬರುತ್ತಿದೆ. ಬ್ರಿಟಿಷರ ಕಾಲದಿಂದಲೂ ಗೋಕಾಕನ್ನೇ ಜಿಲ್ಲೆ ಮಾಡಬೇಕೆಂದು ಪ್ರಸ್ತಾವಣೆ ಇದ್ದು ಜಿಲ್ಲೆಯಾಗುವ ಹಂತದವರೆಗೂ ತಲುಪಿ ವಾತಾವರಣದ ಮೊರೆ ಹೋಗಿ ತಂಪು ವಾತಾವರಣವಿದ್ದ ಬೆಳಗಾವಿಯನ್ನು ಜಿಲ್ಲೆಯನ್ನಾಗಿ ಮಾಡಲಾಯಿತು. ತದನಂತರ ಬೆಳಗಾವಿ ಜಿಲ್ಲೆ ಬೆಳೆದಂತೆ ಗೋಕಾಕ ನಗರವು ಕೂಡ ಬೆಳಗಾವಿಯನ್ನು ಹೊರತುಪಡಿಸಿ ಅತೀ ದೊಡ್ಡ ನಗರವಾಗಿ ಬೆಳೆಯತೊಡಗಿ ವಾಣಿಜ್ಯ, ಉದ್ಯಮ, ಶಿಕ್ಷಣ, ಕೃಷಿ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಭರದಿಂದ ಅಭಿವೃದ್ಧಿ ಹೊಂದಿ ಜಿಲ್ಲಾ ಕೇಂದ್ರವಾಗಲು ಎಲ್ಲಾ ಪೂರಕ ವಾತಾವರಣವನ್ನು ನಿರ್ಮಿಸಿಕೊಂಡಿದೆ. ರಾಜ್ಯವನ್ನಾಳಿದ ಸರಕಾರಗಳೇ ನೇಮಿಸಿದಂತಹ ಪಿ.ಸಿ. ಗದ್ದಿಗೌಡರ, ವಾಸುದೇವ ಮತ್ತು ಹುಂಡೇಕರ ಆಯೋಗಗಳು ಕಳೆದ ಹಲವು ದಶಕಗಳ ಹಿಂದೆಯೇ ಬೆಳಗಾವಿ ಜಿಲ್ಲೆ ವಿಭಜಿಸುವುದಾದರೆ ಗೋಕಾಕನ್ನೆ ನೂತನ ಜಿಲ್ಲೆಯನ್ನಾಗಿ ಮಾಡಬೇಕೆಂದು ವರದಿಗಳನ್ನು ನೀಡಿವೆ. ಇವುಗಳನ್ನು ಆಧರಿಸಿ ಮಾಜಿ ಮುಖ್ಯಮಂತ್ರಿ ದಿವಂಗತ ಜಿ.ಎಚ್.ಪಟೇಲ ಅವರು ತಮ್ಮ ಅಧಿಕಾರವಧಿಯಲ್ಲಿ ಗೆಜೆಟ್ ಕೂಡ ಹೊರಡಿಸಿದ್ದರು. ಕ್ರಮೇಣ ಜಿಲ್ಲೆಯಲ್ಲಿ ರಾಜಕೀಯ ದ್ರುವೀಕರಣವಾದಂತೆ ಸರಕಾರಗಳು ಭೌಗೋಳಿಕ ದೃಷ್ಠಿಯಿಂದ ಜಿಲ್ಲೆಗೆ ಸೂಕ್ತವಾಗಿರುವ ಗೋಕಾಕ ನಗರವನ್ನು ಜಿಲ್ಲಾ ಸ್ಥಾನಮಾನ ವಂಚಿತವನ್ನಾಗಿ ಮಾಡಿ ಗೋಕಾಕ ಭಾಗದ ಜನರಿಗೆ ಅನ್ಯಾಯ ಮಾಡುತ್ತಾ ಬಂದಿದೆ.
ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕಳೆದ ಹಲವು ದಶಕಗಳಿಂದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದಿದ್ದರೂ ಸಹ ಜಿಲ್ಲಾ ಸ್ಥಾನಮಾನದಿಂದ ವಂಚಿತವಾಗಿರುವ ಗೋಕಾಕನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಗೋಕಾಕ ನಾಡಿನ ಸಮಸ್ತ ನಾಗರಿಕರ ಪರವಾಗಿ ಕನ್ನಡ ಪರ ಸಂಘಟನೆಗಳು ಮನವಿಯಲ್ಲಿ ವಿನಂತಿಸಿದ್ದಾರೆ. ಇದಕ್ಕೆ ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ತಾಲೂಕಿನಾದ್ಯಂತ ಉಗ್ರ ಸ್ವರೂಪದ ಹೋರಾಟಗಳನ್ನು ಕೈಗೊಳ್ಳಲಾಗುವುದೆಂದು ಈ ಮನವಿ ಮೂಲಕ ಎಚ್ಚರಿಸಲಾಗಿದೆ.
ಪ್ರತಿಭಟನೆಯಲ್ಲಿ ಶ್ರೀಮತಿ ಯಶೋಧಾ ಬಿರಡಿ, ಸಾಧಿಕ ಹಲ್ಯಾಳ, ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ಪವನ ಮಹಾಲಿಂಗಪೂರ, ಮಹಾದೇವ ಮಕ್ಕಳಗೇರಿ, ಮಂಜುನಾಥ ಝಲ್ಲಿ, ಅಶೋಕ ಬಂಡಿವಡ್ಡರ, ಅಭಿಷೇಕ, ಮುತ್ತು, ಲಕ್ಷ್ಮಣ ಪಾತ್ರೂಟ, ಹನಮಂತ ಬಂಡಿವಡ್ಡರ, ದುರಗಪ್ಪ ಬಂಡಿವಡ್ಡರ, ಕೃಷ್ಣಾ ಬಂಡಿವಡ್ಡರ, ಕೆಂಪಣ್ಣ ಕಡಕೋಳ, ಮಲ್ಲಪ್ಪ ತಲೆಪ್ಪಗೋಳ, ರಾಮಪ್ಪ ಸಣ್ಣಲಗಮನ್ನವರ, ಮುತ್ತೆಪ್ಪ ಘೋಡಗೇರಿ, ರಮೇಶ ಕಮತಿ, ಶೆಟ್ಟೆಪ್ಪ ಗಾಡಿವಡ್ಡರ, ರಾಮ ಕುಡ್ಡೆಮ್ಮಿ, ಸಂಜು ಗಾಡಿವಡ್ಡರ, ಅಜೀತ ಮಲ್ಲಾಪೂರೆ, ಲಕ್ಕಪ್ಪ ನಂದಿ, ದುಂಡಪ್ಪಾ ನಿಂಗನ್ನವರ, ಫಕೀರಪ್ಪ ಗಣಾಚಾರಿ, ಆನಂದ ಬಿರಡಿ, ಗುರು ಮುನ್ನೋಳಿಮಠ, ಹನಮಂತ ಬಂಡಿವಡ್ಡರ, ರಾಜು ಮನಕಪ್ಪಗೋಳ, ಬಸು ತೇಲಿ, ದುರಗಪ್ಪ ಗಾಡಿವಡ್ಡರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Related posts: