RNI NO. KARKAN/2006/27779|Friday, November 22, 2024
You are here: Home » breaking news » ಮೂಡಲಗಿ:2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧೆ ಖಚಿತ : ಶಾಸಕ ಬಾಲಚಂದ್ರ

ಮೂಡಲಗಿ:2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧೆ ಖಚಿತ : ಶಾಸಕ ಬಾಲಚಂದ್ರ 

 2018 ರ ವಿಧಾನಸಭಾ ಚುನಾವಣೆಯಲ್ಲಿ  ಬಿಜೆಪಿಯಿಂದಲೇ ಸ್ಪರ್ಧೆ ಖಚಿತ  : ಶಾಸಕ ಬಾಲಚಂದ್ರ

ಮೂಡಲಗಿ ಡಿ 27 : ಜನೇವರಿ ಅಂತ್ಯದೊಳಗೆ ಮೂಡಲಗಿ ಹೊಸ ತಾಲೂಕಿನ ಸರಕಾರಿ ಕಛೇರಿಗಳು ಆರಂಭಗೊಳ್ಳಲಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಯ ಪುರಸಭೆ ಸಭಾಭವನದಲ್ಲಿ ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈಗಾಗಲೇ ಆಕ್ಷೇಪಣೆಗಳಿಗೆ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ. ಜನೇವರಿ 7 ರವರೆಗೆ ಹೊಸ ತಾಲೂಕುಗಳ ಆಕ್ಷೇಪಣಾ ಅವಧಿ ಇರುವದರಿಂದ ಅದರೊಳಗೆ ಕಛೇರಿಗಳ ಕಾರ್ಯಾರಂಭಕ್ಕೆ ಅವಕಾಶವಿರುವದಿಲ್ಲ. ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಹೊಸ ತಾಲೂಕಿಗೆ ಅಗತ್ಯವಿರುವ ತಾಲೂಕು ಮಟ್ಟದ ಕಛೇರಿಗಳನ್ನು ಆರಂಭಿಸಲಾಗುವದು ಎಂದು ತಿಳಿಸಿದರು.
ಹೊಸ ತಾಲೂಕಿಗೆ ಹೊಬಳಿ ಕೇಂದ್ರದ ಅವಶ್ಯಕತೆ ಇದ್ದು, ಈಗಾಗಲೇ ಮೂಡಲಗಿ ಹೊಸ ತಾಲೂಕಿಗೆ ಅರಭಾಂವಿ ಹೊಬಳಿಯನ್ನು ಸೇರಿಸಲಾಗಿದೆ. ಆದರೆ ಅವರು ಮೂಡಲಗಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗೋಕಾಕದಲ್ಲಿಯೇ ತಮ್ಮ ಹೊಬಳಿಯನ್ನು ಮುಂದುವರೆಸುವಂತೆ ಒತ್ತಾಯಿಸುತ್ತಿದ್ದಾರೆ. ಮೂಡಲಗಿ ತಾಲೂಕಿಗೆ ಹೊಬಳಿ ಕೇಂದ್ರ ಅಗತ್ಯವಿರುವದರಿಂದ ಅರಭಾಂವಿ ಹೊಬಳಿ ಮಟ್ಟದ ನಾಗರಿಕರ ನ್ನು ಮನವೊಲಿಸುವ ಪ್ರಯತ್ನ ಮಾಡಲಾಗುವದು. ಅರಭಾಂವಿ ಸಾಧ್ಯವಾಗದಿದ್ದಲ್ಲಿ ಕೌಜಲಗಿ ಹೊಬಳಿಯನ್ನು ಮೂಡಲಗಿಗೆ ಸೇರಿಸಿ ಮೂಡಲಗಿ ಹೊಸ ತಾಲೂಕಿಗೆ ಅಗತ್ಯವಿರುವ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವದು ಎಂದು ಹೇಳಿದರು.
ಡಿ. 19 ರಂದು ಪಟ್ಟಣದ ಗವಿ ಮಠದಲ್ಲಿ ಜರುಗಿದ ಜನಸಂಪರ್ಕ ಸಭೆಯಲ್ಲಿ ಹಲವರು ಖುಲ್ಲಾ ನಿವೇಶನಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ನಿವೇಶನ ಒದಗಿಸಿದರೆ ಅವರಿಗೆ ವಸತಿ ಸೌಕರ್ಯಕ್ಕೆ ಅನುಕೂಲವಾಗುತ್ತದೆ. ಮೂಡಲಗಿಯಲ್ಲಿ ನಿವೇಶನದ ಕೊರತೆ ಇರುವದರಿಂದ ಫಲಾನುಭವಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಚಿಂತನೆ ನಡೆದಿದೆ. ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಮಿಸಲಿಟ್ಟ ಈರಣ್ಣ ಗುಡಿಯ ಹತ್ತಿರ ಮೂರು ಎಕರೆ ನಿವೇಶನವು ಈ ಹಿಂದೆ ಆಶ್ರಯ ಯೋಜನೆಗಾಗಿ ಖರೀದಿ ಮಾಡಿದ್ದು ಸದ್ಯ ನಿರ್ಗತಿಕ ಕುಟುಂಬಗಳಿಗೆ ವಸತಿ ಸೌಲಭ್ಯಗಳನ್ನು ನಿರ್ಮಿಸಿಕೊಡುವ ಆಲೋಚನೆಯಲ್ಲಿದ್ದೇವೆ. ಪುರಸಭೆ ಸಮಿತಿಯೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವದು. ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಅಗತ್ಯ ವಿರುವ ಹಾಗೂ ಜನರಿಗೆ ಆಡಳಿತಾತ್ಮಕವಾಗಿ ಅನುಕೂಲವಾಗುವ ನಿವೇಶನ ಗುರುತಿಸುವಂತೆ ಪುರಸಭೆಯವರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸಮಗ್ರ ಅಭಿವೃಧ್ಧಿಗೆ ಪಣ: ಅರಭಾಂವಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣ ತೊಡಲಾಗಿದೆ. ಕಳೆದ 13 ವರ್ಷಗಳಿಂದ ಕ್ಷೇತ್ರದ ಸರ್ವತೋಮುಖ ಏಳ್ಗೆಗೆ ಹಗಲಿರುಳು ಶ್ರಮಿಸಲಾಗುತ್ತಿದೆ. ಆದರೂ ಕೆಲ ವಿರೋಧಿಗಳು ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕ್ಷೇತ್ರ ಅಭಿವೃದ್ಧಿಯಾಗಿಲ್ಲವೆಂದು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಕೌಜಲಗಿಯ ಗ್ರಾ.ಪಂ ನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕೇಂದ್ರ ಸರ್ಕಾರ ದೇಶದಲ್ಲಿ 5 ನೇ ಸ್ಥಾನ ನೀಡಿದೆ. ಹುಣಶ್ಯಾಳ ಪಿ.ಜಿ ಅಭಿವೃದ್ಧಿ ಕಾರ್ಯಗಳು ಇಡಿ ಕ್ಷೇತ್ರಕ್ಕೆ ಮಾದರಿಯಾಗಿವೆ ಎಂದು ಹೇಳಿದರು.
ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ನಗರೋತ್ಥಾನ ಯೋಜನೆಯಡಿ 7.5 ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳು ಆರಂಭವಾಗಲಿವೆ. ರೈತಾಪಿ ವರ್ಗದ ಹೊಲಗಳಿಗೆ ಸುರಕ್ಷಿತ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಮಾರ್ಚ ಅಂತ್ಯದೊಳಗೆ ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಹೇಳಿದರು.
ಮನೆ ಮುಂದೆ ಧರಣಿ ಎಚ್ಚರಿಕೆ: ಮೂಡಲಗಿ ತಾಲೂಕು ರಚನೆಯ ಹೋರಾಟದ ಸಂದರ್ಭದಲ್ಲಿ ಕೆಲವರು ನಮ್ಮ ಕುಟುಂಬದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಆದರೂ ಇಲ್ಲಿಯ ಶ್ರೀಪಾದಬೋಧ ಸ್ವಾಮೀಜಿ ಹಾಗೂ ಹಿರಿಯರ ಮಾತಿಗೆ ಬೆಲೆ ನೀಡಿ ಸುಮ್ಮನಿದ್ದೇನೆ. ಎಲ್ಲವನ್ನು ಸಹಿಸಿಕೊಂಡು ಇಲ್ಲಿಯವರೆಗೆ ಬಂದಿದ್ದೇನೆ. ಈಗಾಗಲೇ ಮೂಡಲಗಿ ಹೊಸ ತಾಲೂಕು ಕೇಂದ್ರವಾಗಿದೆ. ರಾಜಕೀಯ ಮಾಡುವವರು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿ. ವಿನಾಕಾರಣ ನಮ್ಮ ಕುಟುಂಬದ ವಿರುದ್ಧ ಯಾರಾದರೂ ಆಧಾರ ರಹಿತ ಟೀಕೆಗಳನ್ನು ಮಾಡಿದರೆ ಇನ್ನೂ ಮುಂದೆ ನಾನು ಸುಮ್ಮನಿರುವದಿಲ್ಲ. ಅಂತಹವರ ಮನೆಗಳ ಮುಂದೆ ನಮ್ಮ ಅಭಿಮಾನಿಗಳು ಧರಣಿ ನಡೆಸುವರು ಎಂದು ಖಡಕ್ ಎಚ್ಚರಿಕೆ ನೀಡಿದರು.
ಬಿಜೆಪಿಯಿಂದಲೇ ಸ್ಪರ್ಧೆ ಖಚಿತ: 2018 ರಲ್ಲಿ ನಡೆಯುವ ಚುನಾವಣೆಯಲ್ಲಿ ಅರಭಾಂವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಬಿಜೆಪಿಯನ್ನು ಬಿಡುವ ಪ್ರಶ್ನೆಯೇ ಇಲ್ಲ. ಕೆಲ ವಿರೋಧಿಗಳು ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತದಿಂದ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷೆ ಕಮಲವ್ವ ಹಳಬರ, ಉಪಾಧ್ಯಕ್ಷ ರವಿ ಸೋನವಾಲಕರ, ಬಿಡಿಸಿಸಿ ಉಪಾಧ್ಯಕ್ಷ ಎಸ್.ಜಿ ಢವಳೇಶ್ವರ, ಪುರಸಭೆ ಮಾಜಿ ಅಧ್ಯಕ್ಷರಾದ ವೀರಣ್ಣ ಹೊಸೂರ, ರವಿ ಸಣ್ಣಕ್ಕಿ, ರಾಮಣ್ಣಾ ಹಂದಿಗುಂದ, ಧುರೀಣ ಎನ್.ಟಿ ಫೀರೋಜಿ, ಪುರಸಭೆ ಸದಸ್ಯರು, ಮುಖಂಡರುಗಳು ಉಪಸ್ಥಿತರಿದ್ದರು.

Related posts: