RNI NO. KARKAN/2006/27779|Saturday, December 14, 2024
You are here: Home » breaking news » ಮೂಡಲಗಿ:ಜಗತ್ತಿನಲ್ಲಿ ಭಾರತ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ರಾಷ್ಟ್ರ: ಮಾಜಿ ಸಚಿವ ಬಾಲಚಂದ್ರ

ಮೂಡಲಗಿ:ಜಗತ್ತಿನಲ್ಲಿ ಭಾರತ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ರಾಷ್ಟ್ರ: ಮಾಜಿ ಸಚಿವ ಬಾಲಚಂದ್ರ 

ಜಗತ್ತಿನಲ್ಲಿ ಭಾರತ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ರಾಷ್ಟ್ರ: ಮಾಜಿ ಸಚಿವ ಬಾಲಚಂದ್ರ

ಮೂಡಲಗಿ ಜ 24: ಜಗತ್ತಿನಲ್ಲಿ ಭಾರತ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ರಾಷ್ಟ್ರವಾಗಿದ್ದು, ಧಾರ್ಮಿಕತೆಯಲ್ಲಿ ವಿಶ್ವಕ್ಕೆ ಗುರುವಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮಂಗಳವಾರ ಸಂಜೆ ಸಮೀಪದ ಧರ್ಮಟ್ಟಿ ಗ್ರಾಮದ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ದೇಶದಲ್ಲಿ ಸಾಕಷ್ಟು ಧರ್ಮ,ಜಾತಿ,ಮತಗಳಿದ್ದರೂ ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಬೆರೆತು ಒಗ್ಗಟ್ಟನ್ನು ಪ್ರದರ್ಶಿಸುತ್ತಿರುವುದು ಜಗತ್ತಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಜಾತ್ರೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಗತಕಾಲದ ವೈಭವ ಮರುಕಳಿಸುತ್ತದೆ. ಜಾತ್ರೆಗಳು ನಮ್ಮ ಇತಿಹಾಸದ ಪುಟಗಳನ್ನು ನೆನಪಿಸುತ್ತದೆ. ಜಾತ್ರೆಗಳಲ್ಲಿ ಭಾಗಿಯಾಗುವ ಮೂಲಕ ದೇವರಲ್ಲಿ ನಮ್ಮ ಹರಿಕೆಗಳನ್ನು ಬೇಡಿಕೊಳ್ಳಬೇಕು. ನಮ್ಮ ಇಷ್ಟಾರ್ಥಗಳನ್ನು ದೇವರು ಈಡೇರಿಸುತ್ತಾನೆ, ದೇವರಲ್ಲಿ ಭಕ್ತಿ ಭಾವದ ಮೂಲಕ ತನು-ಮನ-ಧನಗಳ ಸೇವೆಯನ್ನು ಸಲ್ಲಿಸಿ ದೇವರಿಗೆ ಕೃತಾರ್ಥರಾಗುವಂತೆ ತಿಳಿಸಿದರು.
ದೇವರ ದಯೆಯಿಂದ ಹಿಡಕಲ್ ಜಲಾಶಯದ ನೀರು ನಮ್ಮ ಎಲ್ಲ ಕಾಲುವೆಗಳಿಗೆ ಸದುಪಯೋಗವಾಗುತ್ತಿದೆ. ಮುಂದಿನ ಎಪ್ರೀಲ್-ಮೇ ತಿಂಗಳಲ್ಲಿ ಬೇಸಿಗೆ ಕಾಲ ಆವರಿಸುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಪಡಿಸಲು ಮತ್ತೊಮ್ಮೆ ವರುಣ ದೇವನ ಪ್ರವೇಶವಾಗಬೇಕು. ಮಳೆ ಬಂದರೆ ರೈತ ಸುಖವಾಗಿರುತ್ತಾನೆ. ರೈತ ಸುಖದಿಂದ ಇದ್ದರೆ ಇಡಿ ದೇಶವೇ ನೆಮ್ಮದಿಯಿಂದ ಇರುತ್ತದೆ. ಕಾಲ ಕಾಲಕ್ಕೆ ಮಳೆಯಾಗಿ, ಸಮೃದ್ದಿಯ ಬೆಳೆಗಳು ಬೆಳೆದು ನಾಡಿಗೆಲ್ಲಾ ಒಳ್ಳೆಯದಾಗಲಿ ಎಂದು ನಾವೆಲ್ಲ ಆ ಭಗವಂತನಲ್ಲಿ ಬೇಡಿಕೊಳ್ಳೋಣ ಎಂದು ಪ್ರಾರ್ಥಿಸಿದರು.
ಧರ್ಮಟ್ಟಿ ಗ್ರಾಮದ ಅಭಿವೃದ್ದಿಗೆ ಸರ್ಕಾರದಿಂದ ಸಾಕಷ್ಟು ಜನಪರ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿಯ ಹಿರಿಯರ ಒಗ್ಗಟ್ಟಿನ ಬಲದಿಂದ ಗ್ರಾಮವು ಅಭಿವೃದ್ದಿಯತ್ತ ಸಾಗುತ್ತಿದೆ. ಎಲ್ಲಿ ವೈಮನಸ್ಸುಗಳು ಇರುವುದಿಲ್ಲವೋ ಅಲ್ಲಿ ಅಭಿವೃದ್ದಿಯ ಪರ್ವವಾಗುತ್ತದೆ ಎಂದು ಹೇಳಿದರು.
ತಾಪಂ ಮಾಜಿ ಸದಸ್ಯ ಭೀಮಪ್ಪ ಪೂಜೇರಿ, ಜಿಪಂ ಮಾಜಿ ಸದಸ್ಯ ಭೀಮಶಿ ಮಗದುಮ್ಮ, ಅಶೋಕ ಪರುಶೆಟ್ಟಿ, ಪರಶುರಾಮ ಸನದಿ, ಶ್ರೀಕಾಂತ ದೇಸಾಯಿ, ಲಕ್ಷ್ಮಣ ಕೆಳಗಡೆ, ಯಲ್ಲಪ್ಪ ಮಗದುಮ್ಮ, ಲಗಮಣ್ಣ ಕುಟ್ರಿ, ನಿಂಗಪ್ಪ ಹಾರೂಗೊಪ್ಪ, ಮುತ್ತೆಪ್ಪ ಲೋಕುರಿ, ಮಹಾದೇವ ಬಡ್ಡಿ, ಲಕ್ಕಪ್ಪ ಪೂಜೇರಿ, ವಿಠ್ಠಲ ಪೂಜೇರಿ, ಸುರೇಶ ಪೂಜೇರಿ, ಶಿವಬಸು ಹಳ್ಳೂರ, ಓಗೆಪ್ಪ ಬಬಲಿ, ಉದ್ದಪ್ಪ ಬಬಲಿ, ಬನಪ್ಪ ಕೊರಕಪೂಜೇರಿ, ಲಕ್ಕಪ್ಪ ಕೊರಕಪೂಜೇರಿ, ಷಣ್ಮುಖ ಕುಂಬಾರ, ಮೂಡಲಗಿ ಪಿಎಸ್‍ಐ ಬಾಲದಂಡಿ ಮುಂತಾದವರು ಉಪಸ್ಥಿತರಿದ್ದರು.

Related posts: