ಖಾನಾಪುರ:ಪ್ರತಿ ಮತಗಟ್ಟೆಯಲ್ಲಿ ಶೌಚಾಲಯ, ವಿದ್ಯುತ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸಿಇಒ ಸೂಚನೆ
ಪ್ರತಿ ಮತಗಟ್ಟೆಯಲ್ಲಿ ಶೌಚಾಲಯ, ವಿದ್ಯುತ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸಿಇಒ ಸೂಚನೆ
ಖಾನಾಪುರ ಫೆ 22: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ಪ್ರತಿ ಮತಗಟ್ಟೆಯಲ್ಲಿ ಶೌಚಾಲಯ, ವಿದ್ಯುತ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇಂಟರ್‍ನೆಟ್ ಸೌಲಭ್ಯ ಇರುವಲ್ಲಿ ಮತದಾನ ಪ್ರಕ್ರಿಯೆ ವೆಬ್‍ಕಾಶ್ಟಿಂಗ್ ಮಾಡಬೇಕು. ಒಂದು ವೇಳೆ ಸದರೀ ಸೌಲಭ್ಯಗಳನ್ನು ಕಲ್ಪಿಸಲು ವಿಫಲವಾದಲ್ಲಿ ಅಂಥವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವುದೆಂದು ಬೆಳಗಾವಿ ಜಿಪಂ ಸಿಇಒ ಆರ್ ರಾಮಚಂದ್ರನ್ ಸೂಚಿಸಿದರು.
ಪಟ್ಟಣದ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಬುಧವಾರ ಜಿಲ್ಲಾ ಪಂಚಾಯತಿಯಿಂದ ಆಯೋಜಿಸಿದ್ದ ಉತ್ತಮ ಆಡಳಿತ ನಿರ್ವಹಣೆ ಕುರಿತು ಒಂದು ದಿನದ ತರಬೇತಿಯಲ್ಲಿ ಭಾಗವಹಿಸಿದ್ದ ತಾಲೂಕಿನ ಗ್ರಾಪಂ ಪಿಡಿಒಗಳು, ಕಾರ್ಯದರ್ಶಿ, ಆಡಳಿತ ಸಹಾಯಕರು, ವಲಯ ಅರಣ್ಯ ಅಧಿಕಾರಿಗಳು, ತಾಂತ್ರಿಕ ಸಹಾಯಕ ಅಭಿಯಂತರರು ಹಾಗೂ ಇನ್ನಿತರ ಅನುಷ್ಠಾನ ಇಲಾಖೆಯ ಅಧಿಕಾರಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಕಳೆದ ವರ್ಷಕ್ಕೆ ಹೊಲಿಸಿದರೆ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ಮಾನವ ದಿನಗಳ ಸೃಜನೆ ಕಡಿಮೆಯಾಗಿದ್ದು, ಮಾನವ ದಿನ ಸೃಜಿಸಲು ಎಲ್ಲ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗಚೀಟಿ ನವೀಕರಣ, 7 ದಾಖಲೆಗಳ ನಿರ್ವಹಣೆ, ಕಾಮಗಾರಿ ಸ್ಥಳಗಳಲ್ಲಿ ನಾಮಫಲಕ, ಕಾಮಗಾರಿ ಕಡತಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸ್ವಚ್ಛ ಭಾರತ ಮಿಷಿನ್ ಅಡಿಯಲ್ಲಿ ಇನ್ನೂ ಹಣ ನೀಡಬೇಕಾದ ಶೌಚಾಲಯಗಳಿಗೆ ತುರ್ತಾಗಿ ಹಣ ನೀಡುವ ವ್ಯವಸ್ಥೆ ಮಾಡಬೇಕು. ಹೊಸದಾಗಿ ನರೇಗಾ ಕೂಲಿ ಕಾರ್ಮಿಕರ ಪೈಕಿ ಸಾಮಾನ್ಯ ವರ್ಗದವರಿಗೆ ನೀಲಿಬಣ್ಣದ ಉದ್ಯೋಗ ಚೀಟಿ ಹಾಗೂ ವಿಶೇಷ ವರ್ಗದವರಿಗೆ ಹಸಿರು ಬಣ್ಣದ ಉದ್ಯೋಗ ಚೀಟಿ ವಿತರಿಸಿ ಎಂದು ಪಿಡಿಒಗಳಿಗೆ ಅವರು ಸೂಚಿಸಿದರು.
ತರಬೇತಿ ನೀಡಲು ಆಗಮಿಸಿದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಜಿಲ್ಲಾ ಎಡಿಪಿಸಿ ಸಂಯೋಜಕ ಬಸವರಾಜ ಎನ್ ಹಾಗೂ ಜಿಲ್ಲಾ ಐಇಸಿ ಸಂಯೋಜಕ ಪ್ರಮೋದ ತರಬೇತಿದಾರರಿಗೆ ಉತ್ತಮ ಆಡಳಿತ ನಿರ್ವಹಣೆ ಕುರಿತು ತರಬೇತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಇಒ ಪ್ರವೀಣ ಕಟ್ಟಿ, ನರೇಗಾ ಸಹಾಯಕ ನಿರ್ದೇಶಕ ವಿಲಾಸರಾಜ್‍ಪ್ರಸನ್ನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು. ಸಾತಪ್ಪ ಈರಗಾರ ಸ್ವಾಗತಿಸಿದರು. ಆರತಿ ಅಂಗಡಿ ವಂದಿಸಿದರು.