ಗೋಕಾಕ:ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿಸಲು ಶೀಘ್ರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ : ಶಾಸಕ ಬಾಲಚಂದ್ರ
ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿಸಲು ಶೀಘ್ರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ : ಶಾಸಕ ಬಾಲಚಂದ್ರ
ಗೋಕಾಕ ಫೆ 22 : ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ರಚಿಸುವಂತೆ ಒತ್ತಾಯಿಸಲು ಶೀಘ್ರದಲ್ಲಿಯೇ ನಿಯೋಜಿತ ಗೋಕಾಕ ಜಿಲ್ಲಾ ರಚನಾ ಹೋರಾಟ ಸಮೀತಿಯ ನೇತೃತ್ವದ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ವಕೀಲರ ಸಂಘದ ಸದಸ್ಯರು ಜಿಲ್ಲಾ ಕೇಂದ್ರಕ್ಕಾಗಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ವಿಷಯ ತಿಳಿಸಿದ ಅವರು, ಹೋರಾಟ ಸಮೀತಿಯ ನೇತೃತ್ವ ವಹಿಸಿಕೊಂಡಿರುವ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಿಯೋಗವು ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಲಿದೆ ಎಂದು ಹೇಳಿದರು.
ಕಳೆದ ಮೂರು ದಶಕಗಳಿಂದ ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ರಚಿಸುವಂತೆ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ. ಜಿಲ್ಲಾ ಕೇಂದ್ರವಾಗಲಿಕ್ಕೆ ಎಲ್ಲ ಅರ್ಹತೆಗಳನ್ನು ಪಡೆದಿರುವ ಗೋಕಾಕನ್ನು ಹಿಂದಿನ ಎಂ.ವಾಸುದೇವರಾವ್, ಡಿ.ಎಂ. ಹುಂಡೇಕಾರ, ಪಿ.ಸಿ. ಗದ್ದಿಗೌಡರ ನೇತೃತ್ವದ ಜಿಲ್ಲಾ ಪುನರ್ ವಿಂಗಡಣಾ ಸಮೀತಿಗಳು ಆಗೀನ ಸರ್ಕಾರಗಳಿಗೆ ಶಿಫಾರಸ್ಸು ಮಾಡಿವೆ. ಆದರೆ ಇದುವರೆಗೂ ಗೋಕಾಕ ಜಿಲ್ಲಾ ಕೇಂದ್ರವಾಗುವ ಯೋಗ ಕೂಡಿ ಬಂದಿಲ್ಲ. ಜೆ.ಎಚ್.ಪಟೇಲ್ ಅವರು ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ರಚಿಸಿ ಈ ಬಗ್ಗೆ ಗೆಜೆಟ್ ಕೂಡ ಹೊರಡಿಸಿದ್ದರು. ಆದರೂ ಗೋಕಾಕ ಜಿಲ್ಲೆ ರಚನೆಯಾಗಲಿಲ್ಲ. ಇದರಿಂದ ಜಿಲ್ಲಾ ಹೋರಾಟಗಾರರಿಗೆ ತುಂಬ ಅನ್ಯಾಯವಾಯಿತು. ಜಿಲ್ಲೆಗಾಗಿ ಸತತ ಹೋರಾಟವನ್ನು ಮಾಡಿಕೊಂಡು ಬರುತ್ತಿರುವ ನಮಗೆ ಗೋಕಾಕ ಹೊಸ ಜಿಲ್ಲೆಯಾಗಬೇಕು ಎಂಬ ಸದುದ್ಧೇಶದಿಂದ ಹೋರಾಟವನ್ನು ತೀವ್ರಗೊಳಿಸುತ್ತ ಬಂದಿದ್ದೇವೆ. ಶೂನ್ಯ ಸಂಪಾದನ ಮಠದ ಸ್ವಾಮೀಜಿಗಳ ನೇತೃತ್ವದಲ್ಲಿಯೇ ಹೋರಾಟವನ್ನು ಮಾಡಲಾಗುತ್ತಿದ್ದು, ಗೋಕಾಕ ನ್ಯಾಯವಾದಿಗಳ ಸಂಘ, ವರ್ತಕರ ಸಂಘ, ಕನ್ನಡಪರ ಸಂಘಟನೆಗಳು ಹಾಗೂ ತಾಲೂಕಿನ ಎಲ್ಲ ಜನಪ್ರತಿನಿಧಿಗಳು ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆಂದು ಹೇಳಿದರು.
ತಾಲೂಕಿನ ಮಠಾಧೀಶರು, ವಕೀಲರು ಹಾಗೂ ಕೆಲ ಪ್ರಮುಖರ ನಿಯೋಗವನ್ನು ಇಷ್ಟರಲ್ಲಿಯೇ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರ ಮೂಲಕ ಒತ್ತಡ ಹೇರಲಾಗುವುದು. ಮುಖ್ಯಮಂತ್ರಿಗಳಿಂದ ಬರುವ ಪ್ರತಿಕ್ರಿಯೆಯನ್ನು ಅರಿತು ಮುಂದಿನ ಹೋರಾಟದ ರೂಪುರೇಷೆಗಳನ್ನು ಹಾಕಿಕೊಳ್ಳಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಕೀಲರಿಗೆ ಸ್ಪಷ್ಟ ಭರವಸೆ ನೀಡಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎಲ್.ಎನ್. ಬೂದಿಗೊಪ್ಪ, ಸಿ.ಡಿ. ಹುಕ್ಕೇರಿ, ಮಾಜಿ ಉಪಾಧ್ಯಕ್ಷರಾದ ಜಿ.ಎಸ್.ನಂದಿ, ಎಲ್.ಎಸ್. ಬಂಡಿ, ಖಜಾಂಚಿ ಬಿ.ಬಿ. ಬೀರನಗಡ್ಡಿ, ವಕೀಲರಾದ ಎಸ್.ಬಿ. ಪಾಟೀಲ, ಎಚ್.ಬಿ. ಸಂಗಟಿ, ಬಿ.ಎಂ. ಕಲ್ಲೋಳಿ, ಯು.ಬಿ. ಸಿಂಪಿ, ಬಿ.ಬಿ. ಮರೆಪ್ಪಗೋಳ, ಬಿ.ಆರ್. ಕೋಟಗಿ, ಎಂ.ಕೆ. ಪೂಜೇರಿ, ಮುತ್ತುರಾಜ ಕುಳ್ಳೂರ, ಸುರೇಶ ಜಾಧವ, ರಡ್ಡಿ, ಅಡಿವೆಪ್ಪ ಬಿಲಕುಂದಿ ಅವರು ಉಪಸ್ಥಿತರಿದ್ದರು.