RNI NO. KARKAN/2006/27779|Wednesday, October 30, 2024
You are here: Home » breaking news » ಗೋಕಾಕ: ನೂತನ ಜಿಲ್ಲೆಗಾಗಿ ಆಗ್ರಹಿಸಿ ಕರವೇಯಿಂದ ತಲೆಯ ಮೇಲೆ ಕಲ್ಲು ಹೊತ್ತು ಪ್ರತಿಭಟನೆ

ಗೋಕಾಕ: ನೂತನ ಜಿಲ್ಲೆಗಾಗಿ ಆಗ್ರಹಿಸಿ ಕರವೇಯಿಂದ ತಲೆಯ ಮೇಲೆ ಕಲ್ಲು ಹೊತ್ತು ಪ್ರತಿಭಟನೆ 

ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ಕರವೇಯಿಂದ ತಲೆಯ ಮೇಲೆ ಕಲ್ಲು ಹೊತ್ತು ಪ್ರತಿಭಟನೆ

ಗೋಕಾಕ ಪೆ 28: ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಸಿದರು. ಬುಧವಾರದಂದು ಮಧ್ಯಾಹ್ನ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕರವೇ ಕಾರ್ಯಕರ್ತರು ವಿಳಂಬ ನೀತಿ ತೋರುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ತಲೆಯ ಮೇಲೆ ಕಲ್ಲುಗಳನ್ನು ಹೊತ್ತು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಹಿಂದಿನ ಸರ್ಕಾರಗಳೇ ನೇಮಿಸಿದಂತಹ ವಾಸುದೇವ, ಪಿ.ಸಿ. ಗದ್ದಿಗೌಡರ, ಹುಂಡೇಕರ ಆಯೋಗಗಳು ಆಡಳಿತಾತ್ಮಕವಾಗಿ ಗೋಕಾಕನ್ನೇ ಜಿಲ್ಲೆ ಮಾಡಬೇಕೆಂದು ತಮ್ಮ ವರದಿಗಳನ್ನು ಒಪ್ಪಿಸಿ ಸುಮಾರು 4 ದಶಕಗಳು ಕಳೆದರೂ ಸಹ ರಾಜ್ಯವನ್ನು ಆಳಿದ ಮತ್ತು ಆಳುತ್ತಿರುವ ಸರ್ಕಾರಗಳು ಗೋಕಾಕ ಜಿಲ್ಲೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿವೆ. ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಇಂದು ಗೋಕಾಕ ಮತ್ತು ಚಿಕ್ಕೋಡಿ ಎರಡು ಜಿಲ್ಲಾ ಕೇಂದ್ರದಿಂದ ವಂಚಿತವಾಗುತ್ತಿರುವುದು ಆಯಾ ಭಾಗಗಳ ಜನರ ದುರ್ದೈವ. ಕಳೆದ ಹಲವು ವರ್ಷಗಳಿಂದ ಜಿಲ್ಲೆಗಾಗಿ ಆಗ್ರಹಿಸಿ ಹಲವಾರು ಹೋರಾಟಗಳು ತೀವ್ರಗೊಂಡರೂ ಸಹ ತಲೆ ಕೆಡಿಸಿಕೊಳ್ಳದ ಸರ್ಕಾರದ ಕ್ರಮ ತರವಲ್ಲ. ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಆದಷ್ಟು ಬೇಗ ಗೋಕಾಕ ಮತ್ತು ಚಿಕ್ಕೋಡಿಯನ್ನು ನೂತನ ಜಿಲ್ಲೆ ಎಂದು ಘೋಷಿಸಲು ಗಡಸುತನ ತೋರಬೇಕು ಇಲ್ಲದಿದ್ದರೆ ಬರುವ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದೆಂದು ಖಾನಪ್ಪನವರ ಹೇಳಿದರು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಸಾಧಿಕ್ ಹಲ್ಯಾಳ, ಎ.ಕೆ. ದೇಸಾಯಿ, ಕೃಷ್ಣಾ ಖಾನಪ್ಪನವರ, ದೀಪಕ್ ಹಂಜಿ, ರೆಹಮಾನ ಮೊಕಾಶಿ, ಲಕ್ಷ್ಮಣ ಗೊರಗುದ್ದಿ, ಅಶೋಕ ಬಂಡಿವಡ್ಡರ, ಮಹಾದೇವ ಮಕ್ಕಳಗೇರಿ, ಶೆಟ್ಟೆಪ್ಪ ಗಾಡಿವಡ್ಡರ, ಶಾನೂಲ ದೇಸಾಯಿ, ಮಲ್ಲಪ್ಪ ತಲೆಪ್ಪಗೋಳ, ನಿಯಾಜ ಪಟೇಲ, ಫಕೀರಪ್ಪ ಗಣಾಚಾರಿ, ರಾಮಪ್ಪ ಸಣ್ಣಲಗಮನ್ನವರ, ಬಸು ಗಾಡಿವಡ್ಡರ, ಸಂಜು ಗಾಡಿವಡ್ಡರ, ದಸ್ತಗೀರ ಮುಲ್ಲಾ, ಲಕ್ಕಪ್ಪ ನಂದಿ, ರಮೇಶ ನಾಕಾ, ರಾಮ ಕುಡ್ಡೆಮ್ಮಿ, ಮುಗುಟ ಪೈಲವಾನ, ಗುರು ಮುನ್ನೋಳಿಮಠ, ಪರಶುರಾಮ ಹರಿಜನ, ಕಿರಣ, ತಳವಾರ ಸೇರಿದಂತೆ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: