RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಬಿಜೆಪಿಯು ಎಲ್ಲವನ್ನು ನೀಡುತ್ತಿರುವಾಗ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ : ಶಾಸಕ ಬಾಲಚಂದ್ರ ಪುನರುಚ್ಛಾರ

ಗೋಕಾಕ:ಬಿಜೆಪಿಯು ಎಲ್ಲವನ್ನು ನೀಡುತ್ತಿರುವಾಗ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ : ಶಾಸಕ ಬಾಲಚಂದ್ರ ಪುನರುಚ್ಛಾರ 

ಬಿಜೆಪಿಯು ಎಲ್ಲವನ್ನು ನೀಡುತ್ತಿರುವಾಗ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ : ಶಾಸಕ ಬಾಲಚಂದ್ರ ಪುನರುಚ್ಛಾರ

ಗೋಕಾಕ ಮಾ 7 : ಬಿಜೆಪಿಯು ಎಲ್ಲವನ್ನು ನೀಡುತ್ತಿರುವಾಗ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಇತ್ತೀಚೆಗೆ ಕೆಲವರು ಬಿಜೆಪಿ ಬಿಟ್ಟು ಕಾಂಗ್ರೇಸ್ ಪಕ್ಷ ಸೇರುತ್ತಾರೆಂದು ವದಂತಿ ಹಬ್ಬಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬೇರೆ ಪಕ್ಷ ಸೇರೋಲ್ಲಾ. ಬಿಜೆಪಿ ಬಿಡಲ್ಲ. ಇದು ಸ್ಪಷ್ಟ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪುನರುಚ್ಛರಿಸಿದರು.
ಬುಧವಾರದಂದು ಅರಭಾವಿ ಬಿಜೆಪಿ ಮಂಡಲ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಏರ್ಪಡಿಸಿದ್ದ ನವಶಕ್ತಿ ಸಮಾವೇಶದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದ ಅವರು, ಕೆಲ ಮಾಧ್ಯಮಗಳಲ್ಲಿಯೂ ಪಕ್ಷ ಬಿಡುವುದರ ಬಗ್ಗೆಯೂ ಬ್ರೆಕಿಂಗ್ ನ್ಯೂಸ್ ಬರುತ್ತಲಿದೆ ಎಂದು ಹೇಳಿದರು.

ಗೋಕಾಕ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಬುಧವಾರದಂದು ಅರಭಾವಿ ಮಂಡಲದಿಂದ ನವಶಕ್ತಿ ಸಮಾವೇಶಕ್ಕೂ ಮುನ್ನ ಬಿಜೆಪಿ ಮುಖಂಡರುಗಳು ಭಾರತಮಾತೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಮಹಾಂತೇಶ ಕವಟಗಿಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪಕ್ಷ ಎಲ್ಲವನ್ನು ನೀಡಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ. ಅದು ಅರಭಾವಿ ಕ್ಷೇತ್ರದಿಂದ. ಯಾರೋ ಹಬ್ಬಿಸುತ್ತಿರುವ ಸುಳ್ಳು ಸುದ್ಧಿಯನ್ನು ನಂಬಬೇಡಿ. ನಾನಾಗಲೀ ಮತ್ತು ಶಾಸಕ ಉಮೇಶ ಕತ್ತಿಯಾಗಲೀ ಬಿಜೆಪಿಯನ್ನು ಬಿಡುವುದಿಲ್ಲ. ಇದೆಲ್ಲ ಊಹಾಪೋಹಗಳಷ್ಟೇ. ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಏರಲಿದೆ ಎಂದು ಹೇಳಿದರು.
ಇತ್ತೀಚೆಗೆ ನಡೆದ ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಇದೆಲ್ಲ ಕಾರ್ಯಕರ್ತರ ಶ್ರಮದಿಂದ. ಬಿಜೆಪಿಯು ಕಾರ್ಯಕರ್ತರ ಪಕ್ಷ. ಜೊತೆಗೆ ವಿಶ್ವದಲ್ಲಿಯೇ ಅತೀ ದೊಡ್ಡದಾದ ಪಕ್ಷ. ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ರಾಜ್ಯದಲ್ಲಿನ ಹಿಂದಿನ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ ಮನೆ ಬಾಗಿಲಿಗೆ ತೆರಳಿ ವಿವರಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕೆಂದರು. ಜಿಲ್ಲೆಯಲ್ಲಿ ಅತೀ ಹೆಚ್ಚಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಕಾರ್ಯಕರ್ತರು ಶ್ರಮಿಸಬೇಕೆಂದು ಕೋರಿದರು.
ಮಹಾರಾಷ್ಟ್ರದ ಮುಜರಾಯಿ ನಿಗಮದ ಅಧ್ಯಕ್ಷ ಹಾಗೂ ಮಂಡಲ ಪ್ರಭಾರಿ ಮಹೇಶ ಜಾಧವ ಮಾತನಾಡಿ, 60 ವರ್ಷಗಳಿಂದ ಆಗದ ಕೆಲಸಗಳು ಪ್ರಧಾನಿ ಮೋದಿ ಅವರ ಸರ್ಕಾರದಲ್ಲಿ ನಡೆಯುತ್ತಿವೆ. ಮುಂದಿನ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ. ಕೇವಲ 2-3 ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದ್ದು, ಕಾಂಗ್ರೇಸ್‍ನ ಸ್ಥಿತಿ ಹೀನಾಯವಾಗಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದ ಮತದಾರರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಈ ಬಾರಿಯೂ ರಾಜ್ಯದಲ್ಲಿ ಅತೀ ಹೆಚ್ಚಿನ ಮತಗಳಿಂದ ಆಯ್ಕೆಯಾಗಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಭಾರತಿ ಮಗದುಮ್ಮ ಮಾತನಾಡಿ, ಪಕ್ಷದ ಎಲ್ಲ ಕಾರ್ಯಚಟುವಟಿಕೆಗಳನ್ನು ಅತೀ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಅರಭಾವಿ ಮಂಡಲದ ಕಾರ್ಯವನ್ನು ಶ್ಲಾಘಿಸಿದ ಅವರು, ಬಾಲಚಂದ್ರ ಜಾರಕಿಹೊಳಿ ಅವರ ಕಲ್ಯಾಣ ಕಾರ್ಯಕ್ರಮಗಳನ್ನು ಗುಣಗಾನ ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗೂಳಪ್ಪ ಹೊಸಮನಿ, ಗುರುಪಾದ ಕಳ್ಳಿ, ಧನಂಜಯ ಜಾಧವ, ಕೊಲ್ಹಾಪೂರ ಮಹಾನಗರ ಪಾಲಿಕೆ ಸದಸ್ಯ ಗಣೇಶ ದೇಸಾಯಿ, ವೀರಣ್ಣಾ ಹೊಸೂರ, ಅರಭಾವಿ ಮಂಡಲ ಅಧ್ಯಕ್ಷ ಸುಭಾಸ ಪಾಟೀಲ, ನಿಂಗಪ್ಪ ಫಿರೋಜಿ, ಅಶೋಕ ಪರುಶೆಟ್ಟಿ, ಬಸವಂತ ಕಮತಿ, ಮುತ್ತುರಾಜ ಕುಳ್ಳೂರ, ಹನಮಂತ ತೇರದಾಳ, ಕೆಂಚಗೌಡ ಪಾಟೀಲ, ಎಂ.ಎಂ. ಪಾಟೀಲ, ಎಂ.ಆರ್. ಭೋವಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀದೇವಿ ತಡಕೋಡ, ಜಿಲ್ಲಾ ಕಾರ್ಯದರ್ಶಿ ಪ್ರೇಮಾ ಭಂಡಾರಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ರಾಮಣ್ಣಾ ಹಂದಿಗುಂದ, ಶರೀಫ ಪಟೇಲ್, ಮಲೀಕ ಹುಣಶ್ಯಾಳ. ರಮೇಶ ಮಾದರ, ಅಪ್ಪಯ್ಯಪ್ಪ ಬಡ್ನಿಂಗಗೋಳ, ಶಿವನಗೌಡ ಪಾಟೀಲ, ಶಂಕರ ಬಿಲಕುಂದಿ, ವಿಠ್ಠಲ ಪಾಟೀಲ, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು. ಪರಸಪ್ಪ ಬಬಲಿ ಸ್ವಾಗತಿಸಿದರು. ಪ್ರಕಾಶ ಮಾದರ ವಂದಿಸಿದರು. ಯಮನಪ್ಪ ಕರಬನ್ನವರ ನಿರೂಪಿಸಿದರು.

ಪರ್ಸಂಟೇಜ್ ಸರ್ಕಾರ ತೊಲಗಿಸಿ : ರಾಜ್ಯದಲ್ಲಿರುವುದು ಪರ್ಸಂಟೇಜ್ ಸರ್ಕಾರ. ಅದು ಶೇಕಡಾ 30 ರಷ್ಟು. ಯಾವುದೇ ಅಭಿವೃದ್ಧಿಯಾಗಿಲ್ಲ. ಇದೊಂದು ಹಲವು ಭಾಗ್ಯಗಳ ಸರ್ಕಾರವೆಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಲೇವಡಿ ಮಾಡಿದರು.
ನಗರದ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಅರಭಾವಿ ಮಂಡಲ ಏರ್ಪಡಿಸಿದ್ದ ನವಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೇಸ್ ತೊಲಗಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿ.ಎಸ್. ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆಂದು ಹೇಳಿದ ಅವರು, ಕೇವಲ ಇಬ್ಬರು ಸಂಸತ್ ಸದಸ್ಯರನ್ನು ಹೊಂದಿದ್ದ ಬಿಜೆಪಿ ಈಗ ದೇಶಾಧ್ಯಂತ ವಿಸ್ತಾರವಾಗಿದೆ. ಆಗಿನ ಕಾಂಗ್ರೇಸ್ ನಾಯಕರೊಬ್ಬರು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಲೇವಡಿ ಮಾಡಿದಾಗ, ಮುಂದೊಂದು ದಿನ ಬಿಜೆಪಿ ಇಡೀ ದೇಶವನ್ನೇ ಆಳುತ್ತದೆ. ಕಾಯ್ದು ನೋಡಿ ಅಂತಾ ಹೇಳಿದ್ದರು. ಅವರು ಬಯಸಿದಂತೆಯೇ ಇಡೀ ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದರ ಶ್ರೇಯಸ್ಸು ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮೀತ ಶಾ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ದೇಶದ ಏಕತೆ ಹಾಗೂ ಅಖಂಡತೆಗೆ ದಿಟ್ಟ ನಿರ್ಧಾರ ತೆಗೆದುಕೊಂಡಿರುವ ಮೋದಿ ಅವರಿಗೆ ಜಗತ್ತಿನ ಹಿರಿಯಣ್ಣನೇ ಕೆಂಪು ಹಾಸಿಗೆ ಹಾಸಿ ಸ್ವಾಗತಿಸುತ್ತಿರುವುದನ್ನು ನೋಡಿದರೇ ಭಾರತ ವಿಶ್ವಕ್ಕೆ ಹಿರಿಯಣ್ಣನಾಗುವ ಕಾಲ ದೂರವಿಲ್ಲವೆಂದು ಹೇಳಿದರು.
ಲಕ್ಷ ಮತಗಳಿಂದ ಆಯ್ಕೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಕ್ಷೇತ್ರದಿಂದ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಶಾಲಿಯಾಗುವರು. ಜೊತೆಗೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿಯೂ ನೇಮಕಗೊಳ್ಳುವರು ಎಂದು ಹೇಳಿದರು.

ಎರಡೂ ಜಿಲ್ಲೆಯಾಗಲಿ : ಭೌಗೋಳಿಕವಾಗಿ ದೊಡ್ಡದಿರುವ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲೆಯಾಗಲಿ. ಇದಕ್ಕೆ ಎಲ್ಲ ರೀತಿಯ ಬೆಂಬಲವನ್ನು ಪಕ್ಷದಿಂದ ನೀಡಲಾಗುತ್ತಿದೆ. ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಅವರು ಮುಖ್ಯಮಂತ್ರಿಗಳ ಬಳಿ ನಿಯೋಗವೊಂದನ್ನು ಬುಧವಾರ ಬೆಳಿಗ್ಗೆ ಕರೆದುಕೊಂಡು ಹೋಗಿದ್ದಾರೆ. ಆ ನಿಯೋಗದಲ್ಲಿ ಕೇವಲ ಕಾಂಗ್ರೇಸ್ ಪಕ್ಷದವರಿದ್ದಾರೆ. ಹೀಗಾಗಿ ಸಿಎಂ ಸಿದ್ಧರಾಮಯ್ಯನವರು ಎಲ್ಲ ಪಕ್ಷಗಳ ಮುಖಂಡರನ್ನು ಕರೆದುಕೊಂಡು ಬರುವಂತೆ ಸಂಸದ ಹುಕ್ಕೇರಿಯವರಿಗೆ ಸೂಚಿಸಿದ್ದಾರೆಂದು ತಿಳಿಸಿದರು.

Related posts: