ಗೋಕಾಕ:ಲೋಕಾಯುಕ್ತ ಮೇಲೆ ಹಲ್ಲೆಯತ್ನ ಖಂಡಿಸಿ ಗೋಕಾಕದಲ್ಲಿ ನ್ಯಾಯವಾದಿಗಳ ಪ್ರತಿಭಟನೆ
ಲೋಕಾಯುಕ್ತ ಮೇಲೆ ಹಲ್ಲೆಯತ್ನ ಖಂಡಿಸಿ ಗೋಕಾಕದಲ್ಲಿ ನ್ಯಾಯವಾದಿಗಳ ಪ್ರತಿಭಟನೆ
ಗೋಕಾಕ ಮಾ 8 : ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಕಛೇರಿಯಲ್ಲಿ ಅವರ ಮೇಲೆ ಹತ್ಯೆಗೆ ಯತ್ನ ನಡೆಸಿರುವುದನ್ನು ಖಂಡಿಸಿ ಇಲ್ಲಿಯ ನ್ಯಾಯವಾದಿ ಸಂಘದವರು ನ್ಯಾಯಾಲಯದ ಕಾರ್ಯಕಲಾಪಗಳಿಂದ ಹೊರಗುಳಿದು ನಗರದ ಮಿನಿ ವಿಧಾನ ಸೌಧಕ್ಕೆ ತೆರಳಿ ತಹಶೀಲದಾರ ಮುಖಾಂತರ ಗೃಹ ಸಚಿವರಿಗೆ ಗುರುವಾರದಂದು ಮನವಿ ಸಲ್ಲಿಸಿದರು.
ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ರಕ್ಷಣೆ ನೀಡಲು ಅಸಾಧ್ಯವಾಗಿರುವ ವಾತಾವರಣ ಇಡಿ ವಕೀಲ ಸಮುದಾಯಕ್ಕೆ ತೀವ್ರ ಆಕ್ರೋಶ ಹಾಗೂ ದು:ಖವನ್ನು ತಂದಿದೆ. ರಾಜ್ಯದ ಕೆಲವಡೆ ವೃತ್ತಿನಿರತ ವಕೀಲರ ಮೇಲೆ ಹಲವಾರು ಹಲ್ಲೆ ಪ್ರಕರಣಗಳು ವರದಿಯಾಗಿದ್ದು ವಕೀಲರ ರಕ್ಷಣೆಗಾಗಿ, ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕು, ನ್ಯಾಯಮೂರ್ತಿಗಳ ಭದ್ರತೆಗೆ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು, ಹಲ್ಲೆ ಮಾಡಿದ ವ್ಯಕ್ತಿಯ ಮೇಲೆ ಯೋಗ್ಯ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ವಿ.ದೇಮಶೆಟ್ಟಿ, ಉಪಾಧ್ಯಕ್ಷರಾದ ಡಿ.ವಾಯ್.ಖಂಡೆಪಟ್ಟಿ, ಡಿ.ಎಮ್.ಮಡಿವಾಳರ, ಪ್ರಧಾನ ಕಾರ್ಯದರ್ಶಿ ಸಿ.ಬಿ.ಗಿಡ್ಡನವರ, ಸಹಕಾರ್ಯದರ್ಶಿ ಎಸ್.ಎಸ್.ಜಿಡ್ಡಿಮನಿ, ಖಜಾಂಚಿ ಬಿ.ಬಿ.ಬೀರನಗಡ್ಡಿ, ಮಹಿಳಾ ಪ್ರತಿನಿಧಿ ಕೆ.ಕೆ.ಬಡಿಗೇರ ಸೇರಿದಂತೆ ಅನೇಕರು ಇದ್ದರು.