RNI NO. KARKAN/2006/27779|Sunday, December 22, 2024
You are here: Home » breaking news » ಮೂಡಲಗಿ:ಸಂಗೊಳ್ಳಿ ರಾಯಣ್ಣನಂತಹ ಅಪ್ರತಿಮ ಸಾಧಕರು ಜನ್ಮತಾಳಿರುವುದರಿಂದ ಈ ಭೂಮಿ ಪಾವನವಾಗಿದೆ : ಶಾಸಕ ಬಾಲಚಂದ್ರ

ಮೂಡಲಗಿ:ಸಂಗೊಳ್ಳಿ ರಾಯಣ್ಣನಂತಹ ಅಪ್ರತಿಮ ಸಾಧಕರು ಜನ್ಮತಾಳಿರುವುದರಿಂದ ಈ ಭೂಮಿ ಪಾವನವಾಗಿದೆ : ಶಾಸಕ ಬಾಲಚಂದ್ರ 

ಸಂಗೊಳ್ಳಿ ರಾಯಣ್ಣನಂತಹ ಅಪ್ರತಿಮ ಸಾಧಕರು ಜನ್ಮತಾಳಿರುವುದರಿಂದ ಈ ಭೂಮಿ ಪಾವನವಾಗಿದೆ : ಶಾಸಕ ಬಾಲಚಂದ್ರ

ಮೂಡಲಗಿ ಮಾ 9 : ಸಂಗೊಳ್ಳಿ ರಾಯಣ್ಣನಂತಹ ಅಪ್ರತಿಮ ಸಾಧಕರು ಜನ್ಮತಾಳಿರುವುದರಿಂದ ಈ ಭೂಮಿ ಪಾವನವಾಗಿದೆ. ಇಂತಹ ಮಹಾನ್ ಪುರುಷರಿಂದ ಬ್ರಿಟೀಷರ ಕಪಿಮುಷ್ಟಿಯಿಂದ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಕಾರಣವಾಯಿತು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಗುರುವಾರದಂದು ಸಮೀಪದ ಧರ್ಮಟ್ಟಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಅನಾವರಣಗೊಳಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧೀರ ಸಂಗೊಳ್ಳಿ ರಾಯಣ್ಣ ಈ ನಾಡಿನ ಹೆಮ್ಮೆಯ ಪುತ್ರನೆಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ರಾಯಣ್ಣನ ಪಾತ್ರ ಅಪಾರವಾಗಿತ್ತು. ಕಿತ್ತೂರು ಚನ್ನಮ್ಮನ ಬಲಗೈ ಬಂಟನಾಗಿ ಬ್ರಿಟೀಷರೊಂದಿಗೆ ಸೆಣಸಾಡಿ ಬ್ರಿಟೀಷರ ಕಪಿಮುಷ್ಠಿಯಲ್ಲಿದ್ದ ದೇಶವನ್ನು ಪಾರುಮಾಡಲು ಶ್ರಮಿಸಿದರು. ಇಂತಹ ಮಹಾನ್ ಸ್ವಾತಂತ್ರ್ಯ ಸಂಗ್ರಾಮಿಯ ತತ್ವಾದರ್ಶಗಳನ್ನು ಜೀವನದಲ್ಲಿ ಪರಿಪಾಲನೆ ಮಾಡಿಕೊಳ್ಳಬೇಕು. ಇಂತಹವರು ಹುಟ್ಟಿದ್ದರಿಂದಲೇ ನಾಡು, ದೇಶ ಸಮೃದ್ಧವಾಗುತ್ತಿದೆ. ಇಂತಹವರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸದೇ ಎಲ್ಲರೂ ಪೂಜ್ಯ ಭಾವನೆಯಿಂದ ಪೂಜಿಸುವಂತೆ ತಿಳಿಸಿದರು.
ಹಾಲುಮತ ಸಮಾಜ ಶೈಕ್ಷಣಿಕವಾಗಿ, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕಿದೆ. ಈಗಾಗಲೇ ಈ ಸಮಾಜವು ರಾಜ್ಯದಲ್ಲಿ ಮುಖ್ಯಮಂತ್ರಿಯೊಬ್ಬರನ್ನು ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಮಾಜ ಒಗ್ಗಟ್ಟಿನಿಂದ ಕೂಡಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ. ಧರ್ಮಟ್ಟಿ ಗ್ರಾಮಸ್ಥರು ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ನಿಜವಾದ ಶೂರನಿಗೆ ಗೌರವ ಅರ್ಪಿಸಿದ್ದಾರೆ. ಸಮಸ್ತ ಬಾಂಧವರನ್ನು ಅಭಿನಂದಿಸುತ್ತೇನೆಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಹೋರಾಟ ಸಮೀತಿಯ ರಾಜ್ಯಾಧ್ಯಕ್ಷ ಅರವಿಂದ ದಳವಾಯಿ, ವಿಜಯ ಜಂಬಗಿ, ರಾಯಭಾಗ ಶಿಕ್ಷಣ ಪ್ರಸಾರಕ ಮಂಡಳ ಅಧ್ಯಕ್ಷ ತ್ರಿಕಾಲ ಪಾಟೀಲ, ಜಿಪಂ ಸದಸ್ಯೆ ವಾಸಂತಿ ತೇರದಾಳ, ಜಿಪಂ ಮಾಜಿ ಸದಸ್ಯರಾದ ಡಾ.ರಾಜೇಂದ್ರ ಸಣ್ಣಕ್ಕಿ, ಮಾರುತಿ ತೋಳಮರಡಿ, ಭೀಮಶಿ ಮಗದುಮ್ಮ, ಗ್ರಾಪಂ ಉಪಾಧ್ಯಕ್ಷೆ ಭಾರತಿ ಕೊರಕಪೂಜೇರಿ, ತಾಪಂ ಸದಸ್ಯೆ ಪ್ರೇಮಾ ಸನದಿ, ಬೆಳಗಾವಿ ಹಾಲು ಒಕ್ಕೂಟದ ನಿರ್ದೇಶಕಿ ವೀಣಾ ದೇಸಾಯಿ, ಬಿ.ಬಿ. ಪೂಜೇರಿ, ಲಕ್ಕಪ್ಪ ಹಸಿಕುರಿ, ಓಗೆಪ್ಪ ಬಬಲಿ, ಲಕ್ಷ್ಮಣ ತೆಳಗಡೆ, ಪರಶುರಾಮ ಸನದಿ, ಮುಂತಾದವರು ಉಪಸ್ಥಿತರಿದ್ದರು.
ಕವಲಗುಡ್ಡದ ಶಿವಯೋಗಿ ಅಮರೇಶ್ವರ ಸ್ವಾಮಿಗಳು, ಹಂದಿಗುಂದದ ಶ್ರೀಮಂತ ಸಿದ್ಧರು, ತವಗ ಮೇಲಿನಮಠದ ಬಾಳಯ್ಯ ಸ್ವಾಮಿಗಳು, ಸ್ಥಳೀಯ ಸುರೇಶ ಮಹಾರಾಜರು ಈ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಒಂದಾದ ಗುರು-ಶಿಷ್ಯರು : 2008 ರಲ್ಲಿ ನಡೆದ ವಿಧಾನಸಭಾ ಸಾರ್ವತ್ರಿಕ ಹಾಗೂ ಉಪಚುನಾವಣೆಯಲ್ಲಿ ಪರಸ್ಪರ ಬದ್ಧ ವೈರಿಗಳಾಗಿದ್ದ ಬಾಲಚಂದ್ರ ಜಾರಕಿಹೊಳಿ ಹಾಗೂ ವಿವೇಕರಾವ್ ಪಾಟೀಲ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು.
ಬಾಲಚಂದ್ರ ಜಾರಕಿಹೊಳಿ ಅವರ ರಾಜಕೀಯ ಪಾದಾರ್ಪಣೆಯಲ್ಲಿ ಮಹತ್ತರ ಪಾತ್ರ ವಹಿಸಿರುವ ವಿವೇಕರಾವ್ ಪಾಟೀಲ ಅವರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅರಭಾವಿ ಕ್ಷೇತ್ರದಿಂದಲೇ ಬಾಲಚಂದ್ರ ಅವರ ವಿರುದ್ಧ ಎರಡು ಬಾರಿ ಸ್ಪರ್ಧಿಸಿದ್ದನ್ನು ಸ್ಮರಿಸಬಹುದು. ಅತ್ಯಂತ ಆಪ್ತರಂತೆಯೇ ವೇದಿಕೆಯಲ್ಲಿ ಹಸನ್ಮುಖರಾಗಿ ಪರಸ್ಪರ ಮಾತನಾಡುತ್ತಿರುವುದನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದರು.

Related posts: