RNI NO. KARKAN/2006/27779|Friday, December 13, 2024
You are here: Home » breaking news » ಮೂಡಲಗಿ:ಸಾಧು-ಸಂತರ ಮಾರ್ಗದರ್ಶನದಿಂದ ಮಾತ್ರ ಸಮಾಜ ಉದ್ಧಾರವಾಗುವುದು : ಶಾಸಕ ಬಾಲಚಂದ್ರ

ಮೂಡಲಗಿ:ಸಾಧು-ಸಂತರ ಮಾರ್ಗದರ್ಶನದಿಂದ ಮಾತ್ರ ಸಮಾಜ ಉದ್ಧಾರವಾಗುವುದು : ಶಾಸಕ ಬಾಲಚಂದ್ರ 

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿದರು.

ಸಾಧು-ಸಂತರ ಮಾರ್ಗದರ್ಶನದಿಂದ ಮಾತ್ರ ಸಮಾಜ ಉದ್ಧಾರವಾಗುವುದು : ಶಾಸಕ ಬಾಲಚಂದ್ರ

ಮೂಡಲಗಿ ಮಾ 11 : ಸಾಧು-ಸಂತರ ಮಾರ್ಗದರ್ಶನದಿಂದ ಮಾತ್ರ ಸಮಾಜ ಉದ್ಧಾರವಾಗುವುದು. ಸಮಾಜ ದಾರಿ ತಪ್ಪಿ ನಡೆಯುವಾಗ ಅದನ್ನು ಸರಿದಾರಿಗೆ ತರುವ ಸಾಮಥ್ರ್ಯ ಮಠಾಧೀಶರಿಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ವಡೇರಹಟ್ಟಿ ಗ್ರಾಮದಲ್ಲಿ ಭಾನುವಾರ ರಾತ್ರಿ ಜರುಗಿದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಸ್ಮರಣೋತ್ಸವ ಹಾಗೂ ಸಿದ್ಧಲಿಂಗ ಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮ ಸಮಾರೋಪದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದ ಅವರು, ಸಮಾಜದ ಉನ್ನತಿ ಮತ್ತು ಪ್ರಗತಿಯಲ್ಲಿ ಸಂತರ ಪಾತ್ರ ಗಣನೀಯವೆಂದು ಹೇಳಿದರು.
ಬೆಳ್ಳಿ ಸಂಭ್ರಮದ ರಾಜಕೀಯದಲ್ಲಿರುವ ನನಗೆ ಎಂದಿಗೂ ಸಿಟ್ಟು ಬರುವುದಿಲ್ಲ. ಸಹನೆ, ಶಾಂತತೆಯಿಂದ ಜನರೊಂದಿಗೆ ಮುಕ್ತವಾಗಿ ಬೆರೆಯುತ್ತಿರುತ್ತೇನೆ. ಸಹನಶೀಲತೆಯಿಂದ ಜನರ ಹೃದಯವನ್ನು ಗೆಲ್ಲುತ್ತಿದ್ದೇನೆ. ಕೋಪದಿಂದ ಏನನ್ನೂ ಸಾಧಿಸಲು ಆಗುವುದಿಲ್ಲ. ಅದಕ್ಕೆ ದೇವರೇ ನನಗೆ ಸಹನ ಶಕ್ತಿ ನೀಡಿದ್ದಾನೆ. ಒಳ್ಳೆಯ ಕೆಲಸಗಳಿಂದ ಜನರ ಮನಸ್ಸನ್ನು ಗೆಲ್ಲಬೇಕೇ ಹೊರತು ಕೆಟ್ಟ ಕೆಲಸಗಳಿಂದ ಅವರ ಶಾಪಕ್ಕೆ ಕಾರಣರಾಗಬಾರದು. ಇಲ್ಲಿಯವರೆಗೆ ನನ್ನಲ್ಲಿಗೆ ಬರುವವರನ್ನು ಎಂದಿಗೂ ಬರಿಗೈಯಿಂದ ಕಳಿಸಿಲ್ಲ. ದೇವರು ಎಷ್ಟು ಕೊಟ್ಟಿದ್ದಾನೆಯೋ ಅದನ್ನು ಸಮಾಜದ ವಿಧಾಯಕ ಕೆಲಸಗಳಿಗೆ ಧಾರೆ ಎರೆಯುತ್ತಿದ್ದೇನೆ. ಜನರೇ ನನಗೆ ದೊಡ್ಡ ಶಕ್ತಿಯಾಗಿದ್ದಾರೆಂದು ಹೇಳಿದರು.

ಅರಸನಲ್ಲ; ಜನಸೇವಕನಷ್ಟೇ : ಅಧಿಕಾರದ ಹಿಂದೆ ಎಂದಿಗೂ ಜೋತು ಬಿದ್ದಿಲ್ಲ. ಅಧಿಕಾರ ಸಿಕ್ಕಾಗ ಅದನ್ನು ಜನರ ಕಲ್ಯಾಣಕ್ಕಾಗಿ ವಿನಿಯೋಗಿಸುತ್ತಿದ್ದೇನೆ. ಹಣ, ಅಂತಸ್ತು ಹಾಗೂ ಅಧಿಕಾರ ಮುಖ್ಯವಲ್ಲ. ಜನರ ಪ್ರೀತಿ-ವಿಶ್ವಾಸ ಮುಖ್ಯ. ಈ ದಿಸೆಯಲ್ಲಿ ಎಲ್ಲ ಜಾತಿಯ ಮುಖಂಡರನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತ ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಸಾಮಾಜಿಕ ನ್ಯಾಯವನ್ನು ಪರಿಪಾಲನೆ ಮಾಡಲಾಗುತ್ತಿದೆ. ಜನರ ಹಿತವೇ ನನಗೆ ಮುಖ್ಯವಾಗಿದೆ. ಜನರನ್ನು ಆಳುವ ಅರಸ ನಾನಲ್ಲ. ಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ಜನಸೇವಕನಷ್ಟೇ ಎಂದು ವಿನಮ್ರವಾಗಿ ಹೇಳಿದರು.
ಸಾನಿಧ್ಯ ವಹಿಸಿದ್ದ ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಮಹಾಸ್ವಾಮಿಗಳು ಮಾತನಾಡಿ, ಮಲ್ಲಿಕಾರ್ಜುನ ಶಿವಯೋಗಿಗಳು ಹಾಗೂ ಸಿದ್ಧಲಿಂಗ ಮಹಾಸ್ವಾಮಿಗಳು ಸಾಕ್ಷಾತ್ ದೈವಿ ಸ್ವರೂಪಿಯಾಗಿದ್ದರು. ಜೊತೆಗೆ ಇಬ್ಬರು ಸಂಗೀತ ವಿದ್ವಾಂಸರಾಗಿದ್ದರು. ಹಸಿದವರಿಗೆ ನೀವು ಉಪವಾಸವಿದ್ದುಕೊಂಡು ಅವರಿಗೆ ಊಟ ಮಾಡಿಸಬೇಕೆಂಬುದು ಮಲ್ಲಿಕಾರ್ಜುನ ಶಿವಯೋಗಿಗಳ ತತ್ವವಾಗಿತ್ತು. ವಡೇರಹಟ್ಟಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಅಪ್ಪನವರು ಆಶ್ರಮ ಕಟ್ಟಿಸಿ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನಿರ್ಮಿಸಿಕೊಟ್ಟಿದ್ದರೆಂದು ಸ್ಮರಿಸಿಕೊಂಡರು.
ಹುಲ್ಲೋಳಿಹಟ್ಟಿಯ ಕೈವಲ್ಯಾನಂದ ಮಹಾಸ್ವಾಮಿಗಳು ಮಾತನಾಡಿ, ಕೆಲಸವಿಲ್ಲದೇ ಒಂದೇ ದಿನ ಮನೆಯಲ್ಲಿದ್ದ ಮಲ್ಲಿಕಾರ್ಜುನ ಶರಣರಿಗೆ ತಾಯಿ ನುಡಿದ ‘ಋಣದ ಕೂಳು’ ಎಂದಿದ್ದಕ್ಕೆ ಮನನೊಂದು ಮನೆ ಬಿಟ್ಟು ಗದಗಿನ ಶಿವಾನಂದ ಮಠವನ್ನು ಸೇರಿಕೊಂಡು ದಿನನಿತ್ಯ ಪ್ರವಚನದಿಂದ ಜನಮನ ಸೂರೆಗೊಂಡರು. ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿದ ಶ್ರೀಗಳು ಗೋಕಾಕದಲ್ಲಿರುವ ಮುನ್ಸಿಪಲ್ ಹೈಸ್ಕೂಲಿನ ನಿರ್ಮಾತ್ರರಾದರು. ಬೈಲಹೊಂಗಲ ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ವ್ಯಾಜ್ಯಗಳ ವಿಲೇವಾರಿಗಳನ್ನು ಮಾತುಕತೆ ಮೂಲಕ ಪರಿಹರಿಸಿದ ಕೀರ್ತಿ ಸಲ್ಲುತ್ತದೆ ಎಂದರು.
ಪಾವನ ಸಾನಿಧ್ಯವನ್ನು ವಿಜಯಪುರದ ಬಸವಲಿಂಗ ಮಹಾಸ್ವಾಮಿಗಳು ವಹಿಸಿ, ಮಲ್ಲಿಕಾರ್ಜುನ ಶಿವಯೋಗಿಗಳು ಹಾಗೂ ಸಿದ್ಧಲಿಂಗ ಸ್ವಾಮಿಗಳ ಪವಾಡಗಳನ್ನು ವಿವರಿಸಿದರು.
ಕಾರ್ಯಕ್ರಮದ ನೇತೃತ್ವವನ್ನು ಸ್ಥಳೀಯ ಮಠದ ಗುರುಪ್ರಸಾದ ಮಹಾಸ್ವಾಮಿಗಳು ವಹಿಸಿದ್ದರು.
ಪ್ರಭಾಶುಗರದ ದಯಾನಂದ ಮಹಾಸ್ವಾಮಿಗಳು, ಬೆಳ್ಳೆರಿಯ ಬಸವಾನಂದ ಮಹಾಸ್ವಾಮಿಗಳು ಉಪನ್ಯಾಸ ನೀಡಿದರು.
ಜಿಪಂ ಮಾಜಿ ಸದಸ್ಯ ಮಾರುತಿ ತೋಳಮರಡಿ, ವಡೇರಹಟ್ಟಿ ಗ್ರಾಪಂ ಅಧ್ಯಕ್ಷ ಸಿದ್ದಪ್ಪ ವಡೇರ, ತಾಪಂ ಸದಸ್ಯ ಗೋಪಾಲ ಕುದರಿ, ಮುತ್ತುರಾಜ ಕುಳ್ಳೂರ, ಸಿದ್ಲಿಂಗ ಗಿಡೋಜಿ, ವಿಠ್ಠಲ ಗಿಡೋಜಿ, ಅಡಿವೆಪ್ಪ ಹಾದಿಮನಿ, ಚಂದ್ರು ಮೋಟೆಪ್ಪಗೋಳ, ಮಾರುತಿ ಸೊಡ್ರುಗೋಳ, ಗದಿಗೆಪ್ಪ ವಡೇರ, ಕೆಂಪಣ್ಣಾ ದೋಣವಾಡ, ರುದ್ರಗೌಡ ಪಾಟೀಲ, ಶಿವಪ್ಪ ಗಿಡೋಜಿ, ಬನಪ್ಪ ವಡೇರ, ನಾರಾಯಣ ಚಿಕ್ಕೋಡಿ, ಸಿದ್ದಪ್ಪ ಪಡಚಿ, ಗ್ರಾಪಂ ಸದಸ್ಯರು, ಮುಂತಾದವರು ಉಪಸ್ಥಿತರಿದ್ದರು

ಮಲ್ಲಯ್ಯ ಮಹಾಸ್ವಾಮಿಗಳು, ಘೋಡಗೇರಿ : ಬಾಲಚಂದ್ರ ಜಾರಕಿಹೊಳಿ ಅವರ ಸಹನಶೀಲತೆ ಮೆಚ್ಚುವಂತದ್ದು. ಸರಳ ಸಜ್ಜನಿಕೆಗೆ ಹೆಸರಾದವರು. ಇಂತಹವರು ಮುಂದಿನ ದಿನಗಳಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜನಸೇವೆ ಮಾಡುವಂತಾಗಬೇಕು. ಮಾತೃ ಹೃದಯದ ಸಹೃದಯಿ ವ್ಯಕ್ತಿಗೆ ಎಲ್ಲರೂ ಬೆನ್ನೆಲಬಾಗಿ ನಿಲ್ಲಬೇಕು. ಇಂತಹ ಶಾಸಕರು ಯಾರಿಗೂ-ಎಲ್ಲಿಯೂ ಸಿಗುವುದಿಲ್ಲ.

Related posts: