ಗೋಕಾಕ:ರೈತರು ಕೃಷಿಯೊಂದಿಗೆ ಉಪಕಸಬುಗಳನ್ನು ಮಾಡುತ್ತಾ ಆರ್ಥಿಕವಾಗಿ ಸಬಲರಾಗಬೇಕು : ಸಚಿವ ರಮೇಶ ಜಾರಕಿಹೊಳಿ
ರೈತರು ಕೃಷಿಯೊಂದಿಗೆ ಉಪಕಸಬುಗಳನ್ನು ಮಾಡುತ್ತಾ ಆರ್ಥಿಕವಾಗಿ ಸಬಲರಾಗಬೇಕು : ಸಚಿವ ರಮೇಶ ಜಾರಕಿಹೊಳಿ
ಗೋಕಾಕ ಮಾ 12 : ರೈತರು ಕೃಷಿಯೊಂದಿಗೆ ಉಪಕಸಬುಗಳನ್ನು ಮಾಡುತ್ತಾ ಆರ್ಥಿಕವಾಗಿ ಸಬಲರಾಗಬೇಕೆಂದು ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಪಶು ಭಾಗ್ಯ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ರವಿವಾರದಂದು ತಮ್ಮ ಕಾರ್ಯಾಲಯದಲ್ಲಿ ಸಹಾಯಧನದ ಚೆಕ್‍ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ರೈತರು ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಹೈನುಗಾರಿಕೆ, ಕುರಿ ಸಾಕಾಣಿಕೆಯಂತಹ ಉಪಕಸಬುಗಳಿಗೂ ಮಹತ್ವವನ್ನು ನೀಡಬೇಕೆಂದು ಸಲಹೆ ನೀಡಿದರು. ಸರ್ಕಾರ ರೈತರ ಹಿತದೃಷ್ಟಿಯನ್ನಿಟ್ಟುಕೊಂಡು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ನೀರಾವರಿಗೆ ಹೆಚ್ಚಿನ ಮಹತ್ವವನ್ನು ನೀಡಿದ್ದಲ್ಲದೇ ಕೃಷಿಭಾಗ್ಯ, ಪಶುಭಾಗ್ಯಗಳಂಥ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಪಶುಭಾಗ್ಯ ಯೋಜನೆಯಡಿ ಆಯ್ಕೆಯಾದ 70 ಫಲಾನುಭವಿಗಳಿಗೆ 13 ಲಕ್ಷ ರೂ.ಗಳ ಸಹಾಯಧನದ ಚೆಕ್‍ಗಳನ್ನು ಸಚಿವರು ವಿತರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯರಾದ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ಪಶುಭಾಗ್ಯ ಸದಸ್ಯ ಸಿ.ಬಿ.ಕಳ್ಳಿಗುದ್ದಿ, ಸಹಾಯಕ ನಿರ್ದೇಶಕ ಡಾ|| ಮೋಹನ ಕಮತ, ಡಾ|| ಶಶಿಕಾಂತ ಕೌಜಲಗಿ ಸೇರಿದಂತೆ ಅನೇಕರು ಇದ್ದರು.