ಘಟಪ್ರಭಾ:ವಿದ್ಯೆ ಯಾರು ಕಸಿಯಲಾರದ ಸ್ವತ್ತು : ಶಾಸಕ ಬಾಲಚಂದ್ರ
ವಿದ್ಯೆ ಯಾರು ಕಸಿಯಲಾರದ ಸ್ವತ್ತು : ಶಾಸಕ ಬಾಲಚಂದ್ರ
ಘಟಪ್ರಭಾ ಮಾ 17 : ವಿದ್ಯೆ ಯಾರು ಕಸಿಯಲಾರದ ಸ್ವತ್ತು. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣವಂತರಾಗಿ ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಶಿಕ್ಷಣವೇ ಸಮಾಜದಲ್ಲಿ ಮುಖ್ಯ ಅಸ್ತ್ರವಾಗಿ ಪರಿಣಮಿಸಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇತ್ತೀಚೆಗೆ ಸಮೀಪದ ಬೀರನಗಡ್ಡಿ ಗ್ರಾಮದ ಗುರುಬಸವ ಗ್ರಾಮೀಣ ಶಿಕ್ಷಣಾಭಿವೃದ್ಧಿ ಸಂಸ್ಥೆಯ ಪ್ರಥ್ವಿ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7ನೇ ವರ್ಗದ ಬಿಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾದಾನ, ರಕ್ತದಾನ ಹಾಗೂ ಅನ್ನದಾನ ಶ್ರೇಷ್ಠ ದಾನಗಳಾಗಿವೆ. ಅದರಲ್ಲೂ ವಿದ್ಯೆಯಿಂದ ನಾವುಗಳು ಇಡೀ ಜಗತ್ತನ್ನೇ ಗೆಲ್ಲುವ ಶಕ್ತಿ ಹೊಂದಿದ್ದೇವೆ. ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಇದರಿಂದ ಭವ್ಯ ಭಾರತ ನಿರ್ಮಾಣವಾಗಲಿದೆ. ಇಂದಿನ ಮಕ್ಕಳು ನಾಳಿನ ನಾಗರೀಕರಾಗಿ ಸಮಾಜವನ್ನು ಉತ್ತಮಪಡಿಸಲು ನೆರವಾಗುತ್ತಾರೆ. ಸರ್ಕಾರಿ ಶಾಲೆಗಳ ಮದ್ಯೆಯೂ ಬೀರನಗಡ್ಡಿಯ ಗುರುಬಸವ ಗ್ರಾಮೀಣ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಅಗತ್ಯತೆಗನುಗುಣವಾಗಿ ವಿದ್ಯಾದಾನ ಮಾಡುತ್ತಿದೆ. ಸಂಸ್ಥೆಯ ಕಾಳಜಿ ಶ್ಲಾಘನೀಯ. ಸಂಸ್ಥೆಗೆ ಅಗತ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಪ್ರಕಟಿಸಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಬಸವರಾಜ ತೆಳಗಡೆ ವಹಿಸಿದ್ದರು.
ಗ್ರಾಪಂ ಮಾಜಿ ಅಧ್ಯಕ್ಷ ಬಸಲಿಂಗಪ್ಪ ತೆಳಗಡೆ, ಜಿಪಂ ಮಾಜಿ ಸದಸ್ಯ ಮಾರುತಿ ತೋಳಮರಡಿ, ತಾಪಂ ಸದಸ್ಯ ಬಸಪ್ಪ ಹುಕ್ಕೇರಿ, ಗೋಪಾಲ ಕುದರಿ, ಯಲ್ಲಪ್ಪ ಕಪ್ಪಲಗುದ್ದಿ, ಪ್ರಧಾನಿ ಕಳಸನ್ನವರ, ಲಕ್ಷ್ಮಣ ತೆಳಗಡೆ, ಆರ್.ಎಸ್. ಕಡಿ, ಕೆ.ಆರ್. ಅಜ್ಜಪ್ಪನವರ, ರಾಮನಾಯ್ಕ ನಾಯಿಕ ಮುಂತಾದವರು ಉಪಸ್ಥಿತರಿದ್ದರು.