RNI NO. KARKAN/2006/27779|Friday, October 18, 2024
You are here: Home » breaking news » ಬೆಳಗಾವಿ:ಗೂಡು ಸೇರಿ ಮೂಲೆಗುಂಪಾದ ಎಂಇಎಸ ನಾಯಕ ಸಂಭಾಜಿ

ಬೆಳಗಾವಿ:ಗೂಡು ಸೇರಿ ಮೂಲೆಗುಂಪಾದ ಎಂಇಎಸ ನಾಯಕ ಸಂಭಾಜಿ 

ಗೂಡು ಸೇರಿ ಮೂಲೆಗುಂಪಾದ ಎಂಇಎಸ ನಾಯಕ ಸಂಭಾಜಿ
ಬೆಳಗಾವಿ ಎ 10: ನಾಲ್ಕು ಬಾರಿ ಬೆಳಗಾವಿ ಬೃಹತ್ ಮಾಹಾನಗರ ಪಾಲಿಕೆಯ ಮೇಯರರಾಗಿ ಹಾಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕನಾಗಿ ಎಂಇಎಸಗೆ ದೊಡ್ಡ ಶಕ್ತಿಯಾಗಿರುವ ಶಾಸಕ ಸಂಭಾಜಿ ಪಾಟೀಲ ಚುನಾವಣೆ ಸಮಿಪಿಸುವಾಗ ಎಂಇಎಸ ವಲಯದಲ್ಲಿ ಏಕಾಂಗಿಯಾಗಿದ್ದಾರೆ . ಜಿಲ್ಲೆಯ ಎಲ್ಲ ನಾಯಕರು ಚುನಾವಣೆಯಲ್ಲಿ ಬ್ಯೂಜಿ ಯಾದರೆ ಸಂಭಾಜಿ ಮಾತ್ರ ಗೂಡು ಸೇರಿ ಮೂಲೆಗುಂಪಾಗಿದ್ದಾರೆ .
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಮರಾಠಿ ಭಾಷಿಕ ಮತದಾರರೇ ನಿರ್ಣಾಯಕರಾಗಿದ್ದು, ಈ ಕಾರಣಕ್ಕೆ ಕಳೆದ ಸಲ ಸಂಭಾಜಿ ಪಾಟೀಲ್‌ ಗೆಲುವು ಸಾಧಿಸಿದ್ದರು. ಆದರೆ ಸಂಭಾಜಿ ಅವರಿಗೆ ಈ ಬಾರಿ ಕೊಕ್ ನೀಡಿ, ಹೊಸಬರಿಗೆ ಅವಕಾಶ ನೀಡಲು ಎಂಇಎಸ್‍ನಲ್ಲಿ ಸದ್ದಿಲ್ಲದೇ ಚಟುವಟಿಕೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. 

ಬೆಳಗಾವಿ ದಕ್ಷಿಣ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಮೇಯರ್ ಕಿರಣ್ ಸಾಯಿನಾಕ್ ಎಂಇಎಸ್ ಟಿಕೆಟ್ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಎಂಇಎಸ್‍ನ 22ಕ್ಕೂ ಅಧಿಕ ಪಾಲಿಕೆ ಸದಸ್ಯರು ಕೂಡ ಕಿರಣ್ ಸಾಯಿನಾಕ್‍ಗೆ ಟಿಕೆಟ್ ನೀಡಬೇಕೆಂದು ಎಂಇಎಸ್ ಮುಖಂಡರ ಮೇಲೆ ಒತ್ತಡ ಹೇರುತ್ತಿದ್ದಾರೆ. ಎಂಇಎಸ್ ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಕಾರಣಕ್ಕೆ ಸಂಭಾಜಿ ಪಾಟೀಲ್‌ ಕಂಗಾಲಾಗಿದ್ದಾರೆ. ಎಂಇಎಸ್‍ನಿಂದ ಟಿಕೆಟ್ ಕೈ ತಪ್ಪಿದರೆ ಸಂಭಾಜಿ ಪಾಟೀಲ್‌ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. 

ಸಂಭಾಜಿಗೆ ಅನಾರೋಗ್ಯದ ಸಮಸ್ಯೆ

ಸಂಭಾಜಿ ಪಾಟೀಲ್‌ ಶಾಸಕರಾದ ಬಳಿಕ ತೀವ್ರ ಅನಾರೋಗ್ಯದ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಈ ಕಾರಣದಿಂದ ಕ್ಷೇತ್ರದಲ್ಲಿ ಸಂಚರಿಸಲು ಹಾಗೂ ಜನತೆಯ ಜತೆಗೆ ಬೆರೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಕ್ಷೇತ್ರದ ಜನ ಬದಲಾವಣೆ ಬಯಸುತ್ತಿದ್ದಾರೆ. ಅಧಿಕ ಮರಾಠಿ ಭಾಷಿಕರಿರುವ ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಎಂಇಎಸ್ ತಂತ್ರ ಹೆಣೆಯುತ್ತಿದೆ.  ಪಾಟೀಲ್‍ಗೆ ಕೊಕ್ ನೀಡಿ, ಹೊಸ ಮುಖಕ್ಕೆ ಅವಕಾಶ ನೀಡಲು ಬಹುತೇಕ ಎಂಇಎಸ್ ಮುಖಂಡರು ಒಲವು ತೋರಿದ್ದಾರೆ. ಮೇಯರ್ ಆಗಿದ್ದ ಕಿರಣ್ ಸಾಯಿನಾಕ್ ಇಲ್ಲಿನ ಮತದಾರರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದು, ಸಾಯಿನಾಕ್‍ಗೆ ಟಿಕೆಟ್ ದೊರೆಯುವುದು ಖಚಿತ ಎಂದು ಎಂಇಎಸ್ ಮೂಲಗಳು ತಿಳಿಸಿವೆ.

ಅಸ್ತಿತ್ವಕ್ಕಾಗಿ ಎಂಇಎಸ್ ಹೆಣಗಾಟ:

ಬೆಳಗಾವಿ ದಕ್ಷಿಣ ಕ್ಷೇತ್ರವನ್ನು ಈ ಸಲ ವಶಕ್ಕೆ ಪಡೆಯಲು ಕಾಂಗ್ರೆಸ್ ನಾಯಕರು ತಂತ್ರ ರೂಪಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ನೇಕಾರ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನೇಕಾರ ಸಂಘಟನೆಯ ರಾಜ್ಯ ಮುಖಂಡ, ವಿಧಾನ ಪರಿಷತ್ ಸದಸ್ಯ ಹಾಗೂ ತುಮಕೂರು ಮೂಲದ ಎಂ.ಡಿ. ಲಕ್ಷ್ಮಿನಾರಾಯಣ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಲು ರಾಜ್ಯ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ದಕ್ಷಿಣ ಕ್ಷೇತ್ರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಎಂಡಿ ಲಕ್ಷ್ಮಿನಾರಾಯಣ ಕಳೆದ 6 ತಿಂಗಳಿನಿಂದ ಕ್ಷೇತ್ರದಲ್ಲಿ ಓಡಾತ್ತಿದ್ದಾರೆ. 

2008ರಲ್ಲಿ ಹೊಸದಾಗಿ ರಚನೆಗೊಂಡ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿಯ ಅಭಯ ಪಾಟೀಲ್‌ ಈ ಸಲವೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ಮಧ್ಯೆ ಈ ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಎಂಇಎಸ್ ಹೆಣಗಾಡುತ್ತಿದೆ. ನಗರದ ಎಂಇಎಸ್ ಮುಖಂಡರು ಮಾಜಿ ಮೇಯರ್ ಕಿರಣ್ ಸಾಯಿನಾಕ್ ಅವರಿಗೆ ಟಿಕೆಟ್ ನೀಡಲು ಒಮ್ಮತದ ನಿಲುವು ಹೊಂದಿದ್ದಾರೆ. ಈ ವಿಷಯ ಚರ್ಚಿಸಲು ಎಂಇಎಸ್ ಮುಖಂಡರ ನಿಯೋಗ ಕೊಲ್ಲಾಪುರದಲ್ಲಿರುವ ಎಂಇಎಸ್‍ನ ಗೌರವ ಅಧ್ಯಕ್ಷ ಎನ್.ಡಿ. ಪಾಟೀಲ್‌ ಅವರನ್ನು ಭೇಟಿ ಮಾಡಲಿದೆ. ಬಳಿಕ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅಭ್ಯರ್ಥಿಯ ಹೆಸರು ಅಂತಿಮಗೊಳಿಸಲು ಎಂಇಎಸ್ ನಾಯಕರು ನಿರ್ಧರಿಸಿದ್ದಾರೆ.

ಕಿರಣ ಪರ ಹಲವು ನಾಯಕರ ಒಲವು : ಎಂಇಎಸ ಮುಖಂಡ ಕಿರಣ್ ಸಾಯಿನಾಕ್ ಜಿಲ್ಲೆಯ ಬಹುತೇಕ ಎಲ್ಲ ಪಕ್ಷದ ಮುಖಂಡರೊಂದಿಗೆ ನಿಕಟ ಸಂರ್ಪಕ ಹೊಂದಿದ್ದು , ಅವರನ್ನು ಈ ಬಾರಿ ಎಂಎಲ್ಎ ಗೆ ಸ್ವರ್ಧಿಸುವಂತೆ ಜಿಲ್ಲೆಯ ಪ್ರಭಾವಿ ಕೈ ನಾಯಕರೊಬ್ಬರು ಸೂಚಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ . ಈ ವಿಷಯ ಎಷ್ಟರ ಮಟ್ಟಿಗೆ ಸತ್ಯ ಎಂಬುವುದು ಕಾಲವೇ ನಿರ್ಧರಿಸಲಿದೆ .

Related posts: