ಬೆಳಗಾವಿ:ಕಾವೇರಿದ ಚುನಾವಣಾ ಕಣ : ಇಂದು ನಾಮಪತ್ರ ಸಲ್ಲಿಸಿದ ವಿವಿಧ ಪಕ್ಷದ ಮುಖಂಡರು
ಕಾವೇರಿದ ಚುನಾವಣಾ ಕಣ : ಇಂದು ನಾಮಪತ್ರ ಸಲ್ಲಿಸಿದ ವಿವಿಧ ಪಕ್ಷದ ಮುಖಂಡರು
ಬೆಳಗಾವಿ ಏ 23 : ಜಿಲ್ಲೆಯಲ್ಲಿ ಇಂದು ಕಾಂಗ್ರೆಸ್ , ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಆಯಾ ತಾಲೂಕಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಅಭ್ಯರ್ಥಿ ಅಭಯ ಪಾಟೀಲ್ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಅಭ್ಯರ್ಥಿ ಅನಿಲ್ ಬೆನಕೆ ಬೃಹತ್ ಮೆರವಣಿಗೆಯೊಂದಿಗೆ ಚನ್ನಮ್ಮ ವೃತ್ತದಿಂದ ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಆನಂದ ಮಾಮನಿ ನೂರಾರು ಕಾರ್ಯಕರ್ತರೊಂದಿಗೆ ತಹಸೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಬೆಳಗಾವಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಡಿ.ಲಕ್ಷ್ಮೀ ನಾರಾಯಣ ಬೆಳಗಾವಿಯ ಪಾಲಿಕೆ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಇನ್ನು ರಾಮದುರ್ಗ ಪಟ್ಟಣದ ಹಾಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಅಶೋಕ ಪಟ್ಟಣ ಬೃಹತ್ ರ‍್ಯಾಲಿಯೊಂದಿಗೆ, ಸಾವಿರಾರು ಕಾರ್ಯಕರ್ತರೊಂದಿಗೆ ತಹಸೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಗೋಕಾಕ್ ನಗರದಲ್ಲಿ ಸಚಿವ ರಮೇಶ ಜಾರಕಿಹೊಳಿ ತಹಸೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಚಿವ ಜಾರಕಿಹೊಳಿ ಗೋಕಾಕ್‌ನಲ್ಲಿ ಬೃಹತ್ ಶಕ್ತಿ ಪ್ರದರ್ಶನ ತೋರಿಸಿದರು. ರಮೇಶ ಜಾರಕಿಹೊಳಿಗೆ ಸಹೋದರ ಲಖನ್ ಜಾರಕಿಹೊಳಿ ಸೇರಿ ಅನೇಕರು ಸಾಥ್ ನೀಡಿದರು.
ಹಾಗೆಯೇ ಚಿಕ್ಕೋಡಿ-ಸದಲಗಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗಣೇಶ ಹುಕ್ಕೇರಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಅಣ್ಣಾಸಾಬ ಜೊಲ್ಲೆ ಅವರು ಚುನಾವಣಾ ಅಧಿಕಾರಿ ರಾಜು ಮೋಗವಿರ ಅವರಿಗೆ ನಾಮಪತ್ರ ಸಲ್ಲಿಸಿದರು.
ನಿಪ್ಪಾಣಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಶಶಿಕಲಾ ಜೊಲ್ಲೆ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಾಕಾಸಾಹೇಬ ಪಾಟೀಲ ಸಾವಿರಾರು ಕಾರ್ಯಕರ್ತರ ಜೊತೆ ಮೆರವಣಿಗೆ ಮೂಲಕ ತೆರಳಿ ಉಮೇದುವಾರಿಕೆ ಸಲ್ಲಿಸಿದ್ದರು.
ಕುಡಚಿ ವಿಧಾನಸಭಾ (ಪ.ಜಾ ) ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಮಿತ್ ಎಸ್.ಘಾಟಗೆ ಚುನಾವಣೆ ಅಧಿಕಾರಿ ಸತ್ಯನಾರಾಯಣ ಭಟ್ ಅವರಿಗೆ ನಾಮಪತ್ರ ಸಲ್ಲಿಸಿದರು.