ಗೋಕಾಕ:ಮತದಾನದ ದಿನದಂದು ತಮ್ಮ ಮತಗಟ್ಟೆಗಳಿಗೆ ತೆರಳಿ ಕಡ್ಡಾಯವಾಗಿ ಮತದಾನ ಮಾಡಿ : ಎಸ್.ಎಮ್.ಹಿರೇಮಠ
ಮತದಾನದ ದಿನದಂದು ತಮ್ಮ ಮತಗಟ್ಟೆಗಳಿಗೆ ತೆರಳಿ ಕಡ್ಡಾಯವಾಗಿ ಮತದಾನ ಮಾಡಿ : ಎಸ್.ಎಮ್.ಹಿರೇಮಠ
ಗೋಕಾಕ ಏ 29 : ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಜಿಲ್ಲಾ ಸ್ಪೀಪ್ ಸಮಿತಿಯ ನಿರ್ದೇಶನದಂತೆ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಪುರಸಭೆಯ ವತಿಯಿಂದ ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಜಾಥಾವು ಶನಿವಾರದಂದು ರಾತ್ರಿ ಜರುಗಿತು.
ಕೊಣ್ಣೂರ ಪುರಸಭೆಯಿಂದ ಜಾಥಾ ಪ್ರಾರಂಭವಾಗಿ ಪಟ್ಟಣದ ಜೈನ ಗಲ್ಲಿ, ಡಾ|| ಬಿ.ಆರ್.ಅಂಬೇಡ್ಕರ ನಗರ, ಕಾಮನ ಚೌಕ, ಸಮಗಾರ ಗಲ್ಲಿ, ವಾಲ್ಮೀಕಿ ವೃತ್ತ, ಬಜಾರ ರಸ್ತೆಯಲ್ಲಿ ಹಾಗೂ ಪ್ರಮುಖ ಬೀದಿಗಳಲ್ಲಿ ಮೆಣದ ಬತ್ತಿ ಹಚ್ಚಿಕೊಂಡು ಪೌರಕಾರ್ಮಿಕರು ಹಾಗೂ ಅಧಿಕಾರಿಗಳು ಸಂಚರಿಸಿ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಎಸ್.ಎಮ್.ಹಿರೇಮಠ ಅವರು ಮಾತನಾಡಿ, ಮತದಾನದ ಹಕ್ಕನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಮತದಾನದ ದಿನದಂದು ತಮ್ಮ ಮತಗಟ್ಟೆಗಳಿಗೆ ತೆರಳಿ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವಕ್ಕೆ ಗೌರವ ನೀಡಬೇಕು.ಮಹಿಳಾ ಮತದಾರರಿಗಾಗಿ ಪ್ರೇರಣೆಗಾಗಿ ಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ ಮತಗಟ್ಟೆ ಸಂಖ್ಯೆ 67ರಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಆದೇಶದಂತೆ ಪಿಂಕ್ ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು ಈ ಮತಗಟ್ಟೆಯಲ್ಲಿ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗಳಾಗಿ ಮಹಿಳೆಯರೇ ಕಾರ್ಯನಿರ್ವಹಿಸುತ್ತಾರೆ, ಪಟ್ಟಣದ ಎಲ್ಲ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಬೇಕೆಂದು ತಿಳಿಸಿದರಲ್ಲದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಶ್ರೇಷ್ಠವಾಗಿದೆ ಎಂದು ಹೇಳಿದರು.
ಜಾಥಾದಲ್ಲಿ ಪುರಸಭೆ ಕಿರಿಯ ಅಭಿಯಂತರ ಎಮ್.ಎಸ್.ತೇಲಿ, ಸಮುದಾಯ ಸಂಘಟನಾಧಿಕಾರಿ ಎಸ್.ಜೆ.ಕುರಣಿ, ಅಧಿಕಾರಿಗಳಾದ ಎಮ್.ಎ.ಪೆದಣ್ಣವರ, ಆರ್.ಕೆ.ಭವಾನೆ, ಬಾಳನಾಯ್ಕ ಕುಮರೇಶಿ, ಶಿವು ಹಾದಿಮನಿ, ದಯಾನಂದ ನಡಗೇರಿ, ಸಂಜು ನಡಗೇರಿ, ಸೇರಿದಂತೆ ಪೌರಕಾರ್ಮಿಕರು, ಸಿಬ್ಬಂದಿಯವರು ಇದ್ದರು.