ಗೋಕಾಕ:ವಿಜೃಂಭನೆಯಿಂದ ಜರುಗಿದ ಶ್ರೀ ಹನುಮಂತ ದೇವರ ಓಕುಳಿ
ವಿಜೃಂಭನೆಯಿಂದ ಜರುಗಿದ ಶ್ರೀ ಹನುಮಂತ ದೇವರ ಓಕುಳಿ
ಬೆಟಗೇರಿ ಜೂ 4 : ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧವಾಗಿರುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಹನುಮಂತ ದೇವರ ಓಕುಳಿ ಇದೇ ಶನಿವಾರ ಜೂನ 2 ರಿಂದ ಮಂಗಳವಾರ ಜೂನ 4 ರವರೆಗೆ ವಿಜೃಂಭನೆಯಿಂದ ಜರುಗಿತು.
ಶನಿವಾರ ಜೂನ.2 ರಂದು ಮುಂಜಾನೆ 7ಗಂಟೆಗೆ ಶ್ರೀ ಮಾರುತಿ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಕುಂಕುಮ ಮತ್ತು ಮಹಾಪೂಜೆ ಕಾರ್ಯಕ್ರಮ ನಡೆದು, ಸಾಯಂಕಾಲ 5 ಗಂಟೆಗೆ ಓಕುಳಿ ಕೊಂಡ ಪೂಜೆ, ನಂತರ ಕರಡಿ, ಹಲಗೆ ಮಜಲು ಸೇರಿದಂತೆ ಸಕಲ ವಾಧ್ಯಗಳ ವಾದನ, ಪಲ್ಲಕ್ಕಿ ಉತ್ಸವ ವೈಭವದಿಂದ ನಡೆಯಿತು.
ರವಿವಾರ ಜೂನ.3 ರಂದು ಮುಂಜಾನೆ 7ಗಂಟೆಗೆ ಶ್ರೀ ಮಾರುತಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ನಂತರ ಸಾಯಂಕಾಲ 5 ಗಂಟೆಗೆ ನಡು ಓಕುಳಿ ನಡೆದು ಮಾರನೇಯ ದಿನ ಸೋಮವಾರ ಜೂನ.4ರಂದು ಮುಂಜಾನೆ 6 ಗಂಟೆಗೆ ಶ್ರೀ ಮಾರುತಿ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ ವೈಭವದಿಂದ ನಡೆದ ನಂತರ ಸರ್ವ ಧರ್ಮದ ಪ್ರತೀಕವಾದ ಇಲ್ಲಿಯ ಹನುಮಂತ ದೇವರ ಓಕುಳಿಯಲ್ಲಿ ಗ್ರಾಮದ ಪ್ರತಿ ಓಣಿಯ ಪುರಜನರು ಒಟ್ಟಿಗೆ ಸೇರಿ ಸಕಲ ವಾಧ್ಯಮೇಳಗಳೊಂದಿಗೆ ದೇವಸ್ಥಾನಕ್ಕೆ ತೆರಳಿ ಪೂಜೆ-ಪುನಸ್ಕಾರ, ನೈವೈದ್ಯ ಅರ್ಪಣೆ, ಹರಕೆ ತಿರಿಸುವ ಕಾರ್ಯಕ್ರಮ ಸಡಗರದಿಂದ ಜರುಗಿ ಸಾಯಂಕಾಲ 5 ಗಂಟೆಗೆ ಓಕುಳಿ ಕೊಂಡಕ್ಕೆ ಸ್ಥಳೀಯ ವಿವಿಧ ದೇವರುಗಳ ಪಲ್ಲಕ್ಕಿ ಪ್ರದಕ್ಷೀಣೆ ನಡೆದು ಬಣ್ಣದೊಕುಳಿ ಆದ ನಂತರ ಕಡೆಓಕುಳಿಯಲ್ಲಿ ಮಕ್ಕಳು, ಯುವಕರು, ವೃದ್ಧರು ಸಹ ಉತ್ಸಾಹದಿಂದ ನೀರು ಎರಚಿದರು.
ಮನರಂಜಿಸಿದ ಸೋಗಿನ ಕುಣಿತ : ಕಡೆ ಓಕುಳಿ ಪ್ರಯುಕ್ತ ಯುವಕರು ಕಾಲಿಗೆ ಮರಗಾಲು ಕಟ್ಟಿಕೊಂಡು ಕುದುರೆ, ನವಿಲು ಸೇರಿದಂತೆ ವಿವಿಧ ಪ್ರಾಣಿಗಳ ಸೊಗಿನ ನಾಲ್ಕೈದು ಮಜಲುಗಳು ಕುಣಿತದ ಪ್ರದರ್ಶನದಲ್ಲಿ ನೋಡುಗರ ಮನ ರಂಜಿಸಿದವು. ಹಾಗೂ ಡಿಜೆ ಸೌಂಡ್‍ಗೆ ನೂರಾರು ಜನ ಯುವಕರು ಸಿನಿಮಾ, ಜಾನಪದ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಮಕ್ಕಳು, ಮಹಿಳೆಯರು ನಾಲ್ಕೈದು ತಾಸು ಒಂಟೆಗಾಲಿನಿಂದ ನಿಂತುಕೊಂಡು ಓಕುಳಿ ಆಟ ಮತ್ತು ಸೋಗಿನ ಕುಣಿತ ನೋಡಿ ಮನರಂಜಿಸಿಕೊಂಡರು. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಸಾವಿರಾರು ಜನರು ಓಕುಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಕ್ಷಿಯಾದರು.
ರಾಮಣ್ಣ ಬಳಿಗಾರ, ವಿಠಲ ಚಂದರಗಿ, ದುಂಡಪ್ಪ ಹಾಲಣ್ಣವರ, ಪತ್ರೆಪ್ಪ ನೀಲಣ್ಣವರ, ಕಲ್ಲಪ್ಪ ಚಂದರಗಿ, ಲಕ್ಷ್ಮಣ ಚಂದರಗಿ, ಸಂಜು ಪೂಜೇರಿ, ಮುತ್ತೆಪ್ಪ ವಡೇರ, ಈರಯ್ಯ ಹಿರೇಮಠ, ಶಿವನಪ್ಪ ಮಾಳೇದ, ಶಿವಾಜಿ ನೀಲಣ್ಣವರ, ರಾಮಣ್ಣ ನೀಲಣ್ಣವರ, ಇಲ್ಲಿಯ ಶ್ರೀ ಮಾರುತಿ ದೇವರ ಓಕುಳಿ ಉತ್ಸವ ಆಚರಣಾ ಸಮಿತಿ ಸದಸ್ಯರು, ಗ್ರಾಮಸ್ಥರು ಓಕುಳಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.