ಗೋಕಾಕ :ಪರಿಸರವನ್ನು ರಕ್ಷಿಸಿ ಭವಿಷ್ಯದಲ್ಲಿ ಯುವ ಪೀಳಿಗೆಗೆ ಬಳುವಳಿಯಾಗಿ ನೀಡಿ : ಮೀನಾಕ್ಷಿ ಬಾನಿ
ಪರಿಸರವನ್ನು ರಕ್ಷಿಸಿ ಭವಿಷ್ಯದಲ್ಲಿ ಯುವ ಪೀಳಿಗೆಗೆ ಬಳುವಳಿಯಾಗಿ ನೀಡಿ : ಮೀನಾಕ್ಷಿ ಬಾನಿ
ಗೋಕಾಕ ಜೂ 5 :- ಪರಿಸರವನ್ನು ನಾವಿಂದು ಸಂರಕ್ಷಿಸಿದರೆ, ಅದನ್ನೇ ಭವಿಷ್ಯದಲ್ಲಿ ಯುವ ಪೀಳಿಗೆಗೆ ಬಳುವಳಿಯಾಗಿ ನೀಡಬಹುದಾಗಿದೆ ಎಂದು 12ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಮೀನಾಕ್ಷಿ ಬಾನಿ ಅಭಿಪ್ರಾಯ ಪಟ್ಟರು.
ಮಂಗಳವಾರದಂದು ಇಲ್ಲಿಯ ನ್ಯಾಯಾಲಯ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಪರಿಸರ ದಿನಾಚರಣೆ’’ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಹಾಗೂ ವಕೀಲರ ಬಾಂಧವರಿಗೆ ಸಸಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸುವ ಮಾತನಾಡುತ್ತಿದ್ದ ಅವರು, ಗಿಡ-ಮರಗಳಿಲ್ಲದೆ ಆರ್.ಸಿ.ಸಿ. ಕಾಡಿನಿದ್ದ ನಮ್ಮ ಪರಿಸರ ಶುದ್ಧಗೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಶುದ್ಧ ಪರಿಸರ ಸೃಷ್ಠಿಗೆ ನಾವಿಂದು ಸಸಿಗಳನ್ನು ನಡೆವುದು ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರೂ ಆಗಿರುವ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ವಿಮಲ್ ನಂದಗಾಂವ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ದೇವರಾಜ ಅವರು ಪರಿಸರ ಸಂರಕ್ಷಣೆಯ ಮಹತ್ವ ಕುರಿತು ವಿವರಿಸಿದರು.
1ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಧೀಶ ವೀರೇಶಕುಮಾರ ಸಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಅರಣ್ಯ ಇಲಾಖೆಯ ಸೌಜನ್ಯದಲ್ಲಿ ವಕೀಲ ಬಾಂಧವರಿಗೆ ಸಸಿಗಳನ್ನು ವಿತರಿಸಲಾಗುತ್ತಿದ್ದು ಮುಂದಿನ ವರ್ಷದ ವನಮಹೋತ್ಸವ ಆಚರಣೆ ವೇಳೆಗೆ ಅವುಗಳನ್ನು ಪಾಲನೆ ಮಾಡಿದ ಕುರಿತು ಸಮಿತಿಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡರು.
ವೇದಿಕೆಯಲ್ಲಿ 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಸತೀಶ ಬಾಳಿ, 2ನೇ ಹೆಚ್ಚುವರಿ ಹಿರಿಯ ನ್ಯಾಯಾಧೀಶ ಆರ್.ಚಂದ್ರಪ್ಪ ಹುನ್ನೂರು, 2ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಮೋಹನ ಪೋಳ, ವಲಯ ಅರಣ್ಯಾಧಿಕಾರಿ ಕೆ.ಎನ್.ವಣ್ಣೂರ ಉಪಸ್ಥಿತರಿದ್ದರು.
ವಕೀಲರ ಸಂಘದ ಸದಸ್ಯರಿಗೆ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಎಚ್.ಎಸ್.ಇಂಗಳಗಿ ಮೊದಲಾದವರು ಸಸಿಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಡಿ.ಎಂ.ಮಡಿವಾಳರ, ಸಹ-ಕಾರ್ಯದರ್ಶಿ ಎಸ್.ಎಸ್.ಜಿಡ್ಡಿಮನಿ, ಪ್ರೇಮಾ ಚಿಕ್ಕೋಡಿ ಮತ್ತಿತರರು ಪಾಲ್ಗೊಂಡಿದ್ದರು.
ವಕೀಲ ಎಂ.ಎಚ್.ಪೂಜೇರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.