ಅಥಣಿ : ವಸತಿ ನಿಲಯದ ಆವರಣದಲ್ಲಿ ಡೆತ್ ನೋಟ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ
ವಸತಿ ನಿಲಯದ ಆವರಣದಲ್ಲಿ ಡೆತ್ ನೋಟ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ
ಅಥಣಿ ಜೂ 17 : 10 ನೇ ತರಗತಿಯ ವಿದ್ಯಾರ್ಥಿಯೋರ್ವ ಡೆತ್ ನೋಟ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ನಡೆದಿದೆ
ಗ್ರಾಮದ ಪ್ರೌಢ ಶಾಲೆಯ ವಸತಿ ನಿಲಯದ ಆವರಣದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ವಿಜಯಪುರ ಜಿಲ್ಲೆಯ ಕೆಂಗಲಗುತ್ತಿ ಗ್ರಾಮದ 17 ವರ್ಷದ ಸದಾಶಿವ ಜಯವಂತ ಮಗದುಮ್ ಎಂದು ಗುರುತಿಸಲಾಗಿದೆ. ಈತ ಚಮಕೇರಿ ಗ್ರಾಮದ ಶ್ರೀ ಶಿವಲಿಂಗೆಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿದ್ದ. ಇನ್ನು ಮಗನ ಸಾವಿನ ವಿಚಾರ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಎಂಟು ದಿನಗಳ ಹಿಂದೆಯಷ್ಟೇ ಈ ವಿದ್ಯಾರ್ಥಿ ವಸತಿ ಶಾಲೆಗೆ ಆಗಮಿಸಿದ್ದ. ವಿದ್ಯಾರ್ಥಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಐಗಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ