ಗೋಕಾಕ:ದಲಿತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಮನವಿ
ದಲಿತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಮನವಿ
ಗೋಕಾಕ ಜೂ 19 : ದಲಿತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ತಾಲೂಕಿನ ಬೆಣಚಿನಮರಡಿ ಗ್ರಾಮದ ದಲಿತ ಸಮುದಾಯದ ಮುಖಂಡರು ಸೋಮವಾರದಂದು ಇಲ್ಲಿಯ ತಹಶೀಲ್ದಾರ ಕಾರ್ಯಾಲಯದಲ್ಲಿ ತಹಶೀಲ್ದಾರ ಹಾಗೂ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಬೆಣಚಿನಮರಡಿ ಗ್ರಾಮದಲ್ಲಿ ದಲಿತ ಸಮುದಾಯದ 2ರಿಂದ 3 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು ಮೂಲಭೂತ ಸೌಲಭ್ಯಗಳಾದ ವಸತಿ,ಶೌಚಾಲಯ,ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ, ಸ್ವಂತ ನಿವೇಶನ, ಶವಸಂಸ್ಕಾರ ಮಾಡಲು ಜಾಗೆ ಇಲ್ಲದೇ ವಂಚಿತಗೊಂಡಿದ್ದಾರೆ. ದಲಿತ ಸಮುದಾಯದವರು ಹಲವಾರು ಸಲ ಪ್ರತಿಭಟನೆ ಮಾಡಿ ಹೋರಾಟ ಮಾಡಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಸಂಬಂಧಿಸಿದ ಮೇಲಾಧಿಕಾರಿಗಳು ದಲಿತರ ತಾಳ್ಮೆಯನ್ನು ಪರೀಕ್ಷಿಸದೇ ಆದಷ್ಟು ಬೇಗನೆ ದಲಿತ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಕಳೆದ ದಿ.15ರಂದು ದಲಿತ ವ್ಯಕ್ತಿಯ ಶವ ಸಂಸ್ಕಾರ ನಡೆಸಲು ಸ್ಮಶಾನ ಭೂಮಿ ಇಲ್ಲದ್ದರಿಂದ ಸುಮಾರು 3 ಗಂಟೆ ಕಾಲ ಶವವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದ್ದರು. ಬೆಣಚಿನಮರಡಿ ಗ್ರಾಮದ ಹರಿಜನರು ಕಳೆದ ಹಲವಾರು ವರ್ಷಗಳಿಂದ ಒಂದು ಮಾಲ್ಕಿ ಜಮೀನುದಲ್ಲಿ ಶವ ಸಂಸ್ಕಾರ ಮಾಡುತ್ತ ಬಂದಿದ್ದರು. ಈ ಜಮೀನದ ಮಾಲೀಕರು ಹರಿಜನರಿಗೆ ಶವ ಸಂಸ್ಕಾರ ನಡೆಸಲು ತಡೆವೊಡ್ಡಿದರು. ಇದರಿಂದ ಹರಿಜನರು ದಿಕ್ಕು ಕಾಣದಂತಾಗಿ ಶವವನ್ನು ರಸ್ತೆಯಲ್ಲಿ ಇಟ್ಟು ಟೈರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು ಇಂತ ಘಟನೆ ಮರುಕಳಿಸದಂತೆ ತಾಲೂಕಾಡಳಿತ ಎಚ್ಚೇತ್ತಕೊಳ್ಳಬೇಕೆಂದು ದಲಿತ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಶೋಕ ಸಿಂಗಾಡಿ, ಆನಂದ ಹರಿಜನ, ಕರೆಪ್ಪ ಹರಿಜನ, ರವಿ ಮಾದರ, ಚನ್ನಬಸಪ್ಪ ರುದ್ರಾಪೂರ, ಪುಂಡಲೀಕ ಲಟ್ಟಿ, ಉಳವೇಶ ಗಿಗ್ಗಿ, ಸಂತೋಷ ರಾಮದುರ್ಗ, ಶಿವಯ್ಯ ಹಿರೇಮಠ,ಗೋಪಾಲ ಹರಿಜನ, ಕಲ್ಲಪ್ಪ ತಳವಾರ, ಬಸವರಾಜ ಮಾದರ, ಪುಂಡಲೀಕ ಗೋಣಿ, ಉಮೇಶ ಮಾದಿಗ,ಬಾಳೇಶ ಹರಿಜನ ಸೇರಿದಂತೆ ಇತರರು ಇದ್ದರು.