ಮೂಡಲಗಿ:ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರವಹಿಸಿವೆ : ಪ್ರೋ.ಸಂಗಮೇಶ
ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರವಹಿಸಿವೆ : ಪ್ರೋ.ಸಂಗಮೇಶ
ಮೂಡಲಗಿ ಜು 7 : ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗವು ಅಸ್ತವ್ಯಸ್ಥವಾದಾಗ ಸರಿಯಾದ ದಿಕ್ಕಿನತ್ತ ಸಾಗುವಂತೆ ಮಾಡುವ ಜವಾಬ್ದಾರಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗಕ್ಕಿದೆ. ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪತ್ರಿಕೆಯು ಪ್ರಮುಖ ಪಾತ್ರವಹಿಸಿದೆ ಎಂದು ಮೂಡಲಗಿಯ ಮಕ್ಕಳ ಸಾಹಿತಿ ಪ್ರೋ.ಸಂಗಮೇಶ ಗುಜಗೊಂಡ ಹೇಳಿದರು.
ಅವರು ಸ್ಥಳೀಯ ಶ್ರೀ ಮಂಜುನಾಥ ಶಿಕ್ಷಣ ಸಂಸ್ಥೆಯ ಸೈನಿಕ ಶಾಲೆಯಲ್ಲಿ ಮೂಡಲಗಿ ತಾಲೂಕ ಪ್ರೇಸ್ ಅಸೋಸಿಯೇಶನ್ ಹಾಗೂ ಕರ್ನಾಟಕ ಪತ್ರಕರ್ತರ ಸಂಘ, ಮೂಡಲಗಿ ಘಟಕದ ಆಶ್ರಯದಲ್ಲಿ ಶನಿವಾರ ಜರುಗಿದ ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ, ಖಡ್ಗಕ್ಕಿಂತ ಲೇಖನಿ ಹರಿತವಾದದ್ದು. ಪತ್ರಿಕಾರಂಗವು ಪ್ರಜಾಪ್ರಭುತ್ವ ದೇಶದ ಆಧಾರ ಸ್ತಂಭವಾಗಿದೆ. ಪತ್ರಿಕಾರಂಗವೂ ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗದೇ ಸಮಾಜದ ಎಲ್ಲ ಅಂಕುಡೊಂಕುಗಳನ್ನು ತಿದ್ದಿ ಸಮಾಜದ ಅಭಿವೃದ್ದಿಗೆ ಸ್ಪಂದಿಸಬೇಕು ಎಂದರು.
ಮಾಹಿತಿ ಹಕ್ಕು ಹೋರಾಟಗಾರ ಭೀಮಶಿ ಗಡಾದ ಅವರು ಮಾಹಿತಿ ಹಕ್ಕು ಕಾನೂನು ಕುರಿತು ಮಾತನಾಡುತ್ತಾ, ತಂತ್ರಜ್ಞಾನದ ಇಂದಿನ ಯುಗದಲ್ಲಿ ಜಗತ್ತು ಜಾಲಾಡಿಸುವ ಅಂತರ್ಜಾಲವಿದ್ದರೂ ಪತ್ರಿಕೆ ಓದಿದಾಗ ದೊರೆಯುವ ಸಮಾಧಾನ- ಆನಂದ ಅಂತರ್ಜಾಲದಲ್ಲಿ ಸಿಗುವುದಿಲ್ಲ. ಪತ್ರಿಕೆಗಳು ಸರ್ಕಾರದ ಮತ್ತು ಸಮಾಜದ ನಡುವಿನ ಸೇತುವೆಯಾಗಿವೆ. ಪ್ರತಿಕೆಗೆ ರಾಜಕಾರಣವನ್ನು ಅಲ್ಲೋಲ ಕಲ್ಲೋಲ ಮಾಡುವ ಶಕ್ತಿ ಇದೆ. ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದರು.
ಎಸ್. ಆರ್ ಸೋನವಾಲ್ಕರ ಮಾತನಾಡಿ, ಪತ್ರಕರ್ತರು ಆಸೆ ಆಮಿಷಗಳಿಗೆ ಒಳಗಾಗದೇ ನಿಷ್ಪಕ್ಷಪಾತವಾಗಿ ವರದಿಮಾಡಬೇಕು. ಸಮಾಜ ಸುಧಾರಣೆಗಾಗಿ ಶ್ರಮಿಸುತ್ತಿರುವ ಪತ್ರಕರ್ತರಿಗೆ ಸಮಾಜದಲ್ಲಿ ಗೌರವ ನೀಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿ.ಬಿ ಹಂದಿಗುಂದ ಮಾತನಾಡಿ, ದಾಖಲೆಗಳಿಗಾಗಿ ಮುದ್ರಣ ಮಾಧ್ಯಮವೂ ಶ್ರೇಷ್ಟವಾಗಿದೆ. ಎಲೆಮರೆಯ ಕಾಯಿಯಂತೆ ಸಮಾಜ ಕಾರ್ಯಗಳನ್ನು ಮಾಡುವ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಪತ್ರಕರ್ತರು ಮಾಡಬೇಕಾಗಿದೆ ಎಂದರು.
ಪತ್ರಕರ್ತ ಬಿ.ಪಿ ಬಂದಿ ಪ್ರಸ್ತಾವಿಕವಾಗಿ ಮಾತನಾಡಿದರು. ಮೂಡಲಗಿ ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಶ್ರೀಪಾದಬೋದ ಸ್ವಾಮಿಜಿ ಸಾನಿಧ್ಯವಹಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಮತ್ತು ಸಮಾಜ ಒಡೆಯುವ ಕೆಲಸ ಯಾರು ಮಾಡದೇ ದೇಶ ಅಭಿವೃದ್ದಿಗಾಗಿ ಒಂದಾಗಬೇಕು ಎಂದು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಪೆನ್ನು ನೀಡಲಾಯಿತು ಮತ್ತು ಮಂಡಲಗಿರಿ ತೋಂಟದಾರ್ಯ ನಾಟಕ ಸಂಘದ ಹಾಸ್ಯ ಕಲಾವಿದ ಶಿವೂ ಮುಧೋಳ ಇವರನ್ನು ಸತ್ಕಾರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಜಯ ಸೋನಾವಲ್ಕರ, ಅಜೀಜ ಡಾಂಗೆ, ಅನ್ವರ ನದಾಫ, ಪುರಸಭೆ ಮುಖ್ಯಾಧಿಕಾರಿ ಬಿ.ಬಿ.ಗೋರೊಶಿ, ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಕರ್ನಾಟಕ ಪತ್ರಕರ್ತ ಸಂಘದ ಅಧ್ಯಕ್ಷ ಎಲ್.ಸಿ ಗಾಡವಿ, ಕಾರ್ಯದರ್ಶಿ ಕೃಷ್ಣಾ ಗಿರೆಣ್ಣವರ, ಪ್ರೇಸ್ ಅಸೋಸಿಯೇಶನ್ ಅಧ್ಯಕ್ಷ ಸುಭಾಸ ಗೊಡ್ಯಾಗೋಳ, ಕಾರ್ಯದರ್ಶಿ ವ್ಹಿ.ಎಚ್.ಬಾಲರಡ್ಡಿ, ಲಕ್ಷ್ಮಣ ಅಡಿಹುಡಿ, ಎಸ್.ಎಮ್.ಚಂದ್ರಶೇಖರ, ಸುಧೀರ ನಾಯರ್, ಮಹಾದೇವ ನಡುವಿನಕೇರಿ, ಶಿವಾನಂದ ಹಿರೇಮಠ, ಶಿವಾನಂದ ಮರಾಠೆ, ರಾಮಣ್ಣ ಮಂಟೂರ, ಈಶ್ವರ ಗಾಡವಿ, ಶಿವಬಸು ಗಾಡವಿ, ಶ್ರೀನಿವಾಸ ಗಿರೆಣ್ಣವರ, ರಮೇಶ ಉಪ್ಪಾರ ಮತ್ತಿತರರು ಉಪಸ್ಥಿತರಿದ್ದರು.