ಗೋಕಾಕ: ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುಲು ಸಾಧ್ಯ : ಶಾಸಕ ಬಾಲಚಂದ್ರ
ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುಲು ಸಾಧ್ಯ : ಶಾಸಕ ಬಾಲಚಂದ್ರ
ಗೋಕಾಕ ಜೂ 3: ಶಿಕ್ಷಕರ ವೈಯಕ್ತಿಕ ಕಾಳಜಿಯಿಂದಾಗಿ ಮೂಡಲಗಿ ವಲಯವು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ವಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿರುವುದು ಶ್ಲಾಘನೀಯವೆಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು.
ಇಲ್ಲಿಗೆ ಸಮೀಪದ ನಲ್ಲಾನಟ್ಟಿ ಗ್ರಾಮದಲ್ಲಿ ಶನಿವಾರದಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಮಪ್ಪ ಯ. ಕುಳ್ಳೂರ ಸರ್ಕಾರಿ ಪ್ರೌಢ ಶಾಲೆಗಳ ಜಂಟಿ ಆಶ್ರಯದಲ್ಲಿ ನಡೆದ ಅರಭಾವಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮಲ್ಲಿರುವ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಚೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಶಿಕ್ಷಕರ ಕಾಳಜಿ ಮೆಚ್ಚುವಂತಹದ್ದು. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದ್ದಾರೆ. ಇದಕ್ಕೆ ಪಾಲಕರ ಸಹಕಾರ, ಶಿಕ್ಷಕರ ಕಾಳಜಿಯೇ ಕಾರಣವಾಗಿದೆ ಎಂದು ಹೇಳಿದರು.
ಅರಭಾವಿ ಮತಕ್ಷೇತ್ರದಲ್ಲಿ ಶೈಕ್ಷಣಿಕ ರಂಗದ ಸುಧಾರಣೆಗೆ ಸಾಕಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ.
ಶಿಥಿಲಗೊಂಡಿರುವ ಶಾಲಾ ಕಟ್ಟಡಗಳ ದುರಸ್ತಿ, ಶಿಕ್ಷಕರ ಸಮಸ್ಯೆಗಳನ್ನು ನೀಗಿಸಲಾಗುತ್ತಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಸರ್ಕಾರಿ ಪ್ರೌಢ ಶಾಲೆಗಳು, ವಸತಿ ನಿಲಯಗಳನ್ನು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಂಜೂರು ಮಾಡಿಸಲಾಗಿದೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಿತಕ್ಕನುಗುಣವಾಗಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳಿಗೆ ಉನ್ನತ ವ್ಯಾಸಂಗ ನೀಡುವಲ್ಲಿ ಶ್ರಮಿಸುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾರ್ಥಿಗಳು ಯಾವುದರಲ್ಲೂ ಕಡಿಮೆ ಇಲ್ಲದಂತೆ ನಗರ ಪ್ರದೇಶಗಳಿಗಿಂತ ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.
ನಲ್ಲಾನಟ್ಟಿಯ ಹಿರಿಯ ಪ್ರಾಥಮಿಕ ಶಾಲೆಯನ್ನು ಶಾಸಕರ ಮಾದರಿ ಶಾಲೆಯನ್ನಾಗಿ ಮಾಡುವುದಾಗಿ ಭರವಸೆ ನೀಡಿದ ಅವರು, ಮೂಡಲಗಿ ವಲಯದ ವಿದ್ಯಾರ್ಥಿಗಳ ಹೆಮ್ಮೆಯ ಸಾಧನೆಗೆ ಶ್ರಮಿಸುತ್ತಿರುವ ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರನ್ನು ಅಭಿನಂದಿಸಿದರು.
ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಹಾಗೂ ಭೂ-ದಾನಿ ಕಾಮಪ್ಪ ಕುಳ್ಳೂರ ವಹಿಸಿದ್ದರು.
ನಲ್ಲಾನಟ್ಟಿ ಗ್ರಾಪಂ ಅಧ್ಯಕ್ಷೆ ಲಕ್ಕವ್ವ ಕುಳ್ಳೂರ, ಬಳೋಬಾಳ ತಾಪಂ ಸದಸ್ಯೆ ಸರಸ್ವತಿ ಪೂಜೇರಿ, ಶಿಂಧಿಕುರಬೇಟ ಜಿಪಂ ಸದಸ್ಯೆ ಮೀನಾಕ್ಷಿ ಜೋಡಟ್ಟಿ, ಬಸವಂತ ಕಮತಿ, ಪರಸಪ್ಪ ಮೇಲ್ಮಟ್ಟಿ, ಗ್ರಾಪಂ ಉಪಾಧ್ಯಕ್ಷ ಅಡಿವೆಪ್ಪ ಎಂಟೆತ್ತಿನವರ, ತಾಪಂ ಮಾಜಿ ಸದಸ್ಯರಾದ ವೆಂಕಪ್ಪ ಅರಭಾವಿ, ನಾಗಪ್ಪ ಮಂಗಿ, ನ್ಯಾಯವಾದಿಗಳಾದ ಎಸ್.ಎಸ್. ಪಾಟೀಲ, ಮುತ್ತೆಪ್ಪ ಕುಳ್ಳೂರ, ಎಸ್‍ಡಿಎಂಸಿ ಅಧ್ಯಕ್ಷ ಶಿದ್ರಾಮ ಕುಳ್ಳೂರ, ಬಸಪ್ಪ ಕುರಿ, ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ, ಬಿಸಿಯೂಟದ ಸಹಾಯಕ ನಿರ್ದೇಶಕ ಎಂ.ಡಿ. ಬೇಗ, ಗ್ರಾಮ ಪಂಚಾಯತಿ ಹಾಗೂ ಎಸ್.ಡಿ.ಎಂ.ಸಿ.ಗಳ ಸದಸ್ಯರುಗಳು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ, ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯಾಗಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕೊಡುಗೆ ಅಪಾರವಾಗಿದೆ. ಸ್ವಂತ ಖರ್ಚಿನಲ್ಲಿ ಗೌರವ ಶಿಕ್ಷಕರನ್ನು ನಿಯೋಜಿಸಿ ಶಿಕ್ಷಕರ ಕೊರತೆಯನ್ನು ನೀಗಿಸುತ್ತಿದ್ದಾರೆ. ಇಂತಹ ಜನಪರ ಶಾಸಕರು ಎಲ್ಲರಿಗೂ ಸಿಗಬೇಕು. ನಿಜಕ್ಕೂ ನೀವೆಲ್ಲ ಪುಣ್ಯವಂತರು. ಮೂಡಲಗಿ ಶೈಕ್ಷಣಿಕ ವಲಯದ ಸಾಧನೆಯನ್ನು ಗುಣಗಾನ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಸ್ವಾಗತಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಕ್ಕಳಿಗೆ ಉಚಿತ ಬೈಸಿಕಲ್, ಶಾಲಾ ಪಠ್ಯಪುಸ್ತಕಗಳನ್ನು ವಿತರಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸಿದರು.
ಬಾಲಚಂದ್ರ ಜಾರಕಿಹೊಳಿ ಶಾಸಕರು:
” ಅರಭಾವಿ ಕ್ಷೇತ್ರದಲ್ಲಿರುವ ಶಾಲೆಗಳ ದುರಸ್ತಿ ಕಾರ್ಯಗಳಿಗಾಗಿ ಅಂದಾಜು 6.50 ಕೋಟಿ ರೂ.ಗಳ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ. ಇದರಿಂದ ಶಿಥಿಲಗೊಂಡಿರುವ ಶಾಲಾ ಕೊಠಡಿಗಳ ದುರಸ್ತಿ ಹಾಗೂ ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುವುದು. 3.50 ಕೋಟಿ ರೂ.ಗಳನ್ನು ಖಾಸಗಿ ಕಂಪನಿಗಳಿಂದ ದೇಣಿಗೆ ರೂಪದಲ್ಲಿ ಪಡೆಯಲಾಗುವುದು. ಇನ್ನುಳಿದ ಹಣವನ್ನು ಶಿಕ್ಷಣ ಇಲಾಖೆಯ ಅನುದಾನದಲ್ಲಿ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ”.