ಬೆಳಗಾವಿ:ಸಿಎಂ ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆಯೇ ಉ.ಕ ಹೋರಾಟಕ್ಕೆ ಕಾರಣ : ಮಾಜಿ ಸಿಎಂ ಯಡಿಯೂರಪ್ಪ
ಸಿಎಂ ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆಯೇ ಉ.ಕ ಹೋರಾಟಕ್ಕೆ ಕಾರಣ : ಮಾಜಿ ಸಿಎಂ ಯಡಿಯೂರಪ್ಪ
ಬೆಳಗಾವಿ ಜು 31 : ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಸದನದ ಒಳಗೆ ಮತ್ತು ಹೊರಗಡೆ ಬಿಜೆಪಿ ಹೋರಾಟ ಮಾಡಲಿದ್ದು , ಪ್ರತ್ಯೇಕ ರಾಜ್ಯದ ಹೋರಾಟ ಕೈಬಿಡುವಂತೆ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ
ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಬಿಜೆಪಿಯ 104 ಸದಸ್ಯರಿದ್ದಾರೆ. ಆಗಸ್ಟ್ 2ಕ್ಕೆ ಪ್ರತ್ಯೇಕ ರಾಜ್ಯಕ್ಕಾಗಿ ನೀಡಿರುವ ಬಂದ್ ಕರೆ ಹಿಂಪಡೆಯಬೇಕು. ಉ.ಕ. ಅಭಿವೃದ್ಧಿಗೆ ನಾವು ಹೋರಾಟ ಮಾಡುತ್ತೇವೆ ಎಂದರು.
ಏಕೀಕರಣದ ಬಳಿಕ ಬೃಹತ್ ಹೋರಾಟ ನಡೆಯುತ್ತಿದೆ. ಸತ್ಯಾಗ್ರಹದಂತಹ ಪರಿಸ್ಥಿತಿ ಎಂದೂ ನಡೆದಿರಲಿಲ್ಲ. ಸಿಎಂ ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆಯೇ ಈ ಹೋರಾಟಕ್ಕೆ ಕಾರಣ. ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಲೂರ ವೆಂಕಟರಾಯರು, ಫಗು ಹಳಕಟ್ಟಿ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತರ ನೇತೃತ್ವದ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣವಾಗಿದೆ. ನಿಜಾಮರ ಆಡಳಿತ, ಮುಂಬೈ, ಮದ್ರಾಸ್, ಕೇರಳ ಪ್ರಾಂತ್ಯದ ಅನೇಕ ಕನ್ನಡ ಪ್ರದೇಶಗಳನ್ನು ಒಂದು ಮಾಡಲಾಗಿದೆ. ಪ್ರಧಾನಿಯಾಗಿ ದೇವೇಗೌಡರು ಉತ್ತರ ಕರ್ನಾಟಕಕ್ಕೆ ನೀಡಿರುವ ಕೊಡುಗೆ ಏನು ಎಂದು ಬಿಎಸ್ವೈ ಪ್ರಶ್ನಿಸಿದರು. ಸಿಎಂ ಮಠಾಧೀಶರ ಮನವೊಲಿಸುವ ಬದಲು ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ಇಡೀ ರಾಜ್ಯಕ್ಕೆ ಅಕ್ಕಿ, ಬೇಳೆ, ವಿದ್ಯುತ್ ಸಿಗುವುದು ಉತ್ತರ ಕರ್ನಾಟಕದಿಂದ. ಆಲಮಟ್ಟಿ ಅಣೆಕಟ್ಟು ಎತ್ತರ ಮಾಡುವ ಕಾಮಗಾರಿ ನನೆಗುದಿಗೆ ಬಿದ್ದಿದೆ. ಹೈಕದಲ್ಲಿ 40 ಸಾವಿರ ಹುದ್ದೆ ಖಾಲಿಯಿದ್ದರೂ 3-4 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಕರ್ನಾಟಕದ ಜನತೆ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದರು.
ಶಾಸಕರಾದ ಉಮೇಶ ಕತ್ತಿ, ಅಭಯ ಪಾಟೀಲ, ಮಹಾದೇವಪ್ಪ ಯಾದವಾಡ, ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಎ.ಎಸ್.ಪಾಟೀಲ ನಡಹಳ್ಳಿ ಮತ್ತಿರರು ಇದ್ದರು.