ವಾಸ್ಕೋ: ಹೊರನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಗೋವಾ ಕನ್ನಡಿಗರ ಕಾರ್ಯ ಶ್ಲಾಘನೀಯ : ಮುರಘರಾಜೇಂದ್ರ ಶ್ರೀ
ಹೊರನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಗೋವಾ ಕನ್ನಡಿಗರ ಕಾರ್ಯ ಶ್ಲಾಘನೀಯ : ಮುರಘರಾಜೇಂದ್ರ ಶ್ರೀ
ವಾಸ್ಕೋ ಅ 4 : ಹೊರನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಗೋವಾ ಕನ್ನಡಿಗರ ಕಾರ್ಯ ಶ್ಲಾಘನೀಯ ಎಂದು ಗೋಕಾಕ ಶೂನ್ಯ ಸಂಪಾದನಾ ಮಠದ ಮ.ನಿ.ಪ್ರ. ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಶನಿವಾರ ರಂದು ಜುವಾರಿ ನಗರದಲ್ಲಿರುವ ಕಾಳಿದಾಸ ಶಿಕ್ಷಣ ಸಂಸ್ಥೆಯ ಯಲ್ಲಾಲಿಂಗೇಶ್ವರ ಕನ್ನಡ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಗೋವಾ ಕನ್ನಡಿಗರ ಸಂರಕ್ಷಣೆ ಮಾಡುವ ಜವಾಬ್ಧಾರಿಯನ್ನು ಹೊತ್ತು ಕಳೆದು 8 ವರ್ಷಗಳಿಂದ ಗೋವಾ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಿ ಗೋವಾದಲ್ಲಿ ಕನ್ನಡ ಭಾಷೆಯನ್ನು ಬೇರು ಮಟ್ಟದಲ್ಲಿ ಬೆಳೆಸಲು ಶ್ರಮಿಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಸೇವೆ ಇತರರಿಗೆ ಮಾದರಿಯಾಗಿದೆ. ಗೋವಾ ಕನ್ನಡಿಗರ ಸಮಸ್ಯೆಗಳನ್ನು ಪ್ರತಿಭಟಿಸಿ ಹಂತಹಂತವಾಗಿ ಅವುಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಕರ್ನಾಟಕ ಸರಕಾರ ಹಾಗೂ ಕನ್ನಡಿಗರಿಂದ ನಡೆದಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕ ಸರಕಾರದ ಗಮನಹರಿಸಿ ಗೋವಾ ಕನ್ನಡಿಗರಿಗೆ ಶಾಶ್ವತ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಪ್ರವೃತವಾಗಲಿದೆ ಎಂದು ಮ.ನಿ.ಪ್ರ. ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕ.ರ.ವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಗೋವಾ ರಾಜ್ಯದಲ್ಲಿರುವ ಎಲ್ಲ ಕನ್ನಡಪರ ಸಂಘಟನೆಗಳನ್ನು ಒಗ್ಗೂಡಿಸಿ ಗೋವಾ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದಲ್ಲದೆ ಗೋವಾ ರಾಜ್ಯದಲ್ಲಿ ಕನ್ನಡವನ್ನು ಇನ್ನಷ್ಟು ಗಟ್ಟಿಗೊಳಿಸಲು ಗೋವಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ತ ಸ್ಥಾಪಿಸಲು ಹೋರಾಟ ನಡೆಸಲಾಗುವುದೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ ಆರ್.ಎಮ್. ಬೆಳಗಲಿ ವಹಿಸಿದರು. ವೇದಿಕೆಯ ಮೇಲೆ ಕರಪರಟ್ಟಿಯ ಬಸವರಾಜ ಸ್ವಾಮಿಗಳು ಅಖಿಲ ಗೋವಾ ಕನ್ನಡ ಸಂಘದ ಅಧ್ಯಕ್ಷ ಹಣಮಂತಪ್ಪ ಶಿರೂರ, ಕ.ರ.ವೇ ಕಾರ್ಯದರ್ಶಿ ಸಾಧಿಕ ಹಲ್ಯಾಳ, ಅಖಿಲ ಗೋವಾ ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಪಡÀದಯ್ಯಸ್ವಾಮಿ ಹಿರೇಮಠ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಜಾತಾ ಮನ್ನಿಕೇರಿ, ಶ್ರೀ ಟಿ.ಪಿ. ಪಾಟೀಲ, ಸಂಸ್ಥೆಯ ಕಾರ್ಯದರ್ಶಿ ಶ್ರೀ ಬಿ.ಎಮ್. ಬಿಂಗಿ, ಬಸವರಾಜ ಹತ್ತರಕಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಮಲ್ಲಿಕಾರ್ಜುನ ನರಹಟ್ಟಿ ನಿರೂಪಿಸಿದರು. ಶ್ರೀಮತಿ ಸ್ವಾತಿ ಲಗೋಟಿ ವಂದಿಸಿದರು. ಈ ಸಂದರ್ಭದಲ್ಲಿ 8,9,ಮತ್ತು 10ನೇ ತರಗತಿಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಕ್ರಮವಾಗಿ 30 ಜೊತೆಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕ.ರ.ವೇ ಪದಾಧಿಕಾರಿಗಳಾದ ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ಮುಗುಟ ಪೈಲವಾನ , ಭರಮಣ್ಣಾ ಕಟ್ಟಿಮನಿ, ಮಹಾದೇವ ಮಕ್ಕಳಗೇರಿ, ನಿಜಾಮ ನದಾಫ, ಹನೀಫ ಸನದಿ, ರಾಮಣ್ಣಾ ಸಣ್ಣಲಗಮಣ್ಣವರ, ಮುತ್ತೆಪ್ಪಾ ಘೋಡಗೇರಿ, ಕಿರಣ ಕೊಳವಿ, ಬಸು ಗಾಡಿವಡ್ಡ, ಶಿವು ಪೂಜೇರಿ, ಮಹಾಂತೇಶ ಹಿರೇಮಠ, ಪರಸಪ್ಪ ಮಾಳ್ಯಾಗೋಳ, ಚನ್ನಮಲ್ಲಪ್ಪ ತಿಗಡಿ, ಫಾರೂಕ ಕಲ್ಲೋಳಿ, ಹಣಮಂತ ಅಮ್ಮಣಗಿ, ಯುಸೂಫ ಮುಲ್ಲಾ ಸೇರಿದಂತೆ ಮಡಗಾಂವ ಜವಾರಿ ನಗರ, ಬಿಚ್ಚೋಲಿಯಮ್ ವಾಸ್ಕೋ ಮೋತಿಡೋಂಗರನ ಕನ್ನಡ ಪರ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.