ಗೋಕಾಕ:ಛಾಯಾಗ್ರಾಹಕರು ತಮ್ಮ ವೃತ್ತಿಯನ್ನು ಪ್ರೀತಿಸಿ ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸಬೇಕು : ವಿರಾಜ ಮೋದಿ
ಛಾಯಾಗ್ರಾಹಕರು ತಮ್ಮ ವೃತ್ತಿಯನ್ನು ಪ್ರೀತಿಸಿ ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸಬೇಕು : ವಿರಾಜ ಮೋದಿ
ಗೋಕಾಕ ಅಗಸ್ಟ 19-ಸುಖದ ಸನ್ನವೇಶಗಳನ್ನು ಸೆರೆ ಹಿಡಿದು ಸದಾ ಜನರ ಸ್ಮರಣೆಯಲ್ಲಿ ಉಳಿಯುವಂಥ ವಿಶಿಷ್ಟ ಕಾರ್ಯ ಛಾಯಾಗ್ರಾಹಕರದ್ದಾಗಿದೆ ಎಂದು ಇಲ್ಲಿಯ ಜಿಇಎಸ್ ಬಿ.ಎಡ್. ಕಾಲೇಜಿನ ಪ್ರಾಚಾರ್ಯ ವಿರಾಜ ಮೋದಿ ಹೇಳಿದರು.
ಅವರು ರವಿವಾರದಂದು ನಗರ ರೋಟರಿ ರಕ್ತ ಭಂಡಾರ ಸಭಾಭವನದಲ್ಲಿ ತಾಲೂಕಾ ವೃತ್ತಿನಿರತ ಛಾಯಾಗ್ರಾಹಕರ ಸಂಘವು ಹಮ್ಮಿಕೊಂಡ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಛಾಯಾಗ್ರಾಹಕರು ತಮ್ಮ ವೃತ್ತಿಯನ್ನು ಪ್ರೀತಿಸಿ ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸಬೇಕು. ಅಧುನಿಕ ತಾಂತ್ರಿಕತೆ ಜೊತೆ ತಮ್ಮಲ್ಲಿರುವ ಕೌಶಲ್ಯತೆಯಿಂದ ಉತ್ತಮ ಛಾಯಾ ಚಿತ್ರಗಳನ್ನು ಜನತೆಗೆ ನೀಡಬೇಕು. ಸಂಘಟನೆಗಳಿಂದ ಧನಾತ್ಮಕ ಚಿಂತನೆಗಳಾಗಿ ಪರಸ್ಪರ ಸಹಕಾರದಿಂದ ತಮ್ಮ ವೃತ್ತಿಯಲ್ಲಿ ಪ್ರಗತಿ ಸಾಧಿಸಬೇಕು ಎಂದು ಹೇಳಿದ ಅವರು ಶ್ರೇಷ್ಠ ದಾನವಾದ ರಕ್ತದಾನ ಮಾಡುವದರ ಮೂಲಕ ಅರ್ಥಪೂರ್ಣವಾಗಿ ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಿಸುತ್ತಿರುವದು ಮಾದರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜ್ಞಾನದೀಪ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಜಿ.ವಿ. ಮಳಗಿ ಮಾತನಾಡಿ ಸಮಾಜದ ಓರೆಕೋರೆ ತಿದ್ದುವದರಲ್ಲಿ ಪತ್ರಿಕೆಯಷ್ಟೇ ಛಾಯಾಗ್ರಹಣವು ಪ್ರಮುಖ ಪಾತ್ರ ವಹಿಸುತ್ತದೆ. ಛಾಯಾಗ್ರಾಹಕರಲ್ಲಿ ಕ್ರಿಯಾಶೀಲತೆ, ಇಚ್ಛಾಶಕ್ತಿ, ಆತ್ಮಬಲ ಇದ್ದರೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಛಾಯಾಗ್ರಾಹಕರಾಗಬಹುದು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಗರದ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕರಾದ ಮಧುಸೂದನ ಸೋನಗೋಜೆ, ದಯಾನಂದ ಪೂಜೇರಿ, ರೋಟರಿ ಸೇವಾ ಸಂಸ್ಥೆ ಕಾರ್ಯದರ್ಶಿ ಸೋಮಶೇಖರ ಮಗದುಮ್ಮ, ಪತ್ರಕರ್ತ ದಿಲಾವರ ಬಾಳೇಕುಂದ್ರಿ ಅವರನ್ನು ಸತ್ಕರಿಸಲಾಯಿತು.
ವೇದಿಕೆ ಮೇಲೆ ಪದ್ಮಶ್ರೀ ಪ್ರಶಸ್ತಿ ಪುರಸ್ಕøತೆ ಸೀತವ್ವ ಜೋಡಟ್ಟಿ, ಸಂಘದ ಅಧ್ಯಕ್ಷ ಮುಖೇಶ ಹಾಗರಗಿ, ಕಾರ್ಯದರ್ಶಿ ರಾಜು ಗಂಡಗಾಳೆ ಇದ್ದರು.
ಗಂಗಾಧರ ಕಳ್ಳಿಗುದ್ದಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಕೆ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎಲ್.ಮಿರ್ಜಿ ನಿರೂಪಿಸಿದರು. ರಾಜಶೇಖರ ರಜಪೂರ ವಂದಿಸಿದರು.