ಗೋಕಾಕ:ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು : ಡಾ. ಆರ್.ಎಚ್. ಗುಣಕಿ
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು : ಡಾ. ಆರ್.ಎಚ್. ಗುಣಕಿ
ಗೋಕಾಕ ಅ 31 : ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಪೈಪೋಟಿ ಹೆಚ್ಚುತ್ತಿದ್ದು, ಸ್ಪರ್ಧೆ ಇಂದು ಅನಿವಾರ್ಯವಾಗಿದೆ. ಕ್ರಿಯಾತ್ಮಕ ಚಟುವಟಿಕೆಗಳನ್ನು ರೂಢಿಸಿಕೊಂಡರೆ ತಮ್ಮ ಗುರಿ ತಲುಪುವುದು ಸಾಧ್ಯ ಎಂದು ಡಾ. ಆರ್.ಎಚ್. ಗುಣಕಿ ಅಭಿಪ್ರಾಯ ಪಟ್ಟರು.
ಮರಡಿಮಠದಲ್ಲಿ ಬುಧವಾರ ಜರುಗಿದ ಶ್ರೀ ಕಾಡಸಿದ್ಧೇಶ್ವರ ಶಿಕ್ಷಣ ಸಮಿತಿಯ ಶ್ರೀ ಅದೃಶ್ಯ ಗುರುಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ 2018-19ನೇ ಸಾಲಿನ ಸಾಂಸ್ಕøತಿಕ, ಕ್ರೀಡಾ ಹಾಗೂ ಎನ್.ಎಸ್.ಎಸ್. ಚಟುವಟಿಕೆ ಮತ್ತು ಬಿ.ಎ, ಬಿ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ, ವಿದ್ಯಾರ್ಥಿಗಳು ಕಾಲೇಜಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. ಶಾರೀರಿಕ, ಮಾನಸಿಕ ಹಾಗೂ ಬೌದ್ಧಿಕವಾಗಿ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು. ಓದಿನಲ್ಲಿ ಶ್ರದ್ಧೆ, ಏಕಾಗ್ರತೆ, ಸಮಯ ಪ್ರಜ್ಞೆ, ಗುರು-ಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಪರಿಶ್ರಮವಿಲ್ಲದೇ ಫಲದೊರೆಯಲಾರದು. ಮನುಷ್ಯನಿಗೆ ಉನ್ನತವಾದ ಗುರಿಗಳಿರಬೇಕು. ಜಗತ್ತಿನ ಮಹಾನ್ ವ್ಯಕ್ತಿಗಳ ಜೀವನಾದರ್ಶಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅತಿಥಿಗಳಾಗಿ ಮಾತನಾಡಿದ ಸಮಿತಿಯ ಉಪಾಧ್ಯಕ್ಷರಾದ ಕೆ.ಬಿ. ಚೌಗಲಾ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಬೇಕು. ನಿರಂತರ ಅಧ್ಯಯನ ಮಾಡಬೇಕು. ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಸ್ಥಾನ-ಮಾನಗಳನ್ನು ಹೊಂದಬೇಕೆಂದು ಹೇಳಿದರು.
ಪದವಿ ಅಂತಿಮ, ದ್ವಿತೀಯ ವರ್ಷದ ವಿದ್ಯಾರ್ಥಿಗಳು, ಬಿ.ಎ, ಬಿ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪುಷ್ಪ ನೀಡುವುದರ ಮೂಲಕ ಸ್ವಾಗತಿಸಿದರು. ಸಾಂಸ್ಕøತಿಕ ಚಟುವಟಿಕೆಗಳ ಉದ್ಘಾಟನೆಯ ಅಂಗವಾಗಿ ಕು. ಭಾಗ್ಯಶ್ರೀ ಶಿಳ್ಳಿ ಭಾವಗೀತೆ ಹಾಡಿದರು. ಕು. ಪ್ರತಿಭಾ ಎಂ. ಮಾದಗೌಡ್ರ ಅನಿಸಿಕೆಗಳನ್ನು ಹೇಳಿದರು. ಪ್ರಾಚಾರ್ಯರಿಂದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಾ.ಶಿ.ಸಮಿತಿಯ ಚೇರಮನ್‍ರಾದ ಎ.ಜೆ.ಪಾಟೀಲ ವಹಿಸಿ ಮಾತನಾಡಿ, ಉನ್ನತ ಶಿಕ್ಷಣ ಎಲ್ಲರಿಗೂ ದೊರೆಯಲೆಂಬ ಉದ್ದೇಶದಿಂದ ಈ ಭಾಗದಲ್ಲಿ ಪದವಿ ಕಾಲೇಜನ್ನು ಆರಂಭಿಸಿ, ಈ ವರ್ಷದಿಂದ ವಾಣಿಜ್ಯ ವಿಭಾಗವನ್ನು ತೆರೆಯಲಾಗಿದ್ದು, ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಳ್ಳಬೇಕೆಂದು ಹೇಳಿದರು.
ಅತಿಥಿಗಳಾಗಿ ಸಮಿತಿಯ ನಿರ್ದೇಶಕರುಗಳಾದ ಕೆ.ಬಿ.ಹುಕ್ಕೇರಿ, ಬಿ.ಬಿ.ಹಿರೇಮಠ, ಡಾ. ಯು.ಬಿ.ಬಡೇಸಗೋಳ, ಡಾ. ಟಿ.ಕೆ.ಕೊನಕೇರಿ, ಕೆ.ಬಿ.ಗೋಕಾಕ, ಸಮಿತಿ ಕಾರ್ಯದರ್ಶಿ ಬಿ.ಎಂ.ಬರಗಾಲಿ, ಪ.ಪೂ.ಕಾಲೇಜಿನ ಪ್ರಾಚಾರ್ಯ ಪ್ರೊ. ಡಿ.ಡಿ.ಹಾದಿಮನಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾಲೇಜಿನ ಎಲ್ಲ ವರ್ಗ ಪ್ರತಿನಿಧಿಗಳು, ಪ್ರಾಧ್ಯಾಪಕ ಸಿಬ್ಬಂದಿ ವರ್ಗ ಹಾಜರಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥನೆ, ಸ್ವಾಗತಗೀತೆ ಹಾಡಿದರು. ಪ್ರಾಚಾರ್ಯ ಜಿ.ಎಂ.ಕಮತ ಸ್ವಾಗತಿಸಿದರು. ಪ್ರೊ. ರಾಜು ಕಂಬಾರ ನಿರೂಪಿಸಿದರು. ಪ್ರೊ. ವಿ.ಎಂ.ಮಾಳವದೆ ವಂದಿಸಿದರು.