ಗೋಕಾಕ:ಬೆಟಗೇರಿ ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಸರಿಸಮವಾದ ಮತಗಳು..!
ಬೆಟಗೇರಿ ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಸರಿಸಮವಾದ ಮತಗಳು..!
*ಮತ್ತೊಮ್ಮೆ ಚುನಾವಣೆ * ಅವಿರೋಧ ಆಯ್ಕೆಯಾಗದೇ ಚುನಾವಣೆ ಪ್ರಕ್ರಿಯೆ ನಡೆದು ಸಂಘದ ಹೊಸ ದಾಖಲೆ
ಅಡಿವೇಶ ಮುಧೋಳ
ಬೆಟಗೇರಿ ಸೆ 7 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಆಡಳಿತಾವಧಿ ಇನ್ನೂ 1 ವರ್ಷ 7 ತಿಂಗಳು ಬಾಕಿ ಇರುವಾಗಲೇ ಸಂಘದ ಅಧ್ಯಕ್ಷ ರಾಮಪ್ಪ ಬಳಿಗಾರ ಮತ್ತು ಉಪಾಧ್ಯಕ್ಷೆ ಉದ್ದವ್ವ ಬಾಣಸಿ ಸ್ವ ಇಚ್ಛೆಯಿಂದ ಕಳೆದ ಜುಲೈ 19 ರಂದು ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ತೆರವಾದ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ಸೆ.6 ರಂದು ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗದೇ, ಚುನಾವಣೆ ಅಖಾಡ ನಡೆದು ಸ್ಥಳೀಯ ಪಿಕೆಪಿಎಸ್ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕುರಿತು ಚುನಾವಣೆಯ ಪ್ರಕ್ರಿಯೆ ಹೊಸ ಇತಿಹಾಸ ದಾಖಲಿಸಿತು.
ಸಮಬಲವಾದ ಮತಗಳು: ಒಂದು ಗುಂಪಿನಿಂದ ಸದಾಶಿವ ಕುರಿ ಅಧ್ಯಕ್ಷ ಸ್ಥಾನಕ್ಕೆ, ಬಸವ್ವ ದೇಯಣ್ಣವರ ಉಪಾಧ್ಯಕ್ಷ ಸ್ಥಾನಕ್ಕೆ, ಇನ್ನೊಂದು ಗುಂಪಿನಿಂದ ಲಕ್ಷ್ಮಣ ಸವತಿಕಾಯಿ ಅಧ್ಯಕ್ಷ ಸ್ಥಾನಕ್ಕೆ, ಶಿವಪ್ಪ ಕತ್ತಿ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಸ್ಪರ್ಧಿಸಿದ್ದರು. ಸಂಘದ ಆಡಳಿತ ಮಂಡಳಿ ಒಟ್ಟು 10 ಜನ ಸದಸ್ಯರೆಲ್ಲರೂ ಮತ ಚಲಾವಣೆ ಮಾಡಿ, ಎರಡು ಗುಂಪಿನ ಅಭ್ಯರ್ಥಿಗಳಿಗೆ ಉಭಯ ಸ್ಥಾನಗಳಿಗೆ 5-5 ಮತಗಳು ಬಿದ್ದಿದ್ದರಿಂದ ಫಲಿಂತಾಶ ಸಮಬಲವಾಗಿದ್ದರಿಂದ ಸಂಘದ ಎರಡೂ ಸ್ಥಾನಗಳಿಗೆ ಮತ್ತೊಮ್ಮೆ ಚುನಾವಣೆ ಜರುಗುವಂತಾಗಿದೆ.
ಮತ್ತೊಮ್ಮೆ ಚುನಾವಣೆ: ಇಲ್ಲಿಯ ಪಿಕೆಪಿಎಸ್ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಗುರುವಾರದಂದು ನಡೆದ ಚುನಾವಣೆ ಸ್ಪರ್ಧೆಯಲ್ಲಿದ್ದ ಎರಡು ಗುಂಪಿನ ಉಭಯ ಸ್ಥಾನಗಳ ಅಭ್ಯರ್ಥಿಗಳಿಗೆ ಸಮನಾದ ಮತಗಳು ಬಿದ್ದಿದ್ದರಿಂದ ಚುನಾವಣಾಧಿಕಾರಿ ದೊಡ್ಡಮನಿ ಅವರು ಉಭಯ ಗುಂಪಿನ ಎರಡು ಸ್ಥಾನಗಳ ಸ್ಪರ್ಧಾ ಅಭ್ಯರ್ಥಿಗಳಿಗೆ ಟಾಸ್ ಇಲ್ಲವೇ ಲಾಟರಿ ಮೂಲಕ ಆಯ್ಕೆಯ ಪ್ರಕ್ರಿಯೆ ಕುರಿತು ಸಲಹೆ ನೀಡಿದರೂ ಉಭಯ ಗುಂಪಿನ ಎರಡು ಸ್ಥಾನಗಳಿಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಒಪ್ಪಿಗೆ ಸೂಚಿಸದೇ ನಿರಾಕರಿಸಿದ್ದರಿಂದ ಚುನಾವಣಾ ನಿಯಮದಂತೆ ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯ ದಿನಾಂಕ ನಿಗದಿ ಕುರಿತು ಸಂಘದ ಮುಖ್ಯ ಕಾರ್ಯನಿರ್ವಾಹಕರ ಮೂಲಕ ಸಂಘದ ಆಡಳಿತ ಮಂಡಳಿ ಸದಸ್ಯರಿಗೆ ಎರಡನೇಯ ನೋಟಿಸ್ ಜಾರಿ ಮಾಡಿ, ಮತ್ತೊಮ್ಮೆ ಚುನಾವಣೆ ಸಂಘದ ಕಾರ್ಯಾಲಯದಲ್ಲಿ ನಡೆಯಲಿದೆ ಎಂದು ಚುನಾವಣಾಧಿಕಾರಿ ಎಸ್.ಎ.ದೊಡ್ಡಮನಿ ತಿಳಿಸಿದರು.
ಸ್ಥಳೀಯರಲ್ಲಿ ಕುತೂಹಲ ಮೂಡಿಸಿದ್ದ ಇಲ್ಲಿಯ ಪಿಕೆಪಿಎಸ್ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗಾಗಿ ಚುನಾವಣೆ ಶಾಂತಿ ಸುವ್ಯವಸ್ಥೆಯಿಂದ ನಡೆಯಿತು. ಪೊಲೀಸ್ ಬಂದುಬಸ್ತ್ ಆಯೋಜಿಸಲಾಗಿತ್ತು. ಸ್ಥಳೀಯ ಎರಡು ಗುಂಪಿನ ರಾಜಕೀಯ ಮುಖಂಡರು, ಬೆಂಬಲಿಗರು, ಗ್ರಾಮಸ್ಥರು ಸಂಘದ ಆವರಣದ ಸುತ್ತಮುತ್ತಲೂ ಅಲ್ಲಲ್ಲಿ ತುದಿಗಾಲಿನಿಂದ ನಿಂತುಕೊಂಡು ಕುತೂಹಲದಿಂದ ಫಲಿಂತಾಶ ಆಲಿಸಿದ್ದು ವಿಶೇಷವಾಗಿತ್ತು.
ಚುನಾವಣಾಧಿಕಾರಿ ಎಸ್.ಎ. ದೊಡ್ಡಮನಿ, ಕುಲಗೋಡ ಪೊಲೀಸ್ ಠಾಣೆಯ ಪಿಎಸ್‍ಐ ಆರ್.ವೈ.ಬೀಳಗಿ, ಗೋಕಾಕ ಸಿಡಿಒ ಐ.ಎ.ಬೆಟಗೇರಿ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಡಿವೆಪ್ಪ ಮುರಗೋಡ, ಸಿಬ್ಬಂದಿ, ಪೊಲೀಸ್ ಪೇದೆಗಳು, ಮತ್ತಿತರರು ಇದ್ದರು.