RNI NO. KARKAN/2006/27779|Thursday, December 12, 2024
You are here: Home » breaking news » ಮೂಡಲಗಿ:ಆಧಾರ್ ಗೋಳು ಕೇಳುವವರು ಯಾರು? ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು.

ಮೂಡಲಗಿ:ಆಧಾರ್ ಗೋಳು ಕೇಳುವವರು ಯಾರು? ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು. 

ಆಧಾರ್ ಗೋಳು ಕೇಳುವವರು ಯಾರು?
ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು.

ಆಧಾರ್ ಸಮಸ್ಯೆ ಕೇಳುವವರಿಲ್ಲದೇ ಪರದಾಡುತ್ತಿರುವ ಮೂಡಲಗಿ ತಾಲೂಕಿನ ಜನತೆ.

ವಿಶೇಷ ವರದಿ : ಸುಧೀರ ನಾಯರ್

ಮೂಡಲಗಿ ಅ 1 : ಪಟ್ಟಣದಲ್ಲಿ ಆಧಾರ್ ಸೇವಾ ಕೇಂದ್ರಗಳ ಬಂದ್‍ನಿಂದಾಗಿ ಮೂಡಲಗಿ ತಾಲ್ಲೂಕು ಹಾಗು ಸುಮುತ್ತಲಿನ ಹಳ್ಳಿಗಳ ಜನತೆ ರೋಸಿ ಹೋಗಿದ್ದು ಸರ್ಕಾರದ ವಿರುದ್ದ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೂಡಲಗಿ ತಾಲೂಕು ವ್ಯಾಪ್ತಿಯಲ್ಲಿ ಅಂದಾಜು 3 ಲಕ್ಷ ಜನಸಂಖ್ಯೆ ಇದ್ದು ಕೇವಲ 50%ರಷ್ಟು ಜನರು ಮಾತ್ರ ಆಧಾರ್ ಕಾರ್ಡ್ ಹೊಂದಿದ್ದಾರೆ. ನಗರದಲ್ಲಿ 3ರಿಂದ4 ಖಾಸಗಿ ಆಧಾರ್ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಒಂದು ತಿಂಗಳಿನಿಂದ ಏಕಾ ಏಕಿಯಾಗಿ ಆಧಾರ್ ಸೇವಾ ಕೇಂದ್ರಗಳೂ ಬಂದ್ ಆಗಿರುವುದರಿಂದ ಹೊಸ ಆಧಾರ ಕಾರ್ಡ್ ಮತ್ತು ಆಧಾರ್ ತಿದ್ದುಪಡಿಗಾಗಿ ಅಲೆದಾಡುತ್ತಿರುವ ಜನರ ಗೋಳು ಕೇಳುವವರಿಲ್ಲದೇ ಸಾರ್ವಜನಿಕರು ಕಂಗಾಲಗಿದ್ದಾರೆ. ಪಟ್ಟಣದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮತ್ತು ಅಂಚೆ ಕಛೇರಿಯಲ್ಲಿ ಏರಡು ಆಧಾರ್ ಕೇಂದ್ರ ಕಾರ್ಯನಿರ್ವಸುತ್ತಿದ್ದು ಅಲ್ಲಿ ಜನ ಮುಗಿಬೀಳುತ್ತಿದ್ದಾರೆ. ಈ ಕೇಂದ್ರಗಳಲ್ಲಿ ದಿನಕ್ಕೆ 10 ಕಾರ್ಡಗಳನ್ನು ಮಾತ್ರ ಮಾಡುತ್ತಿದ್ದು. ಮುಂಜಾನೆ 5 ಗಂಟೆಗೆ ಕಛೇರಿಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಬಂದಿದೆ. 10ಕ್ಕಿಂತ ಹೆಚ್ಚು ಜನರು ಬಂದರೆ ಸಾರ್ವಜನಿಕರಿಗೆ 15 ದಿನ ಬಿಟ್ಟು ಬನ್ನಿ ಎಂದು ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಉತ್ತರ ನೀಡುತ್ತಿದ್ದಾರೆ.
ಸರಕಾರದ ಎಲ್ಲ ಯೋಜನೆಗಳಿಗೆ ಆಧಾರ ಕಾರ್ಡ್ ಕಡ್ಡಾಯಗೊಳಿಸಿಲ್ಲವಾದರು. ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಆಧಾರ್ ನಂಬರ್ ನೀಡುವ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ವಾಗತಾರ್ಹ. ಆದರೆ ಹೊಸ ಕಾರ್ಡಗಳು ಹಾಗೂ ಕಾರ್ಡ್‍ಗಳ ತಿದ್ದುಪಡಿಗೆ ಸೂಕ್ತವಾದ ಪರಿಹಾರ ಕಂಡುಕೊಳ್ಳದಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ. ಈ ಮೊದಲು ಖಾಸಗಿ ಆನ್‍ಲೈನ್ ಸೆಂಟರ್‍ನಲ್ಲಿ ಆಧಾರ ಕಾರ್ಡ್‍ಗಳನ್ನು ಆನ್‍ಲೈನ ಮುಖಾಂತರ ಮಾಡಿಕೊಡಲಾಗುತ್ತಿತ್ತು ಇದು ಜನರಿಗೆ ಅನುಕೂಲವಾಗಿತ್ತು. ಈಗ ಏಕಾಏಕಿ ಬಂದ್ ಮಾಡಿದ್ದರಿಂದಾಗಿ ಜನ ತೊಂದರೆ ಅನುಭವಿಸುವಂತಾಗಿದೆ.
ವಿದ್ಯಾರ್ಥಿಗಳಿಗೆ ಆಧಾರ್ ಗೋಳು: ಶಿಕ್ಷಣ ಇಲಾಖೆಯ ಆರ್.ಟಿ.ಇ ಅರ್ಜಿ ಮತ್ತು ವಿಧ್ಯಾರ್ಥಿ ವೇತನ ಇನ್ನು ಹಲವು ಯೋಜನೆಗೆ ಆಧಾರ್ ಕಾರ್ಡ ಮುಖ್ಯವಾಗಿದೆ. ಅಲ್ಲದೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಅಂಕಪಟ್ಟಿ ಆನ್ ಲೈನ್‍ನಲ್ಲಿ ಲಭ್ಯವಾಗುತ್ತಿದ್ದು ವಿದ್ಯಾರ್ಥಿಗಳು ಆಧಾರ್ ಕಾರ್ಡನಲ್ಲಿ ಇದ್ದಂತೆ ಹೆಸರು ನಮೂದಿಸಿ ಅಂಕಪಟ್ಟಿ ಪಡೆಯಬಹುದು. ಆದರೆ ಶಾಲಾ ದಾಖಲಾತಿ ಮತ್ತು ಆಧಾರ್ ಕಾರ್ಡನಲ್ಲಿ ಹೆಸರು ಸ್ವಲ್ಪ ಬದಲಾವಣೆ ಆಗಿದ್ದರು ಅಂಕಪಟ್ಟಿ ಪಡೆಯಲು ಸಾಧ್ಯವಾಗುವುದಿಲ್ಲ ಇದು ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾಗಿದೆ.
ಗರ್ಭಿಣಿಯರ ಪರದಾಟ: ಮದುವೆಯಾದ ಹೆಣ್ಣು ಮಕ್ಕಳು ತವರು ಮನೆಯ ಅಧಾರ್ ಕಾರ್ಡಗಳ ವಿಳಾಸ ಮತ್ತು ಹೆಸರು ತಿದ್ದುಪಡಿಗೊಳಿಸಿ ಗಂಡನ ಮನೆಯ ಹೆಸರಿನೊಂದಿಗೆ ಸೇರಿಸಿ ವರ್ಗಾಯಿಸಿಕೊಳ್ಳಬೇಕಾಗಿದೆ. ಅಲ್ಲದೇ ಸರ್ಕಾರ ಗರ್ಭಿಣಿ ಮತ್ತು ಬಾಣಂತಿಯರಿಗೆ ಹಲವು ಯೋಜನೆಗಳನ್ನು ಜಾರಿ ತಂದಿದೆ. ಈ ಎಲ್ಲ ಯೋಜನೆಗಳನ್ನು ಪಡೆಯಲೂ ಆಧಾರ್ ಕಾರ್ಡ ಕಡ್ಡಾಯವಾಗಿದ್ದು ಗರ್ಭಿಣಿಯರು ಮುಂಜಾನೆ 5ಗಂಟೆಗೆ ಬಂದು ಸರದಿ ಸಾಲಿನಲ್ಲಿ ನಿಲ್ಲುವ ದೃಶ್ಯ ಮನಕಲುಕುವಂತೆ ಮಾಡುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಹೋಗಬೇಕಾದರೂ ಆಧಾರ್ ಕಾರ್ಡ್ ಇಲ್ಲದೆ ಚಿಕಿತ್ಸೆಯು ಅಸಾಧ್ಯವಾಗಿದೆ ಎಂದು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

ಸಾರ್ವಜನಿಕರು, ಸಂಘಟನೆಗಳು ಇದರ ವಿರುದ್ದು ತಹಶೀಲ್ದಾರರಿಗೆ ಹಲವೂ ಬಾರಿ ಮನವಿ ಸಲ್ಲಿಸಿದರೂ ಯಾರೊಬ್ಬ ಅಧಿಕಾರಿಯೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು. ಸಾರ್ವಜನಿಕರ ಸಹನೆಯ ಕಟ್ಟೆ ಹೊಡೆಯುವ ಮುನ್ನ ಅಧಿಕಾರಿಗಳು ಎಚ್ಚೇತ್ತುಕೊಂಡು ಜನರಿಗೆ ಆಗುತ್ತಿರುವ ತೊಂದರೆ ಸರಿಪಡಿಸಲಿ ಎನ್ನುವುದೇ ಎಲ್ಲರ ಆಶಾಭಾವನೆಯಾಗಿದೆ.
ಪ್ಯಾನ್ ಕಾರ್ಡ್‍ಗೂ ಆಧಾರ್ ಕಂಟಕ: ಬ್ಯಾಂಕ್‍ಗಳಲ್ಲಿ ಗ್ರಾಹಕರು ವಹಿವಾಟು ನಡೆಸಲು ಮತ್ತು ಹೊಸ ಖಾತೆ ತೆರೆಯಲು ಕೇಂದ್ರ ಸರ್ಕಾರ ಪ್ಯಾನ್ ಕಾರ್ಡ ಕಡ್ಡಾಯಗೊಳಿಸಿದೆ. ಪ್ಯಾನ್ ಕಾರ್ಡಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿರುವುದರಿಂದ ಪ್ಯಾನ್ ಕಾರ್ಡಿಗೂ ಆಧಾರ ಕಾರ್ಡ್ ಕಡ್ಡಾಯದಿಂದಾಗಿ ರೈತರು, ವ್ಯಾಪಾರಸ್ಥರು ಪರದಾಡುವಂತಾಗಿದೆ.
ಗರ್ಭಿಣಿ ಮಹಿಳೆ : ಗರ್ಭಿಣಿ ಮಹಿಳೆಯರಿಗೆ ಆಧಾರ್ ಕಾರ್ಡ್ ಇಲ್ಲದೇ ಯಾವೂದೇ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆಧಾರ್ ಕಾರ್ಡ ತದ್ದುಪಡಿಗಾಗಿ ಮುಂಜಾನೆ 5 ಗಂಟೆಗೆ ಬರಬೇಕಾಗಿದೆ. ಪಟ್ಟಣದಲ್ಲಿನ ಆಧಾರ ಸೇವಾ ಕೇಂದ್ರಗಳು ಸರಿಯಾಗಿ ಜನರಿಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ಅದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕಾಗಿದೆ
ಶಿವರಡ್ಡಿ ಹುಚ್ಚರೆಡ್ಡಿ. ತಾಲೂಕು ಅಧ್ಯಕ್ಷರು.
ಜಯ ಕರ್ನಾಟಕ ಸಂಘಟನೆ ::

ನಗರದಲ್ಲಿರುವ ಖಾಸಗಿ ಆಧಾರ್ ಕೇಂದ್ರಗಳನ್ನು ಯಾವ ಕಾರಣಕ್ಕಾಗಿ ಏಕಾಏಕಿಯಾಗಿ ಬಂದ್ ಮಾಡಲಾಗಿದೆ ಎಂದು ತಿಳಿದಿಲ್ಲ. ಸರಕಾರದ ಎಲ್ಲ ಯೋಜನೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಸರ್ಕಾರದ ಆಧಾರ್ ಎಜೆನ್ಸಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರವಾಗಿ ಪಟ್ಟಣದಲ್ಲಿ ಹೆಚ್ಚಿನ ಆಧಾರ್ ಕೇಂದ್ರಗಳನ್ನು ಪ್ರಾರಂಭಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು.
ಜಿ.ಎಸ್ ಮಳಗಿ. ತಾಲೂಕಾ ದಂಡಧಿಕಾರಿ ಮೂಡಲಗಿ :

ಈಗಾಗಲೇ ಹೊಸ ಮೂಡಲಗಿ ತಾಲೂಕು ಮತ್ತು ಎಲ್ಲ ಗ್ರಾಮ ಪಂಚಾಯಿತಿ ಕಛೇರಿಗಳಲ್ಲಿ ಆಧಾರ್ ಸೇವಾ ಕೇಂದ್ರಗಳನ್ನು ಪ್ರಾರಂಭಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು.

Related posts: